ಬೆಂಗಳೂರು: ರಾಜಧಾನಿಯಲ್ಲಿ ಹನಿ ನೀರಿಗೂ ಸಂಕಷ್ಟ ಶುರುವಾಗಿದೆ. ಕುಡಿಯಲು ನೀರಿಲ್ಲದೇ ಜನ ಪರದಾಡುತ್ತಿದ್ದಾರೆ. ಇತ್ತ ಪೀಣ್ಯ ಕೈಗಾರಿಕೆಗಳ ಕಾರ್ಮಿಕರು ಮತ್ತು ಮಷಿನ್ಗಳಿಗೂ ನೀರು ಸರಬರಾಜು ಕಡಿಮೆಯಾಗಿದೆ. ಇದೇ ಸ್ಥಿತಿ ಮುಂದುವರಿದರೆ ಸಾಕಷ್ಟು ಕಂಪನಿಗಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ನಮಗೆ ಕೂಡಲೇ ನೀರು ಕೊಡಿ ಎಂದು ಕೈಗಾರಿಕೆಗಳ ಮಾಲೀಕರು ಮನವಿ ಮಾಡುತ್ತಿದ್ದಾರೆ.
ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಆರೀಫ್ ಮಾತನಾಡಿ, ಹಿಂದೆ ಪೀಣ್ಯ ಕೈಗಾರಿಕಾ ಪ್ರದೇಶದ ಬೋರ್ವೆಲ್ ನೀರಿನಲ್ಲಿ ಹೆವಿ ಮೆಟಲ್ ಪತ್ತೆಯಾಗಿದೆ ಎನ್ನುವ ಕಾರಣಕ್ಕಾಗಿ ಸರ್ಕಾರ ಬೋರ್ವೆಲ್ಗಳನ್ನು ಕ್ಲೋಸ್ ಮಾಡಿಸಿತ್ತು. ಕಾವೇರಿ ನೀರನ್ನು ಮಾತ್ರ ಕೈಗಾರಿಕೆಗಳು ನೆಚ್ಚಿಕೊಂಡಿದ್ದವು. ಈಗ ಕಾವೇರಿ ನೀರಿನ ಪೂರೈಕೆ ನಿಂತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಪೀಣ್ಯ ಕೈಗಾರಿಕಾ ಪ್ರದೇಶದ ಸಾಕಷ್ಟು ಕಂಪನಿಗಳು ಮುಚ್ಚಿಕೊಂಡು ಹೋಗುವ ಸಾಧ್ಯತೆಗಳಿವೆ ಎಂದರು.
ಬೆಂಗಳೂರು ಮಹಾನಗರದ ಅತಿದೊಡ್ಡ ಕೈಗಾರಿಕಾ ವಲಯವಾಗಿರುವ ಪೀಣ್ಯ ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿ ಸುಮಾರು 16 ಸಾವಿರ ಕೈಗಾರಿಕೆಗಳಿವೆ. ಇಲ್ಲಿ 12 ಲಕ್ಷಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ನೀರಿಲ್ಲದ ಕಾರಣ ಶೇಕಡಾ 50 ರಷ್ಟು ಉದ್ಯಮ ಕುಂಠಿತಗೊಂಡಿದೆ. ಇದೀಗ ನೀರಿನ ಕೊರತೆಯಿಂದಾಗಿ ಕುಡಿಯುವ ನೀರಿಗೆ ಆದ್ಯತೆ ನೀಡಿ ಜಲಮಂಡಳಿ ಈ ಪ್ರದೇಶಕ್ಕೆ ಶೇ.60ರಷ್ಟು ನೀರಿನ ಪೂರೈಕೆ ಕಡಿತಗೊಳಿಸಿದೆ. ಇಲ್ಲಿನ ಬೋರ್ವೆಲ್ಗಳೂ ಬಹುತೇಕ ಬತ್ತಿವೆ ಎಂದು ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಆರೀಫ್ ಅಳಲು ತೋಡಿಕೊಂಡರು.
