ಬೆಂಗಳೂರು: ತನ್ನೆಲ್ಲಾ ಬ್ಯಾಂಕ್ ವಹಿವಾಟುಗಳನ್ನು ಸ್ಥಗಿತಗೊಳಿಸಿ ರಾಜ್ಯ ಸರ್ಕಾರ ಬಿಸಿ ಮುಟ್ಟಿಸಿದ ಬೆನ್ನಲ್ಲೇ ಎಸ್‌ಬಿಐ ಹಾಗೂ ಪಿಎನ್‌ಬಿ ಬ್ಯಾಂಕ್ ವಿವಿಧ ನಿಗಮಗಳಿಗೆ 22 ಕೋಟಿ ರೂಪಾಯಿ ವಾಪಸ್ ನೀಡಿದೆ.
ಪಿಎನ್‌ಬಿ 12 ಕೋಟಿ ಮತ್ತು ಎಸ್‌ಬಿಐ 10 ಕೋಟಿ ರೂ.ಯನ್ನು ಸಂಬಂಧಿತ ನಿಗಮಗಳಿಗೆ ನೀಡಿವೆ. ಹಣಕಾಸು ಇಲಾಖೆ ಎಸ್‌ಬಿಐ ಹಾಗೂ ಪಿಎನ್‌ಬಿ ಬ್ಯಾಂಕ್ಗಳಲ್ಲಿನ ಸರ್ಕಾರಿ ಖಾತೆಗಳನ್ನು ರದ್ದುಗೊಳಿಸುವಂತೆ ಆಗಸ್ಟ್ 12ರಂದು ಸುತ್ತೋಲೆ ಹೊರಡಿಸಿತ್ತು. ಸರ್ಕಾರದ ಇಲಾಖೆಗಳು, ಸಾರ್ವಜನಿಕ ಉದ್ದಿಮೆಗಳು, ನಿಗಮಗಳು, ಮಂಡಳಿಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಹಾಗೂ ಮತ್ತಿತರ ಸಂಸ್ಥೆಗಳು, ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ)ನಲ್ಲಿ ಹೊಂದಿರುವ ಖಾತೆಗಳನ್ನು ರದ್ದುಗೊಳಿಸಲು ಸೂಚಿಸಿತ್ತು.
ಆ.16ರಂದು ಎರಡು ಬ್ಯಾಂಕ್ಗಳು ಸರ್ಕಾರಕ್ಕೆ ಪತ್ರ ಬರೆದು ಈ ವಿಚಾರವನ್ನು ಪರಿಹರಿಸಲು 15 ದಿನಗಳ ಕಾಲಾವಕಾಶ ನೀಡುವಂತೆ ಕೋರಿದ್ದವು. ಇದರ ಜೊತೆಗೆ, ಬ್ಯಾಂಕ್ ಅಧಿಕಾರಿಗಳು ಖುದ್ದು ಹಣಕಾಸು ಇಲಾಖೆ ಅಧಿಕಾರಿಗಳನ್ನು ಭೇಟಿಯಾಗಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಇತ್ಯರ್ಥಗೊಳಿಸಲು ಸಮಯಾವಕಾಶ ನೀಡುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆ ಹೊರಡಿಸಿದ್ದ ಸುತ್ತೋಲೆಯನ್ನು 15 ದಿನಗಳ ಕಾಲ ತಡೆ ಹಿಡಿಯಲು ತೀರ್ಮಾನಿಸಿತ್ತು. ಇದೀಗ ಎರಡೂ ಬ್ಯಾಂಕ್ಗಳು ಸರ್ಕಾರದ ವಿವಿಧ ನಿಗಮಗಳಿಗೆ 22 ಕೋಟಿ ರೂ. ಹಿಂತಿರುಗಿಸಿವೆ.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಪಂಜಾಬ್ ನ್ಯಾಷನಲ್ ಬ್ಯಾಂಕ್, ರಾಜಾಜಿನಗರ ಶಾಖೆಯಲ್ಲಿ ಒಂದು ವರ್ಷ ಅವಧಿಯ ನಿಶ್ಚಿತ ಠೇವಣಿಯಲ್ಲಿ ಹೂಡಿಕೆ ಮಾಡಲು 14.09.2021ರಲ್ಲಿ ಚೆಕ್ ಮೂಲಕ 25 ಕೋಟಿ ರೂ.ಗಳನ್ನು ಪಾವತಿಸಿತ್ತು. ಇದಕ್ಕೆ ಪ್ರತಿಯಾಗಿ ಇದೇ ಬ್ಯಾಂಕಿನ ಮತ್ತೊಂದು ಶಾಖೆಯಾದ ಶಂಕ್ರೀ ಬ್ಯಾಂಕ್, ಸೇಲಂನಿಂದ 12 ಕೋಟಿ ರೂ.ಗಳ ಒಂದು ನಿಶ್ಚಿತ ಠೇವಣಿಯ ರಸೀದಿ ಮತ್ತು 13 ಕೋಟಿ ರೂ.ಗಳ ಇನ್ನೊಂದು ನಿಶ್ಚಿತ ಠೇವಣಿಯ ರಸೀದಿಯನ್ನು ನೀಡಿದ್ದರು. ಅವಧಿ ಮುಕ್ತಾಯದ ನಂತರ 13 ಕೋಟಿ ರೂ.ಗಳ ಠೇವಣಿ ನಗದೀಕರಣವಾಯಿತು.
