ಬಳ್ಳಾರಿ: ಸಂಡೂರಿನ ಉಪಚುನಾವಣಾ ಭರಾಟೆ ಈ ಬಾರಿ ತಾರಕಕ್ಕೇರಿದ್ದು, ಆಡಳಿತಾರೂಢ ಪಕ್ಷ ಕಾಂಗ್ರೆಸ್ ಮತ್ತು ವಿರೋಧ ಪಕ್ಷ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಕಾಂಗ್ರೆಸ್ ಭದ್ರ ಕೋಟೆಯಾಗಿರುವ ಸಂಡೂರಿನಲ್ಲಿ ಈ ಚುನಾವಣೆಯಲ್ಲಿ ಯಾರ ಪಾಲಿಗೆ ಯಶಸ್ಸು ಸಿಗಲಿದೆ ಎಂದು ಹೇಳುವುದು ಸದ್ಯಕ್ಕೆ ಕಷ್ಟಕರ. ಹಾಗಾಗಿ ಮತದಾರರು ಈ ಸಲ ಯಾರಿಗೆ ವಿಜಯಮಾಲೆ ಹಾಕುತ್ತಾರೆ ಎಂಬ ಕುತೂಹಲ ಎಲ್ಲೆಡೆ ಮನೆಮಾಡಿದೆ ಎನ್ನುತ್ತಿದ್ದಾರೆ ರಾಜಕೀಯ ವಿಶ್ಲೇಷಕರು.
ಸಂಡೂರಲ್ಲಿ ಉಪಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರಿ, ಬಿರುಸಿನ ಪ್ರಚಾರದ ಭರಾಟೆಯಿಂದಾಗಿ ಈ ಕ್ಷೇತ್ರ ದಿನೇ ದಿನೇ ಜಿದ್ದಾಜಿದ್ದಿಯ ಅಖಾಡವಾಗಿ ಬದಲಾಗುತ್ತಿದೆ. ಬಿಜೆಪಿಯಿಂದ ಎಸ್ಟಿ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷ ಬಂಗಾರು ಹನುಮಂತು ಮತ್ತು ಕಾಂಗ್ರೆಸ್‍ನಿಂದ ಸಂಸದ ತುಕಾರಾಂ ಅವರ ಪತ್ನಿ ಇ. ಅನ್ನಪೂರ್ಣ ಕಣದಲ್ಲಿದ್ದಾರೆ. ಉಭಯ ಪಕ್ಷಗಳ ಅಭ್ಯರ್ಥಿಗಳಿಬ್ಬರು ಮೊದಲ ಬಾರಿ ಚುನಾವಣೆ ಸ್ಪರ್ಧೆಗೆ ಇಳಿದಿದ್ದರಿಂದ ದಿನಗಳು ಕಳೆದಂತೆ ಕ್ಷೇತ್ರ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ಇಂದು ಸಂಜೆ (ಸೋಮವಾರ) ಬಹಿರಂಗ ಪ್ರಚಾರಕ್ಕೆ ತೆರೆ ಕೂಡ ಬೀಳಲಿದ್ದು, ಪಕ್ಷದ ಮುಖಂಡರು ಮತಬೇಟೆಯಲ್ಲಿ ಬ್ಯುಸಿಯಾಗಿದ್ದಾರೆ.
ಬಂಗಾರು ಹನುಮಂತು ಅವರ ಬೆನ್ನ ಹಿಂದೆ ಗಾಲಿ ಜನಾರ್ದನ ರೆಡ್ಡಿ ಇದ್ದರೆ, ಇ. ಅನ್ನಪೂರ್ಣ ಅವರ ಪರ ಸಚಿವ ಸಂತೋಷ್ ಲಾಡ್ ವ್ಯಾಪಕ ಪ್ರಚಾರ ನಡೆಸಿದ್ದಾರೆ. ರಾಜಕೀಯವಾಗಿ ಮತ್ತೆ ಪ್ರವರ್ಧಮಾನಕ್ಕೆ ಬರುವ ಮತ್ತು ಬಿಜೆಪಿಯನ್ನು ಮುಂಚೂಣಿಗೆ ತರುವ ಗುರಿಯನ್ನು ಜನಾರ್ದನ ರೆಡ್ಡಿ ಹೊಂದಿದ್ದಾರೆ. ತಮ್ಮ ಅನುಪಸ್ಥಿತಿಯಲ್ಲೂ ಕಳೆದ 20 ವರ್ಷಗಳಿಂದಲೂ ಕ್ಷೇತ್ರವನ್ನು ಭದ್ರವಾಗಿ ಕಾಪಾಡಿಕೊಂಡಿರುವ ಲಾಡ್ ಅವರು, ಹಿಡಿತ ಕಾಯ್ದುಕೊಳ್ಳಬೇಕೆಂದು ಬಯಸಿದ್ದಾರೆ.