ಇಲ್ಲಿನ ಕೈಗಾರಿಕೆಗಳಿಗೆ ಸಮರ್ಪಕ ನೀರಿಲ್ಲ. ಕಾರ್ಮಿಕರಿಗೆ ಕೂಡ ನಿತ್ಯ ಶೌಚಾಲಯ ಬಳಕೆಗೂ ನೀರಿನ ಸಮಸ್ಯೆ ಎದುರಾಗಿದೆ. ನಗರದಲ್ಲಿ ನೀರಿಗೆ ಸಮಸ್ಯೆ ಹೆಚ್ಚಾದಂತೆ ಗೃಹ ಸಂಪರ್ಕಗಳಿಗೆ ಸಮರ್ಪಕ ನೀರು ಪೂರೈಸಬೇಕು ಎಂಬ ಉದ್ದೇಶದಿಂದ ವಾಣಿಜ್ಯ ಮತ್ತು ಕೈಗಾರಿಕೆಗಳಿಗೆ ನೀಡುತ್ತಿರುವ ನೀರನ್ನು ಜಲಮಂಡಳಿ ಕಡಿಮೆ ಮಾಡಿದೆ. ಅತಿ ಹೆಚ್ಚು ಕೈಗಾರಿಕೆಗಳನ್ನು ಹೊಂದಿರುವ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಶೇ 60ರಷ್ಟು ನೀರು ಕಡಿತ ಮಾಡಿರುವುದರಿಂದ ತೀವ್ರ ಸಮಸ್ಯೆ ತಲೆದೋರಿದೆ. ಶೌಚಾಲಯ ಬಳಕೆಗೆ ನೀರಿನ ಕೊರತೆ ಎದುರಾಗಿದೆ. ಊಟದ ಬಳಿಕ ಕೈ ತೊಳೆಯಲೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿಗೆ ಕ್ಯಾನ್‌ಗಳನ್ನು ಬಳಸುತ್ತಿದ್ದೇವೆ. ಶೌಚಗೃಹ ಬಳಕೆ, ಸ್ವಚ್ಛತೆಗೆ ಬಳಕೆಗೆ ನೀರಿನ ಪರದಾಟ ಉಂಟಾಗಿದೆ ಎಂದರು.
ಅಕ್ರಮ ನೀರಿನ ಟ್ಯಾಂಕರ್‌ಗಳು ವಶ; ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಎದುರಾಗಿದೆ ಸಂಕಷ್ಟ: ನಗರವು ತೀವ್ರ ನೀರಿನ ಕೊರತೆ ಎದುರಿಸುತ್ತಿದೆ. ಬತ್ತಿಹೋಗಿರುವ ಕೊಳವೆ ಬಾವಿಗಳು, ಕೆರೆಗಳ ಕಾರಣ ನೀರಿಗಾಗಿ ಟ್ಯಾಂಕರ್‌ನತ್ತ ನಗರದ ನಿವಾಸಿಗಳು ಮುಖ ಮಾಡಿದ್ದರು. ಆದರೆ, ಟ್ಯಾಂಕರ್ ನೋಂದಣಿ ಕಾರ್ಯ, ಇನ್ನೊಂದೆಡೆ ಅಕ್ರಮ ನೀರಿನ ಟ್ಯಾಂಕರ್‌ಗಳ ವಶಪಡಿಸಿಕೊಳ್ಳುವಿಕೆ ಮುಂದುವರಿದ ಕಾರಣದಿಂದ ಕೂಡ ನಿವಾಸಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಟ್ಯಾಂಕರ್ ನೀರು ಲಭ್ಯವಾಗದ ಕಾರಣ ಅಪಾರ್ಟ್‌ಮೆಂಟ್ ಮತ್ತು ಗೇಟೆಡ್ ಕಮ್ಯುನಿಟಿಗಳು ನೀರಿನ ಬಳಕೆಗೆ ನಿಯಮಗಳನ್ನು ವಿಧಿಸುತ್ತಿವೆ. ನಿರ್ಬಂಧಗಳನ್ನು ಹೇರುತ್ತಿವೆ ಎಂದು ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ಅಳಲು ತೋಡಿಕೊಳ್ಳುತ್ತಿದ್ದಾರೆ.
