ಬಿಗ್ ಬಾಸ್ ಕನ್ನಡದ 11ನೇ ಸೀಸನ್ 8ನೇ ವಾರಾಂತ್ಯ ತಲುಪಿದೆ. ಈಗಾಗಲೇ 50 ದಿನಗಳನ್ನು ಪೂರೈಸಿರುವ ಕಾರ್ಯಕ್ರಮದ ಆಟ ದಿನ ದಿನವೂ ರಂಗೇರುತ್ತಿದೆ. ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಶೋ ಯಶಸ್ಸು ಕಂಡಿದೆ ಎಂಬ ಮೆಚ್ಚುಗೆ ಸೋಷಿಯಲ್ ಮೀಡಿಯಾಗಳಲ್ಲಿ ವ್ಯಕ್ತವಾಗುತ್ತಿವೆ.
ಎಂಟನೇ ವಾರ ವೈಲ್ಡ್ ಕಾರ್ಡ್ ಮೂಲಕ ಮನೆಗೆ ಎಂಟ್ರಿ ಕೊಟ್ಟಿರುವ ರಜತ್ ಕಿಶನ್ ಮತ್ತು ಶೋಭಾ ಶೆಟ್ಟಿ ಆರ್ಭಟವೂ ಕೊಂಚ ಹೆಚ್ಚೇ ಇದೆ. ಈಗಾಗಲೇ ದನಿ ಏರಿಸಿ ಪ್ರೇಕ್ಷಕರ ಗಮನ ಸೆಳೆದಿರುವ ಇವರು, ಮುಂದಿನ ದಿನಗಳಲ್ಲಿ ಹೇಗಿರಲಿದ್ದಾರೆ? ಆಟ ಹೇಗಿರಲಿದೆ? ಎಂಬುದು ನೋಡುಗರ ಕುತೂಹಲ.
ಇಂಥ ಹೊತ್ತಲ್ಲಿ 'ಹುಡುಗೀರ ಕೈ ಹಿಡಿದು ಓಡಾಡಿದಷ್ಟು ಸುಲಭವಲ್ಲ ಬಿಗ್ ಬಾಸ್ ಗೆಲ್ಲೋದು', ಅಸಲಿ ಆಟ ಈಗ ಶುರು ಎಂದು ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಕಿಶನ್ ಹೇಳಿ ಗಮನ ಸೆಳೆದಿದ್ದಾರೆ.
ಬಿಗ್ ಬಾಸ್ ಲೇಟೆಸ್ಟ್ ಪ್ರೋಮೋ: ರಜತ್ ಕಿಶನ್ ಖಡಕ್ ಮಾತನ್ನು ಇಂದು ಅನಾವರಣಗೊಂಡಿರುವ ಪ್ರೋಮೋದಲ್ಲಿ ಕಾಣಬಹುದು. ''ಒಂದೇ ವಾರದಲ್ಲಿ ಒಂಟಿಯಾದ್ರಾ ರಜತ್ ಕಿಶನ್?'' ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನೊಂದಿಗೆ ಬಿಗ್ ಬಾಸ್ ಪ್ರೋಮೋ ರಿಲೀಸ್ ಆಗಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸುವ ಅಭಿಮಾನಿಗಳ ಕಾತರ ಇನ್ನೂ ಹೆಚ್ಚಾಗಿದೆ.
ಕಳೆದ ವಾರಾಂತ್ಯದ ಕಿಚ್ಚನ ಸಂಚಿಕೆಯಲ್ಲಿ ರಜತ್ ಕಿಶನ್ ಮತ್ತು ಶೋಭಾ ಶೆಟ್ಟಿ ಅವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಲಾಗಿತ್ತು. ಸೋಮವಾರ ಮುಂಜಾನೆ ಇಬ್ಬರೂ ಮನೆಗೆ ಎಂಟ್ರಿ ಕೊಟ್ಟರು. ಮೊದಲ ದಿನ ಶೋಭಾ ಆರ್ಭಟಿಸಿದ್ರೆ, ಎರಡನೇ ದಿನ ರಜತ್ ದನಿ ಏರಿಸಿದ್ರು. ಇಬ್ಬರ ಧೈರ್ಯಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಆದ್ರೆ ಆಟದ ಭರದಲ್ಲಿ ರಜತ್ ಬಳಸಿರುವ ಅವಾಚ್ಯ ಪದಗಳನ್ನು ಮನೆ ಮಂದಿ ವಿರೋಧಿಸಿದ್ದಾರೆ. ಅವರಿಗೆ ಕಳಪೆ ಪಟ್ಟ ಕೊಟ್ಟಿದ್ದಾರೆ.