ಕ್ಷೇತ್ರದಲ್ಲಿ ಒಂದು ಕಡೆ ಸಂತೋಷ್ ಲಾಡ್ ಮೇಲೆ ಜನರು ಅಕ್ಕರೆಗರೆಯುವುದು ಕಂಡರೆ, ಇನ್ನೊಂದು ಕಡೆ ಜನಾರ್ದನ ರೆಡ್ಡಿ ಅವರ ಬಗೆಗೆ ಅವ್ಯಕ್ತ ಅಭಿಮಾನ ಇರುವುದೂ ಕಾಣುತ್ತದೆ. ಇನ್ನುಳಿದಂತೆ ಇಲ್ಲಿ ಸಂಸದ ತುಕಾರಾಂ ಮತ್ತು ಅವರ ಪತ್ನಿ, ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ವೈಯಕ್ತಿಕ ವರ್ಚಸ್ಸು ಕೂಡ ಇದೆ.
ಎರಡೂ ಪಕ್ಷಗಳಿಗೂ ಆರಂಭದಲ್ಲಿ ಬಂಡಾಯದ ಭೀತಿ ಎದುರಾಗಿತ್ತು. ಬಳಿಕ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಬಂಡಾಯ ಹತ್ತಿಕ್ಕುವಲ್ಲಿ ಯಶಸ್ವಿಯಾಗಿವೆ. ಆದರೆ, ಯಾವ ಅಂಶಗಳು ಚುನಾವಣೆ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ನೋಡಬೇಕು ಎನ್ನುತ್ತಾರೆ ಇಲ್ಲಿಯ ರಾಜಕೀಯ ವಿಶ್ಲೇಷಕರು.
ಕ್ಷೇತ್ರದ ಇತಿಹಾಸ: 1957ರಲ್ಲಿ ಅಸ್ತಿತ್ವಕ್ಕೆ ಬಂದ ಸಂಡೂರು ಕ್ಷೇತ್ರ ಕಾಂಗ್ರೆಸ್‍ನ ಭದ್ರಕೋಟೆ ಎಂದೇ ಹೆಸರುವಾಸಿ. ಇಲ್ಲಿ ಎಂವೈ ಘೋರ್ಪಡೆ ಅವರು 30 ವರ್ಷ ಶಾಸಕರಾಗಿದ್ದರು. ಅವರನ್ನು ಬಿಟ್ಟರೆ ಈಗಿನ ತುಕಾರಾಂ 20 ವರ್ಷ ಅವಧಿಗೆ ಆಯ್ಕೆಯಾಗಿದ್ದರು.
1985ರಲ್ಲಿ ಜನತಾಪಾರ್ಟಿ, 2004ರಲ್ಲಿ ಜೆಡಿಎಸ್ ಬಿಟ್ಟರೇ ಉಳಿದೆಲ್ಲ ಅವಧಿಗೆ ಕಾಂಗ್ರೆಸ್‍ನ ಅಭ್ಯರ್ಥಿಗಳೇ ಇಲ್ಲಿ ಗೆಲುವು ದಾಖಲಿಸಿದ್ದು, ಒಮ್ಮೆಯೂ ಬಿಜೆಪಿ ಬಾವುಟ ಹಾರಾಡಿಲ್ಲ. ಈಗಲೂ ಪುನಃ ಸಂಡೂರನ್ನು ಕೈ ತೆಕ್ಕೆಗೆ ತೆಗೆದುಕೊಳ್ಳಲು ಸ್ವತಃ ಸಿಎಂ ಸಿದ್ದರಾಮಯ್ಯ ಆದಿಯಾಗಿ ಸಚಿವರ ದಂಡೇ ಇಲ್ಲಿ ಠಿಕಾಣಿ ಹೂಡಿದ್ದರೆ, ಇದಕ್ಕೆ ಪರ್ಯಾಯವಾಗಿ ಬಿಜೆಪಿ ಕೂಡ ಹಲವು ಮಾಸ್ಟರ್ ಪ್ಲಾನ್ ಮೂಲಕ ಸಂಡೂರಲ್ಲಿ ಕೇಸರಿ ಬಾವುಟ ಹಾರಿಸಲು ಶತಾಯಗತಾಯ ಪ್ರಯತ್ನ ನಡೆಸಿದೆ.