ಪ್ರಸಿದ್ಧ ಅಪಾರ್ಟ್‌ಮೆಂಟ್ ಸಂಕೀರ್ಣ ಪ್ರಕಟಿಸಿದ ನೋಟಿಸ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಗಮನಸೆಳೆಯುತ್ತಿದೆ. ನಮ್ಮ ನೀರು ಸರಬರಾಜಿಗೆ ಸಂಬಂಧಿಸಿದ ಸಂಕಷ್ಟಮಯ ಪರಿಸ್ಥಿತಿಯ ಬಗ್ಗೆ ನಿಮಗೆ ತಿಳಿಸಲು ವಿಷಾದಿಸುತ್ತೇವೆ. ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿರುವ ಪ್ರದೇಶಗಳಿಗೆ ನೀರು ಪೂರೈಕೆಗಾಗಿ ಆರ್‌ಟಿಒ ಮತ್ತು ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳು ಎಲ್ಲ ನೀರಿನ ಟ್ಯಾಂಕರ್‌ಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಈ ಕ್ರಮದ ಪರಿಣಾಮ ನಮ್ಮ ನೀರು ಸರಬರಾಜು ವ್ಯವಸ್ಥೆಯ ಮೇಲಾಗಿದೆ. ನೀರಿನ ಸಂಪುಗಳು ಖಾಲಿಯಾಗಿವೆ. ಅವುಗಳಲ್ಲಿ ನೀರು ಶೇಖರಣೆ ಮಾಡುವುದು ಸಾಧ್ಯವಾಗುತ್ತಿಲ್ಲ. ಓವರ್ ಹೆಡ್ ಟ್ಯಾಂಕ್‌ಗಳಲ್ಲಿ ಮಾತ್ರ ನೀರು ಇದ್ದು, ಗರಿಷ್ಠ ಒಂದು ಗಂಟೆ ಮಾತ್ರವೇ ನೀರು ಲಭ್ಯವಿರಲಿದೆ. ಇದಾದ ಬಳಿಕ ನೀರು ಲಭ್ಯ ಇರುವುದಿಲ್ಲ ಎಂದು ನೋಟಿಸ್ ನೀಡಿದ್ದಾರೆ.
ಇನ್ನು ದಿನಕ್ಕೆ ಅರ್ಧ ಬಕೆಟ್ ನೀರು ಬಳಸಿ ಎಂದು ಇಂದಿರಾ ನಗರದ ಅರ್ಪಾಟ್ಮೆಂಟ್ವೊಂದು ಸೂಚನೆ ನೀಡಿದೆ. ಮನೆಯ ಸದಸ್ಯರು ಸ್ನಾನ ಮಾಡಲು ದಿನಕ್ಕೆ ಅರ್ಧ ಬಕೆಟ್ ನೀರನ್ನು ಮಾತ್ರವೇ ಬಳಸಿ, ನೆಲ ಒರೆಸಲು, ಬಚ್ಚಲು ಮನೆ ತೊಳೆಯಲು ಹೆಚ್ಚಿಗೆ ನೀರನ್ನು ಪೋಲು ಮಾಡಬೇಡಿ, ಅನಗತ್ಯವಾಗಿ ವಾಷಿಂಗ್ ಮಷಿನ್ ಬಳಕೆ ಮಾಡಬೇಡಿ, ಅಕ್ವಾಗಾರ್ಡ್‌ನ ವೇಸ್ಟೇಜ್ ನೀರನ್ನು ಪಾತ್ರೆ ತೊಳೆಯಲು ಉಪಯೋಗಿಸಿ ಎಂದೂ ಸಲಹೆಗಳನ್ನು ನೀಡಿದೆ.
ಇದನ್ನೂ ಓದಿ: ಕುಡಿಯುವ ನೀರನ್ನು ಅನ್ಯ ಉದ್ದೇಶಕ್ಕೆ ಬಳಸಿದರೆ 5,000 ರೂಪಾಯಿ ದಂಡ: BWSSB ಆದೇಶ