ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಸೆಂಟ್ರಿಂಗ್ಗೆ ಬಳಸುವ ಮರದ ತುಂಡು ಬಿದ್ದು ಬಾಲಕಿ ಸಾವನ್ನಪ್ಪಿರುವ ದಾರುಣ ಘಟನೆ ವಿ.ವಿ.ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.
15 ವರ್ಷದ ತೇಜಸ್ವಿನಿ ಸಾವನ್ನಪ್ಪಿದ ಬಾಲಕಿ. ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ತೇಜಸ್ವಿನಿ, ಶಾಲೆ ಮುಗಿಸಿ ಮನಗೆ ವಾಪಸ್ ಬರುವಾಗ ಈ ದುರ್ಘಟನೆ ಸಂಭವಿಸಿದೆ. ಬಾಲಕಿಯ ಪೋಷಕರು ನೀಡಿದ ದೂರಿನ ಮೇರೆಗೆ ಕಟ್ಟಡ ಮಾಲೀಕರ ವಿರುದ್ಧ ನಿರ್ಲಕ್ಷ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ವಿವಿಪುರಂ ಠಾಣೆಯ ಕೂಗಳತೆ ದೂರದಲ್ಲಿ ಬಹು ಅಂತಸ್ತಿನ ಕಟ್ಟಡ ನಿರ್ಮಾಣವಾಗುತ್ತಿತ್ತು. ನಾಲ್ಕನೇ ಮಹಡಿಯಲ್ಲಿ ಸೆಂಟ್ರಿಂಗ್ಗೆ ಗಟ್ಟಿ ಕೂರಲು ಮರದ ತುಂಡಗಳನ್ನು ಅಳವಡಿಸಲಾಗಿತ್ತು. ದುರಾದೃಷ್ಟವತ್ ಕಟ್ಟಡದ ಕೆಳಗೆ ನಡೆದುಕೊಂಡು ಬಾಲಕಿ ಬರುವಾಗಲೇ ಆಕೆಯ ಏಕಾಏಕಿ ಮೇಲಿನಿಂದ ತುಂಡು ಬಿದ್ದಿದೆ. ಘಟನೆಯಲ್ಲಿ ಬಾಲಕಿಗೆ ಗಂಭೀರ ಗಾಯಗಳಾಗಿತ್ತು. ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಿದರೂ ಅಷ್ಟೊತ್ತಿಗಾಗಲೇ ಬಾಲಕಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರು ಸ್ಥಳದಲ್ಲೇ ಸಾವು