ಆದರೆ, ಎರಡನೇ ಠೇವಣಿ ಖಾತೆಗೆ ಸಂಬಂಧಪಟ್ಟಂತೆ ಬ್ಯಾಂಕ್ ಅಧಿಕಾರಿಗಳಿಂದ ನಡೆದಿದೆ ಎನ್ನಲಾದ ವಂಚನೆ ಪ್ರಕರಣದ ಕಾರಣದಿಂದಾಗಿ ಈ ಹಣವನ್ನು ಬ್ಯಾಂಕ್ ಇದುವರೆಗೂ ಮರುಪಾವತಿಸಿಲ್ಲ. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳ ಜೊತೆ ಪತ್ರ ವ್ಯವಹಾರ ಮತ್ತು ಸಭೆಗಳನ್ನು ನಡೆಸಿದರೂ ಪ್ರಯೋಜನವಾಗಲಿಲ್ಲ. ಅಂತಿಮವಾಗಿ, ಪ್ರಕರಣ ನ್ಯಾಯಾಲಯಗಳಲ್ಲಿ 10 ವರ್ಷಗಳಿಂದಲೂ ವಿಚಾರಣೆ ಹಂತದಲ್ಲಿದೆ.
ಅದೇ ರೀತಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ಆಗಿನ ಸ್ಪೇಟ್ ಬ್ಯಾಂಕ್ ಆಫ್ ಮೈಸೂರು, ಅವೆನ್ಯೂ ರಸ್ತೆ, ಬೆಂಗಳೂರು ಇದರಲ್ಲಿ ಆಗಸ್ಟ್ 2013ರಲ್ಲಿ 10 ಕೋಟಿ ರೂ.ಗಳನ್ನು ನಿಶ್ಚಿತ ಠೇವಣಿ ಹೂಡಿದ್ದರು. ಅವಧಿ ಮುಕ್ತಾಯವಾಗುವುದಕ್ಕಿಂತ ಮೊದಲೇ ಬ್ಯಾಂಕ್ ಅಧಿಕಾರಿಗಳಿಂದ ಠೇವಣಿಗೆ ಸಂಬಂಧಪಟ್ಟ ಹಣವನ್ನು ನಕಲಿ ದಾಖಲೆಗಳ ಆಧಾರದ ಮೇಲೆ ಒಂದು ಖಾಸಗಿ ಕಂಪನಿಯ ಸಾಲಕ್ಕೆ ಹೊಂದಾಣಿಕೆ ಮಾಡಲಾಯಿತು.
ಈ ವಂಚನೆ ಪ್ರಕರಣದಲ್ಲೂ ಬ್ಯಾಂಕಿನವರ ಜೊತೆ ಪತ್ರ ವ್ಯವಹಾರ ಮತ್ತು ಸಭೆಗಳನ್ನು ನಡೆಸಿದರೂ ಕೂಡಾ ಹಣ ಮರುಪಾವತಿಸಲು ಬ್ಯಾಂಕ್ನವರು ಒಪ್ಪಲಿಲ್ಲ. ಈ ಪ್ರಕರಣವೂ ಕೂಡಾ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ.
ಇದನ್ನೂ ಓದಿ: ಬಿಬಿಎಂಪಿ: OTS ಯೋಜನೆ ಅವಧಿ ವಿಸ್ತರಣೆಗೆ ಸುಗ್ರೀವಾಜ್ಞೆ ತರಲು ಸಂಪುಟ ಅಸ್ತು - BBMP Property Tax Arrears