ಬೆಂಗಳೂರು: ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಆರೋಪ ಪ್ರಕರಣದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಆರು ದಿನಗಳ ಕಾಲ ಎಸ್ಐಟಿ ವಶಕ್ಕೆ ನೀಡಿ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ. ಇದೇ ವೇಳೆ, ಮನೆಯಿಂದ ಊಟ ತರಿಸಿಕೊಳ್ಳಲು ಅನುಮತಿ ನೀಡಬೇಕೆಂದು ಪ್ರಜ್ವಲ್ ಪರ ವಕೀಲರು ಮನವಿ ಮಾಡಿದ್ದಾರೆ.
ಗುರುವಾರ-ಶುಕ್ರವಾರದ ಮಧ್ಯರಾತ್ರಿ ವಿದೇಶದಿಂದ ಪ್ರಜ್ವಲ್ ರೇವಣ್ಣ ಆಗಮಿಸುತ್ತಿದ್ದಂತೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಎಸ್ಐಟಿ ಅಧಿಕಾರಿಗಳು ಅವರನ್ನು ಬಂಧಿಸಿ ಕೋರ್ಟ್ಗೆ ಹಾಜರು ಪಡಿಸಿದ್ದರು. ಈ ವೇಳೆ, ಎಸ್ಐಟಿ ಪರ ವಕೀಲರು 15 ದಿನ ವಶಕ್ಕೆ ನೀಡಬೇಕೆಂದು ಕೋರಿದ್ದರು. ಮತ್ತೊಂದೆಡೆ, ಕೇವಲ ಒಂದು ದಿನ ಎಸ್ಐಟಿ ವಶಕ್ಕೆ ನೀಡಿದರೆ, ಸಾಕು ಎಂದು ಪ್ರಜ್ವಲ್ ಪರ ವಕೀಲರು ವಾದ ಮಂಡಿಸಿದ್ದರು. ಅಂತಿಮವಾಗಿ ಕೋರ್ಟ್ ಆರು ದಿನ ಎಸ್ಐಟಿ ವಶಕ್ಕೆ ಒಪ್ಪಿಸಿದೆ.
ಪ್ರಜ್ವಲ್ಗೆ ನ್ಯಾಯಾಧೀಶರ ಪ್ರಶ್ನೆ: ಕೋರ್ಟ್ನಲ್ಲಿ ಹಾಜರು ಪಡಿಸಿದ ಬಳಿಕ ನ್ಯಾಯಾಧೀಶರು ಪ್ರಜ್ವಲ್ ರೇವಣ್ಣ ಅವರಿಗೆ ಪ್ರಶ್ನೆಗಳನ್ನು ಕೇಳಿದರು. ''ನಿಮ್ಮ ಹೆಸರೇನು, ಎಲ್ಲಿ ಬಂಧಿಸಿದರು'' ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ''ನನ್ನ ಹೆಸರು ಪ್ರಜ್ವಲ್, ರಾತ್ರಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದರು'' ಎಂದು ಹೇಳಿದರು. ಇದೇ ವೇಳೆ, ''ವಿಶ್ರಾಂತಿ ಕೊಠಡಿ ಮತ್ತು ಶೌಚಾಲಯ ಶುದ್ದವಾಗಿರಲಿಲ್ಲ'' ಎಂದು ಪ್ರಜ್ವಲ್ ವಿವರಿಸಿದರು.
ಎಸ್ಐಟಿ ಪರ ವಕೀಲ ಅಶೋಕ್ ನಾಯಕ್ ತಮ್ಮ ವಾದ ಮಂಡಿಸಿ, ''ಆರೋಪಿಯ ಮೊಬೈಲ್ ಮಾತ್ರ ಸಿಕ್ಕಿದೆ. ಅದರಲ್ಲಿ ಫೇಸ್ ಲಾಕ್ ಅಳವಡಿಸಲಾಗಿದೆ. ಇವರೊಬ್ಬ ವಿಕೃತಕಾಮಿಯಾಗಿದ್ದು, ಪ್ರಕರಣ ಬೆಳಕಿಗೆ ಬಂದ ತಕ್ಷಣ ತನಿಖೆಯಿಂದ ತಪ್ಪಿಸಿಕೊಳ್ಳಲು ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದರು. ಆದರೆ, ವಿದೇಶಕ್ಕೆ ಪ್ರವಾಸಕ್ಕೆ ಹೋಗಿರುವುದಾಗಿ ಹೇಳಿದ್ದರು. ಈ ಹಿಂದೆ ಭಾರತಕ್ಕೆ ಬರಲು ಟಿಕೆಟ್ ಬುಕ್ ಮಾಡಿ ಬಳಿಕ ರದ್ದು ಮಾಡಿದ್ದಾರೆ. ಇನ್ನೇನು ವಿದೇಶದಲ್ಲಿ ಬಂಧಿಸುತ್ತಾರೆ ಎಂಬ ಅಂಶ ಗೊತ್ತಾದ ಹಿನ್ನೆಲೆಯಲ್ಲಿ ದೇಶಕ್ಕೆ ವಾಪಸ್ ಆಗಿದ್ದಾರೆ. ಪ್ರಕರಣದ ಸಮಂಜಸವಾದ ತನಿಖೆ ನಡೆಸಬೇಕಾಗುತ್ತದೆ. ಆದ್ದರಿಂದ ಎಸ್ಐಟಿ ವಶಕ್ಕೆ ನೀಡಬೇಕು. ಈ ಆರೋಪ ಜೀವಾವಧಿ ಶಿಕ್ಷೆ ನೀಡುವಂತಾಗಿದೆ'' ಎಂದು ತಿಳಿಸಿದರು.
ಮತ್ತೊಂದೆಡೆ, ಪ್ರಜ್ವಲ್ ಪರ ವಕೀಲ ಜಿ.ಅರುಣ್ ಪ್ರತಿವಾದ ಮಂಡಿಸಿ, ಆರೋಪಿ ವಿರುದ್ಧ ದಾಖಲಾಗಿರುವ ಪ್ರಕರಣ ನಾಲ್ಕು ವರ್ಷದ ಹಿಂದಿನದ್ದಾಗಿದೆ. ಇದು ಜಾಮೀನು ಸಹಿತ ಆರೋಪ ಆಗಿದೆ. ವಿನಾಕಾರಣ ನಮ್ಮ ಕಕ್ಷಿದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೇವಲ ಒಂದು ದಿನ ಎಸ್ಐಟಿ ವಶಕ್ಕೆ ನೀಡಿದರೆ ಸಾಕು'' ಎಂದು ಮನವಿ ಮಾಡಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಕೊನೆಗೆ ಆರು ದಿನ ಎಸ್ಐಟಿ ವಶಕ್ಕೆ ನೀಡಿ ಆದೇಶಿಸಿದರು. ಕೋರ್ಟ್ಗೆ ಹಾಜರು ಪಡಿಸುವ ಮೊದಲು ಪ್ರಜ್ವಲ್ ರೇವಣ್ಣ ಅವರನ್ನು ಶಿವಾಜಿ ನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ವೈದಕೀಯ ತಪಾಸಣೆಗೆ ಒಳಪಡಿಸಲಾಗಿತ್ತು.
ಇದನ್ನೂ ಓದಿ: ಬೆಂಗಳೂರಿನ ಕೋರ್ಟ್ಗೆ ಪ್ರಜ್ವಲ್ ರೇವಣ್ಣ ಹಾಜರು: ವಕೀಲರ ವಾದ - ಪ್ರತಿವಾದ ಹೇಗಿತ್ತು?