ಚಾಮರಾಜನಗರ: ಆಸ್ಪತ್ರೆ ಸಿಬ್ಬಂದಿಯೊಬ್ಬರು ಹಣ ಪಡೆಯುತ್ತಿರುವ ವಿಡಿಯೋ ವೈರಲ್ ಆಗಿದ್ದು, ಉತ್ತಮ ಆಸ್ಪತ್ರೆ ಎಂದು ಹೆಸರು ಪಡೆದಿದ್ದ ಸಂತೇಮರಹಳ್ಳಿ ಸಮಯದಾಯ ಆರೋಗ್ಯ ಕೇಂದ್ರದಲ್ಲಿ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ.
ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಆಸ್ಪತ್ರೆ ಸಿಬ್ಬಂದಿ ಹಣ ಪಡೆಯುತ್ತಿರುವ ದೃಶ್ಯವನ್ನು ಆಶಾ ಕಾರ್ಯಕರ್ತೆವೊಬ್ಬರು ಸೆರೆ ಹಿಡಿದಿದ್ದಾರೆ. ಒಂದೊಂದು ಚಿಕಿತ್ಸೆಗೆ ಇಲ್ಲಿ ಒಂದೊಂದು ರೇಟ್ ಫಿಕ್ಸ್ ಆಗಿದ್ದು, ನಾರ್ಮಲ್ ಡೆಲವರಿಗೆ 3 ಸಾವಿರ ರೂ., ಸಿಜೆರಿಯನ್ ಹೆರಿಗೆಗೆ 20 ಸಾವಿರ ರೂ., ಸಂತಾನಹರಣ ಶಸ್ತ್ರ ಚಿಕಿತ್ಸೆಗೆ 3 ರಿಂದ 8 ಸಾವಿರ ರೂ., ಗರ್ಭಕೋಶದ ಆಪರೇಷನ್ಗೆ ಇಲ್ಲಿ 35 ಸಾವಿರ ರೂ. ಕೊಡಬೇಕಿದೆ ಎಂದು ಆಶಾ ಕಾರ್ಯಕರ್ತೆವೊಬ್ಬರು ಅರೋಪಿಸಿದ್ದಾರೆ.
ಡಿಹೆಚ್ಒ ಹೇಳಿದ್ದು ಹೀಗೆ; ಈ ಕುರಿತಂತೆ ಪ್ರತಿಕ್ರಿಯಿಸಿರುವ ಡಿಎಚ್ಒ ಡಾ. ಚಿದಂಬರ ಅವರು, ಆಸ್ಪತ್ರೆ ಸಿಬ್ಬಂದಿ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಎರಡು ದಿನಗಳಲ್ಲಿ ವರದಿ ತಯಾರಿಸಿ ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಪ್ರಕರಣದಲ್ಲಿ ಕೇಳಿ ಬಂದ ಸಿಬ್ಬಂದಿಗೆ ನೋಟಿಸ್ ಕಳಿಸಲಾಗಿದೆ. ಮಾ.21ರಂದೇ ವಿಚಾರಣೆ ನಡೆಸಿ ಅವರಿಂದ ಮೌಖಿಕವಾಗಿ ಹೇಳಿಕೆಗಳನ್ನು ಪಡೆದಿದ್ದೇವೆ. ಪಾರದರ್ಶಕತೆ ಹಿನ್ನೆಲೆ ವಿಡಿಯೋ ರೆಕಾರ್ಡ್ ಸಹ ಮಾಡಲಾಗಿದೆ. ಸದ್ಯ ವರದಿ ತಯಾರಿಸಲಾಗುತ್ತಿದೆ. ಆಸ್ಪತ್ರೆ ಸಿಬ್ಬಂದಿ ಮಾಡಿರುವ ಕೆಲಸ ತಪ್ಪು. ಹಾಗಾಗಿ ಸರ್ಕಾರದ ನಿಯಮಾನುಸಾರ ಏನು ಕ್ರಮ ಕೈಗೊಳ್ಳಬಹುದು ಎಂಬುದರ ಬಗ್ಗೆ ಎರಡು ದಿನಗಳಲ್ಲಿ ಗೊತ್ತಾಗಲಿದೆ ಎಂದು ಡಾ. ಚಿದಂಬರ ಅವರು ಹೇಳಿದ್ದಾರೆ.
ಇದನ್ನೂ ಓದಿ : 25 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಮುಡಾ ಕಮಿಷನರ್, ದಲ್ಲಾಳಿ ಲೋಕಾಯುಕ್ತ ಬಲೆಗೆ - LOKAYUKTA RAID