ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಪ್ರಕರಣದಲ್ಲಿ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಮತ್ತೆ ನಾಲ್ಕು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ. ಪ್ರಜ್ವಲ್ ಬಂಧನದ ಬಳಿಕ ಆರು ದಿನಗಳ ಕಾಲ ಎಸ್‌ಐಟಿ ವಶಕ್ಕೆ ನೀಡಿದ್ದ ನ್ಯಾಯಾಲಯ, ಇದೀಗ ಮತ್ತೆ ಜೂನ್ 10ರ ವರೆಗೆ ಪೊಲೀಸ್ ವಶಕ್ಕೆ ನೀಡಿ ಆದೇಶ ಹೊರಡಿಸಿದೆ.
ವಿಚಾರಣೆ ವೇಳೆ ಎಸ್‌ಐಟಿ ಪರ ವಕೀಲರು, "ಆರೋಪಿ ಪ್ರಜ್ವಲ್ ಅವರು ಮೊಬೈಲ್ ಬಗ್ಗೆ ಮಾಹಿತಿ ನೀಡಿಲ್ಲ. ತನಿಖೆಗೆ ಕಾಲಾವಕಾಶ ಸಾಕಾಗಿಲ್ಲ. ವಿದೇಶದಲ್ಲಿದ್ದ ಸಂದರ್ಭದಲ್ಲಿ ಹಣ ಸಂದಾಯದ ಬಗ್ಗೆ ಮಾಹಿತಿ ಇಲ್ಲ. ಯಾವುದೇ ಪ್ರಶ್ನೆಗೆ ಸರಿಯಾದ ಉತ್ತರ ನೀಡುತ್ತಿಲ್ಲ. ಏನೂ ತಪ್ಪು ಮಾಡಿಲ್ಲ ಎಂದು ಪದೇ ಪದೇ ಹೇಳುತ್ತಾರೆ. ಆದ್ದರಿಂದ ಸಮರ್ಪಕವಾಗಿ ವಿಚಾರಣೆ ನಡೆಸುವುದಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ ಮತ್ತಷ್ಟು ದಿನ ಎಸ್‌ಐಟಿ ವಶಕ್ಕೆ ನೀಡಬೇಕು" ಎಂದು ಮನವಿ ಮಾಡಿದರು.
"ಮೊಬೈಲ್ ನಾಶ ಪಡಿಸಿರುವ ಸಂಬಂಧ ತನಿಖೆ ನಡೆಯಬೇಕಾಗಿದೆ. ಮೊಬೈಲ್ ಮತ್ತೆ ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಪಡೆದುಕೊಳ್ಳಬೇಕಾಗಿದೆ. ಒಂದು ಮೊಬೈಲ್ ನಾಶಪಡಿಸಿರುವ ಕುರಿತು ತನಿಖೆ ನಡೆಸಬೇಕಾಗಿದೆ. ವಿದೇಶದಲ್ಲಿದ್ದಾಗ ಹಣ ಸಂದಾಯದ ಬಗ್ಗೆ ತನಿಖೆ ನಡೆಸಬೇಕಾಗಿದೆ. ನಾನು ಮೊಬೈಲ್ ಬಳಸುತ್ತಿರಲಿಲ್ಲ. ನನ್ನ ಆಪ್ತ ಸಹಾಯಕ ಬಳಕೆ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕಾದ ಅಗತ್ಯವಿದೆ. ಆದ್ದರಿಂದ ಎಸ್‌ಐಟಿ ವಶಕ್ಕೆ ನೀಡಬೇಕು" ಎಂದು ಕೋರಿದರು.
ಪ್ರಜ್ವಲ್ ಪರ ವಕೀಲರು, "ವಿದೇಶದಲ್ಲಿದ್ದಾಗ ಹಣ ಸಂದಾಯದ ಕುರಿತ ವಿಷಯಗಳು ತನಿಖೆಯ ಭಾಗವಾಗಿಲ್ಲ. ವಿದೇಶಿ ಪ್ರವಾಸಕ್ಕೂ ಪ್ರಕರಣಕ್ಕೂ ಸಂಬಂಧವೇ ಇಲ್ಲ. ಇದೇ ಕಾರಣಕ್ಕಾಗಿ ಮತ್ತೆ ಎಸ್‌ಐಟಿ ವಶಕ್ಕೆ ನೀಡುವುದು ಸರಿಯಾದ ಕ್ರಮವಲ್ಲ. ಅಲ್ಲದೆ, ನ್ಯಾಯಾಂಗ ವಶಕ್ಕೆ ಒಪ್ಪಿಸಬೇಕು" ಎಂದು ಕೋರಿದರು.
ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಮುಂದಿನ 4 ದಿನಗಳ ಕಾಲ ಎಸ್‌ಐಟಿ ವಶಕ್ಕೆ ನೀಡಿ ಆದೇಶಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಹಾಸನ ಮತ್ತು ಹೊಳೆ ನರಸೀಪುರದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಮಹಿಳೆಯರನ್ನು ಲೈಂಗಿಕವಾಗಿ ಬಳಕೆ ಮಾಡಿಕೊಂಡ ಆರೋಪವಿದೆ. ಆರೋಪ ಬೆಳಕಿಗೆ ಬರುತ್ತಿದ್ದಂತೆ ವಿದೇಶಕ್ಕೆ ತೆರಳಿದ್ದ ಪ್ರಜ್ವಲ್ ಮೇ 31ರಂದು ಬೆಂಗಳೂರಿಗೆ ಆಗಮಿಸಿದ್ದರು. ಇದಾದ ಬಳಿಕ ಎಸ್‌ಐಟಿ ಪೊಲೀಸರು ಪ್ರಜ್ವಲ್ ಅವರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.