ಬೆಂಗಳೂರು : ಆರೋಗ್ಯ ಕವಚ-108 ಆ್ಯಂಬುಲೆನ್ಸ್ ವಾಹನ ಚಾಲಕರು ಹಾಗೂ ಇತರ ಸಿಬ್ಬಂದಿಗಳ ವೇತನ ವಿಚಾರಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಗುರುವಾರ (ಸೆ.12)ಕ್ಕೆ ಮುಂದೂಡಿದೆ.
ಆರೋಗ್ಯ ಕವಚ-108 ನೌಕರರ ಪರವಾಗಿ ಅಖಿಲ ಕರ್ನಾಟಕ 108 ಆಂಬ್ಯುಲೆನ್ಸ್ ನೌಕರರ ಹಿತರಕ್ಷಣಾ ಸಂಘ, ಕರ್ನಾಟಕ ರಾಜ್ಯ ಆರೋಗ್ಯ ಕವಚ (108) ಆ್ಯಂಬುಲೆನ್ಸ್ ನೌಕರರ ಸಂಘ, ಸುವರ್ಣ ಕರ್ನಾಟಕ ಆರೋಗ್ಯ ಕವಚ (108) ಆ್ಯಂಬುಲೆನ್ಸ್ ನೌಕರರ ಸಂಘ ಸಲ್ಲಿಸಿದ ಅರ್ಜಿಯು ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.
ಹಿಂದಿನ ವಿಚಾರಣೆ ವೇಳೆ ನ್ಯಾಯಾಲಯ ನೀಡಿದ ನಿರ್ದೇಶನದಂತೆ ಸಿಬ್ಬಂದಿಗೆ ನೀಡಲಾಗುತ್ತಿರುವ ವೇತನದ ವಿವರಗಳನ್ನು ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ಸಲ್ಲಿಸಿದರು. ಸಿಬ್ಬಂದಿ ಕರ್ತವ್ಯ ನಿರ್ವಹಣೆಯ ಭೌಗೋಳಿಕ ವ್ಯಾಪ್ತಿಯನ್ನು ರಾಜ್ಯದಲ್ಲಿ ಮೂರು ವಲಯಗಳಲ್ಲಿ ವಿಂಗಡಿಸಲಾಗಿದೆ ಎಂದು ವಕೀಲರು ಮಾಹಿತಿ ನೀಡಿದರು.
ಅಲ್ಲದೇ ಸಿಬ್ಬಂದಿ ವೇತನ ಮತ್ತು ನಿರ್ವಹಣೆಗೆಂದು ಪ್ರತಿ ತ್ರೈಮಾಸಿಕದಲ್ಲಿ 40.60 ಕೋಟಿ ರೂ.ಗಳನ್ನು ಸರ್ಕಾರ ಖಾಸಗಿ ಏಜೆನ್ಸಿಗೆ ಬಿಡುಗಡೆ ಮಾಡುತ್ತದೆ ಎಂಬ ವಿಚಾರವನ್ನೂ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು. ಅದಕ್ಕೆ ವೇತನ ಬಾಬತ್ತು ಹಾಗೂ ನಿರ್ವಹಣಾ ವೆಚ್ಚ ಪ್ರತ್ಯೇಕಿಸಿದರೆ ವೇತನಕ್ಕೆ ಎಷ್ಟು ಬೇಕಾಗುತ್ತದೆ ಎಂಬ ಸ್ಪಷ್ಟ ಲೆಕ್ಕ ಸಿಗುತ್ತದೆ. ವೇತನಕ್ಕೆ ಎಷ್ಟು ಹಣ ಬೇಕು ಎಂದು ತಿಳಿಯಬೇಕಾದರೆ ಸಿಬ್ಬಂದಿಯ ನಿಖರ ಮಾಹಿತಿ ಬೇಕು. ಆದಕ್ಕಾಗಿ ಆರೋಗ್ಯ ಕವಚ 108 ಆ್ಯಂಬುಲೆನ್ಸ್ ಸೇವೆಯಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ಸಿಬ್ಬಂದಿಯ ವಲಯವಾರು ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸರ್ಕಾರದ ಪರ ವಕೀಲರಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.