ಧಾರವಾಡ: "ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ಗೆ ಜೈಲ್ನಲ್ಲಿ ಸಿಗುತ್ತಿರುವ ರಾಜಾತಿಥ್ಯ ವಿಚಾರಕ್ಕೆ ಸಂಬಂಧಪಟ್ಟಂತೆ ನಾನೇನು ಕಮೆಂಟ್ ಮಾಡಲಿ" ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆಗೆ ನಿರಾಕರಿಸಿದರು.
ಬಳಿಕ ಬೇರೆ ಏನಾದರು ಕೇಳಲು ಇದೆಯಾ ಎಂದು ಮಾಧ್ಯಮದವರಿಗೆ ಪ್ರಶ್ನಿಸಿದ ಸಚಿವರು, ಜಿಂದಾಲ್ಗೆ ಭೂಮಿ ಕೊಡುವ ವಿಚಾರಕ್ಕೆ ಪ್ರತಿಕ್ರಿಯಿಸಿದರು. "ವಿಧಾನಸಭೆ ಉಪನಾಯಕ ಅರವಿಂದ್ ಬೆಲ್ಲದ್ ಅವರು ಜಿಂದಾಲ್ಗೆ ಭೂಮಿ ಕೊಡಲು ವಿರೋಧ ಮಾಡುತ್ತಿದ್ದಾರೆ. ಅವರು ಸಹ ಇಂಡಸ್ಟ್ರಿ ಹೊಂದಿದವರು. ಕೆಐಎಡಿಬಿ ಜಾಗವನ್ನು ಲೀಸ್ ಮೇಲೆ ನೀವು ತೆಗೆದುಕೊಂಡಿದ್ದೀರಿ ಇದು ಕೂಡ ಒಂದು ಆ್ಯಕ್ಟ್ನಲ್ಲಿ ಬರುತ್ತದೆ. ಭಾರತದಾದ್ಯಂತ ಒಂದೇ ಲೀಸ್ ಕಂ ಶೆಲ್ಡನ್ ಇರುತ್ತದೆ. ಯಾವುದೇ ಒಂದು ಸಂಸ್ಥೆಗೆ ಲೀಸ್ ಕೊಟ್ಟಾಗ ಕಾನೂನು ಪ್ರಕಾರ ಷರತ್ತು ವಿಧಿಸಲಾಗುತ್ತದೆ. ಅವರು ಸಂಪೂರ್ಣ ದುಡ್ಡು ಕೊಟ್ಟಿರುತ್ತಾರೆ. ಆದರೆ, ಷರತ್ತು ವಿಧಿಸಿ ಅವರಿಗೆ ಭೂಮಿ ಕೊಡಲಾಗುತ್ತದೆ" ಎಂದರು.
"ಬೆಲ್ಲದ ಅವರಿಗೆ ಇದರ ಬಗ್ಗೆ ಬೇರೆ ಅಭಿಪ್ರಾಯ ಇರಬಹುದು. ಕೇಂದ್ರ ಸರ್ಕಾರ ಅವರದ್ದೇ ಇದೆ. ಯಾರ್ಯಾರಿಗೆ ಭೂಮಿ ಕೊಟ್ಟಿದ್ದಾರೆ ಅದನ್ನು ಹೇಳಲಿ. ನಾವು ಜಿಂದಾಲ್ಗೆ ಫೇವರ್ ಮಾಡಿ ಕೊಡುತ್ತಿಲ್ಲ. 90 ಸಾವಿರ ಕೋಟಿ ರೂಗಳ ಹೂಡಿಕೆಯನ್ನು ಜಿಂದಾಲ್ ಮಾಡಿದೆ. ನಾನು ಹುಟ್ಟಿ ಬೆಳೆದ ಜಾಗ ಅದು. ಬೆಲ್ಲದ ಅವರಿಗೆ ಸಂಪೂರ್ಣ ಮಾಹಿತಿ ಇಲ್ಲ. ಇಲ್ಲದಿದ್ದರೆ ಮಾಹಿತಿ ಬೇಕಾದರೆ ಕೊಡುತ್ತೇವೆ" ಎಂದರು.
ಇಲ್ಲಿವರೆಗೂ ಅವರು ಎಷ್ಟು ಸರ್ಕಾರ ಕೆಡವಿದ್ದಾರೆ?: ಕಾಂಗ್ರೆಸ್ ಶಾಸಕನ 100 ಕೋಟಿ ಆಫರ್ ವಿಚಾರಕ್ಕೆ ಪ್ರತಿಕ್ರಿಯಿಸಿ, "ಗವರ್ನರ್ ಮೂಲಕ ಸರ್ಕಾರ ಕೆಡವಲು ಮುಂದಾಗಿದ್ದಾರೆ. ಇಲ್ಲಿಯವರೆಗೆ ಎಷ್ಟು ಸರ್ಕಾರ ಬೀಳಿಸಿದ್ದಾರೆ ಎಂದು ಬೆಲ್ಲದ ಅವರಿಗೆ ಕೇಳಿ. ಮೋದಿ ಸರ್ಕಾರ ಬಂದ ಮೇಲೆ ಎಷ್ಟು ಯಶಸ್ವಿಯಾಗಿ ಸರ್ಕಾರ ಬೀಳಿಸಿದ್ದೀರಿ ಎಂದು ಕೇಳಿ. ಶಾಸಕರು ಬರುವಾಗ ಫ್ರೀ ಆಗಿ ಬರುತ್ತಾರಾ? ಬೆಲ್ಲದ ಅವರಿಗೆ ಬರಲು ಹೇಳಿ ಇದರ ಬಗ್ಗೆ ಬಹಿರಂಗ ಚರ್ಚೆ ಬೇಕಾದರೂ ಮಾಡಲಿ. ಸಾರ್ವಜನಿಕ ಜೀವನದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅವರದ್ದೇ ಇರಬೇಕು. ಹಣ ಲೂಟಿ ಹೊಡೆಯಬೇಕು. ಅವರು ಬಂದರೆ ಕೇಂದ್ರ ಸರ್ಕಾರದಲ್ಲಿ ಮಹಾ ಏನು ಕೆಲಸ ಆಗಿವೆ ಅನ್ನುವ ಬಗ್ಗೆ ಚರ್ಚೆ ಮಾಡೋಣ" ಎಂದು ಟೀಕಿಸಿದರು.