ಅನ್ನಪೂರ್ಣ ತುಕಾರಾಂ: ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿ ಈ ಅನ್ನಪೂರ್ಣ ತುಕಾರಾಂ ಅವರಿಗೆ ಟಿಕೆಟ್ ನೀಡಿ ಚುನಾವಣೆಯ ಕಣಕ್ಕಿಳಿಸಿದೆ. ಸಚಿವ ಸಂತೋಷ್ ಲಾಡ್ ಜವಾಬ್ದಾರಿ ಹೆಚ್ಚಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್, ಶಾಸಕ ನಾಗೇಂದ್ರ, ಶಾಸಕ ನಾರಾ ಭರತ್ ರೆಡ್ಡಿ, ಕೃಷ್ಣ ನಾಯ್ಕ, ಶ್ರೀನಿವಾಸ್, ರೇವಣ್ಣ, ಸಚಿವ ಜಮೀರ್ ಅಹ್ಮದ್ ಸೇರಿದಂತೆ ಸಚಿವರು ಬೆಂಬಲವಾಗಿ ನಿಂತು ಪ್ರಚಾರ ನಡೆಸಿದ್ದು, ಅನ್ನಪೂರ್ಣ ತುಕಾರಾಂ ಜಯ ಸಾಧಿಸಬಹುದು ಎನ್ನುತ್ತಾರೆ ಸ್ಥಳೀಯರು.
ಬಂಗಾರು ಹನುಮಂತು: ಬಿಜೆಪಿ ಪಕ್ಷ ಮೊದಲ ಬಾರಿಗೆ ಅಧಿಕೃತವಾಗಿ ಬಂಗಾರು ಹನುಮಂತು ಅವರಿಗೆ ಟಿಕೆಟ್ ನೀಡಿದೆ. ಬಂಗಾರು ಹನುಮಂತು ಅವರು ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಹೋರಾಟ ಮಾಡಿದ್ದಾರೆ. ಕ್ಲೀನ್ ಇಮೇಜ್ ಹಾಗೂ ಬಿಜೆಪಿ ಪಕ್ಷ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿದೆ. ಶಾಸಕ ಗಾಲಿ ಜನಾರ್ದನ ರೆಡ್ಡಿ ಜವಾಬ್ದಾರಿ ಹೆಚ್ಚಿದೆ. ಶ್ರೀರಾಮುಲು, ಸೋಮಶೇಖರ ರೆಡ್ಡಿ, ಸುರೇಶ್ ಬಾಬು, ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಪ್ರಲ್ಹಾದ್ ಜೋಶಿ, ಸಿ ಟಿ ರವಿ, ಕಾರಜೋಳ ಸೇರಿದಂತೆ ಮತ್ತಿತರರು ಬಂದು ಪ್ರಚಾರ ನಡೆಸಿದ್ದು ಅವರ ಗೆಲುವಿಗೆ ಕಾರಣವಾಗಬಹುದು ಎನ್ನುತ್ತಾರೆ ಸ್ಥಳೀಯರು.
ಸದ್ಯ ಕ್ಷೇತ್ರದ ಸಾಕ್ಷಾತ್ ಚಿತ್ರಣ ಗಮನಿಸಿದರೆ ಕಾಂಗ್ರೆಸ್‍ನ ಅನ್ನಪೂರ್ಣ ತುಕಾರಾಂ ಮತ್ತು ಬಿಜೆಪಿಯ ಬಂಗಾರಿ ಹನುಮಂತು ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಈ ಪೈಪೋಟಿಯಲ್ಲಿ ಯಾರು ಗೆದ್ದು ಬೀಗಲಿದ್ದಾರೆ ಎನ್ನುವುದನ್ನು ಕಾದುನೋಡಬೇಕಿದೆ.
ಉಪಚುನಾವಣೆ: 2024ರಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ತುಕಾರಾಂ ರಾಜೀನಾಮೆ ನೀಡಿ ಬಳ್ಳಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ತೆರವಾದ ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ಈಗ ಉಪಚುನಾವಣೆ ನಡೆಯುತ್ತಿದೆ.
ಇದನ್ನೂ ಓದಿ: ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ತೆರೆ: ಘಟಾನುಘಟಿ ನಾಯಕರ ಅಂತಿಮ ಕಸರತ್ತು