ಬೆಂಗಳೂರು: "ಚುನಾವಣಾ ಬಾಂಡ್ ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪು ಕಾಂಗ್ರೆಸ್ ನಿಲುವನ್ನು ಎತ್ತಿಹಿಡಿದಿದೆ" ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದರು.
ವಿಧಾನಸೌಧಲ್ಲಿ ಮಾತನಾಡಿದ ಅವರು, ಚುನಾವಣಾ ಬಾಂಡ್ ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪು ವಿಚಾರವಾಗಿ ಪ್ರತಿಕ್ರಿಯಿಸಿ, "ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. ಈ ತೀರ್ಪು ಕಾಂಗ್ರೆಸ್ ನಿಲುವನ್ನು ಎತ್ತಿ ಹಿಡಿದಿದೆ. ಪ್ರಜಾಪ್ರಭುತ್ವದ ಮೌಲ್ಯವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ" ಎಂದು ಹೇಳಿದರು.
"ಈ ಸ್ಕೀಮ್ ಅನ್ನು ಮೋದಿ ಸರ್ಕಾರ ಜಾರಿಗೆ ತಂದಿತ್ತು. ಇದೊಂದು ಕಪ್ಪು ಹಣವನ್ನು ಬಿಳಿ ಹಣವಾಗಿ ಪರಿವರ್ತಿಸುವ ಸ್ಕೀಂ ಆಗಿತ್ತು. ಇದು ರಾಜಕೀಯ ಪಕ್ಷವೊಂದಕ್ಕೆ ಅಕ್ರಮವಾಗಿ ಹಣ ನೀಡುವ ವಿಧಾನವಾಗಿತ್ತು. ಈ ಸ್ಕೀಂನಿಂದ ಬಿಜೆಪಿ ಸುಮಾರು 6 ಸಾವಿರ ಕೋಟಿ ಹಣ ಪಡೆದಿದೆ" ಎಂದು ಆರೋಪಿಸಿದರು.
"ಈ ಸ್ಕೀಂನಿಂದ ಸಾರ್ವಜನಿಕರಿಗೆ ಏನಾದರೂ ಲಾಭ ಆಗಿದ್ಯಾ?. ಉದ್ಯಮಿಗಳು ಲಾಭ ಪಡೆದಿದ್ದಾರಾ?. ಇದೊಂದು ಹಿಂಬಾಗಿಲಿನಿಂದ ಹಣ ಪಡೆಯುವ ಸ್ಕೀಂ ಆಗಿತ್ತು. ಸುಪ್ರೀಂ ಕೋರ್ಟ್ ಇವತ್ತು ನೀಡಿದ ತೀರ್ಪು ಸತ್ಯಕ್ಕೆ ಹಿಡಿದ ಕನ್ನಡಿಯಾಗಿದೆ" ಎಂದರು.
ಸುಪ್ರೀಂ ತೀರ್ಪು ಏನು?: 2018ರ ಜನರಿಯಲ್ಲಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿ, ಜಾರಿಗೆ ತಂದಿದ್ದ ಈ ಚುನಾವಣಾ ಬಾಂಡ್ಗಳ ಪದ್ಧತಿಯನ್ನು ಇಂದು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಸಂವಿಧಾದ ಮಾಹಿತಿ ಮತ್ತು ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳನ್ನು ಈ ಯೋಜನೆ ಉಲ್ಲಂಘನೆ ಮಾಡುತ್ತದೆ. ಆದ್ದರಿಂದ ತಕ್ಷಣವೇ ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಆದೇಶಿಸಿದೆ.
ರಾಜಕೀಯ ನಿಧಿಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ ಗುರಿಯನ್ನು ಇದು ಹೊಂದಿದೆ ಎಂದು ಸರ್ಕಾರ ಹೇಳಿಕೊಂಡಿತ್ತು. ಭಾರತದ ಯಾವುದೇ ನಾಗರಿಕರು ಈ ಚುನಾವಣಾ ಬಾಂಡ್ಗಳನ್ನು ಖರೀದಿಸಬಹುದಾಗಿತ್ತು. ದೇಶದಲ್ಲಿ ಕಾನೂನು ಬದ್ಧವಾಗಿ ಸ್ಥಾಪಿತವಾದ ಸಂಸ್ಥೆ, ಘಟಕ ಅಥವಾ ವ್ಯಕ್ತಿ ಅಥವಾ ಇತರ ವ್ಯಕ್ತಿಗಳೊಂದಿಗೆ ಸೇರಿ ಜಂಟಿಯಾಗಿ ಚುನಾವಣಾ ಬಾಂಡ್ಗಳನ್ನು ಖರೀದಿಸಲು ಅವಕಾಶವಿತ್ತು. ಆದರೆ ಈ ಯೋಜನೆಯನ್ನು ವಿರೋಧಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ, ಯೋಜನೆಯನ್ನು ರದ್ದುಗೊಳಿಸುವಂತೆ ಸರ್ವಾನುಮತದ ತೀರ್ಪು ನೀಡಿದೆ.
ಇದನ್ನೂ ಓದಿ: ಚುನಾವಣಾ ಬಾಂಡ್ಗಳು ಸಂವಿಧಾನ ಬಾಹಿರ, ತಕ್ಷಣವೇ ರದ್ದು ಮಾಡಿ: ಸುಪ್ರೀಂಕೋರ್ಟ್