ಇದನ್ನೂ ಓದಿ: 'ಇಲ್ಲಿ ಕೀಳುಮಟ್ಟಕ್ಕಿಳಿದಿದ್ದಾರೆ, ನಾನು ಸಿಂಗಲ್ ಸಿಂಹ': ಬಿಗ್ ಬಾಸ್ನಲ್ಲಿ ಗುಡುಗಿದ ಚೈತ್ರಾ ಕುಂದಾಪುರ
ವಾರಾಂತ್ಯದಲ್ಲಿ ಉತ್ತಮ ಸ್ಪರ್ಧಿ ಮತ್ತು ಕಳಪೆ ಪ್ರದರ್ಶನಕ್ಕೆ ಇಡೀ ಮನೆಯವರು ಹೆಸರನ್ನು ಸೂಚಿಸಬೇಕಾಗುತ್ತದೆ. ಎಂದಿನಂತೆ ಈ ವಾರವೂ ಮನೆ ಮಂದಿ ಬಳಿ ಅಭಿಪ್ರಾಯ ಕೇಳಲಾಗಿದೆ. ಇಡೀ ಮನೆಯ ಪೈಕಿ ಬಹುತೇಕರು ಕಳಪೆ ಪ್ರದರ್ಶನಕ್ಕೆ ರಜತ್ ಅವರ ಹೆಸರನ್ನು ಸೂಚಿಸಿದ್ದಾರೆ. ಆಟದ ಸಂದರ್ಭ ಗೋಲ್ಡ್ ಸುರೇಶ್ ಅವರ ವಿರುದ್ಧ ರಜತ್ರಿಂದ ಬಳಕೆಯಾಗಿರುವ ಪದಗಳನ್ನು ನೀವು ಈಗಾಗಲೇ ನೋಡಿರುತ್ತೀರಿ.
ಇದನ್ನೂ ಓದಿ: ಎ.ಆರ್ ರೆಹಮಾನ್ ಬೆನ್ನಲ್ಲೇ ವಿಚ್ಛೇದನ ಘೋಷಿಸಿದ ಮೋಹಿನಿ: ವದಂತಿಗಳನ್ನುದ್ದೇಶಿಸಿ ವಕೀಲರು ಹೇಳಿದ್ದಿಷ್ಟು
ಕಳಪೆ ಪಟ್ಟ ಸಹಿಸದ ರಜತ್, ಹುಡುಗಿಯರ ಕೈ ಹಿಡಿದುಕೊಂಡು ಓಡಾಡಿದಷ್ಟು ಸುಲಭವಲ್ಲ ಬಿಗ್ ಬಾಸ್ ಆಟ ಗೆಲ್ಲೋದು. ಹುಟ್ಟಿದಾಗಿನಿಂದಲೂ ನಾನು ಇರೋದೇ ಹೀಗೆ. ಇನ್ಮುಂದೆಯೂ ಹೀಗೆ ಇರುತ್ತೇನೆ. ಇದಕ್ಕಿಂತ ಮೂರು ಪಟ್ಟು ಹೆಚ್ಚು ಮಾತನಾಡುತ್ತೇನೆ. ಆಟ ತೋರಿಸ್ತೀನಿ. ಇನ್ಮುಂದೆ ಅಸಲಿ ಆಟ ಶುರು ಎಂದು ತಿಳಿಸಿದ್ದಾರೆ. ಕಳಪೆ ಪಟ್ಟದೊಂದಿಗೆ ಇವರು ಬಿಗ್ ಬಾಸ್ ಮನೆಯ ಜೈಲು ಸೇರಿದ್ದಾರೆ.