ತುಮಕೂರು: ನಫೆಡ್ ಹಾಗೂ ಕರ್ನಾಟಕ ಸಹಕಾರ ಮಾರಾಟ ಮಹಾಮಂಡಳಿಗಳು ಎಪಿಎಂಸಿಗಳ ಮೂಲಕ ಕೊಬ್ಬರಿ ಖರೀದಿಸಲು ಆರಂಭಿಸಿವೆ. ನಿನ್ನೆಯಿಂದ ಕೊಬ್ಬರಿ ಖರೀದಿ ಪ್ರಕ್ರಿಯೆಗೆ ನೋಂದಣಿ ಆರಂಭಿಸಲಾಗಿದೆ. ಕೊಬ್ಬರಿ ಬೆಳೆಗಾರರು ನೋಂದಣಿ ಮಾಡಿಸಲು ಹಗಲು ರಾತ್ರಿ ಎನ್ನದೆ ಖರೀದಿ ಕೇಂದ್ರಗಳಲ್ಲಿ ಜಮಾಯಿಸಿದ್ದಾರೆ.
ಭಾನುವಾರ ರಾತ್ರಿಯಂತೆಯೇ ಈ ಕ್ಯೂ ಸೋಮವಾರ ರಾತ್ರಿಯೂ ಮುಂದುವರಿದಿದೆ. ಕೊಬ್ಬರಿ ಖರೀದಿ ನೋಂದಣಿಗೆಂದು ಬಂದ ರೈತರು, ಖರೀದಿ ಕೇಂದ್ರಗಳಲ್ಲೇ ರಾತ್ರಿ ಕಳೆದಿದ್ದಾರೆ. ರಾತ್ರಿಯಿಡೀ ಸಾಲಿನಲ್ಲಿ ನಿಂತು ಕಾದಿದ್ದಾರೆ.
ತಿಪಟೂರು ಎಪಿಎಂಸಿ ಹಾಗೂ ಕರಡಾಳು ಎಪಿಎಂಸಿಯ ಮುಂದೆ ರೈತರು ಕ್ಯೂ ನಿಂತಿರುವ ದೃಶ್ಯ ಕಂಡು ಬಂತು. ತಮ್ಮ ಚಪ್ಪಲಿ, ಶೂ, ಬ್ಯಾಗ್ಗಳನ್ನು ಬಿಟ್ಟು ಸ್ಥಳ ಕಾಯ್ದಿರಿಸಿಕೊಂಡ ಬೆಳೆಗಾರರು, ನೋಂದಣಿ ಮಾಡಿಸಲು ಹರಸಾಹಸ ಪಡುತ್ತಿದ್ದಾರೆ. ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿದ್ದರಿಂದ, ರೈತರು ಹಗಲಿರುಳೆನ್ನದೆ ಸಾಲು ನಿಂತು ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ತುಮಕೂರು ಜಿಲ್ಲೆಯ ತೆಂಗು ಬೆಳೆಯುವಂತಹ ತಾಲೂಕುಗಳಾದ ತಿಪಟೂರು, ತುರುವೇಕೆರೆ, ತುಮಕೂರು, ಚಿಕ್ಕ ನಾಯಕನಹಳ್ಳಿ ಹಾಗೂ ಗುಬ್ಬಿ ತಾಲೂಕು ಕೇಂದ್ರಗಳಲ್ಲಿ ಈಗಾಗಲೇ ಎಪಿಎಂಸಿಯಲ್ಲಿ ಕೊಬ್ಬರಿ ಖರೀದಿ ಪ್ರಕ್ರಿಯೆ ಆರಂಭವಾಗಿದೆ.
ಈ ಬಗ್ಗೆ ಮಾತನಾಡಿದ ತಿಪಟೂರು ಎಪಿಎಂಸಿ ಕಾರ್ಯದರ್ಶಿ ನ್ಯಾಮಗೌಡ, "ಉಂಡೆ ಕೊಬ್ಬರಿ ಬೆಂಬಲ ಬೆಲೆ ಯೋಜನೆಯಡಿ ತಿಪಟೂರು ತಾಲೂಕಿನಲ್ಲಿ ಒಟ್ಟು ಏಳು ಖರೀದಿ ಕೇಂದ್ರಗಳನ್ನು ಪ್ರಾರಂಭ ಮಾಡಿದ್ದೇವೆ. ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ನಾಲ್ಕು, ಕರಡಾಳು, ಕೊನೆಹಳ್ಳಿ ಮತ್ತು ಕಿಮ್ನಳ್ಳಿ ಕ್ರಾಸ್ಗಳಲ್ಲಿ ತಲಾ ಒಂದೊಂದು ಕೇಂದ್ರಗಳನ್ನು ಪ್ರಾರಂಭ ಮಾಡಿದ್ದೇವೆ. ಕಳೆದ ಬಾರಿಯಂತೆ, ಈ ಬಾರಿ ಎಲ್ಲಿಯೂ ಸರ್ವರ್ ಸಮಸ್ಯೆ ಕಂಡು ಬಂದಿಲ್ಲ. ಸರ್ವರ್ ವೇಗವೂ ಚೆನ್ನಾಗಿದ್ದು, ಯಾರೂ ರೈತರು ಭಯಪಡುವ, ಗೊಂದಲಕ್ಕೊಳಗಾಗುವ ಅಗತ್ಯವಿಲ್ಲ. ಸೋಮವಾರ ಸಂಜೆ 5 ಗಂಟೆವರೆಗೆ ತುಮಕೂರು ಜಿಲ್ಲೆಯಲ್ಲಿ 34,000ಕ್ಕಿಂತ ಹೆಚ್ಚು ಕ್ವಿಂಟಲ್ ಕೊಬ್ಬರಿ ಖರೀದಿಯಾಗಿದೆ. ಹಾಸನ ಜಿಲ್ಲೆಗೆ ಹೋಲಿಸಿದರೆ ಈ ಬಾರಿ ತುಮಕೂರು ಜಿಲ್ಲೆಯಲ್ಲಿ 10 ಸಾವಿರ ಕ್ವಿಂಟಲ್ ಕೊಬ್ಬರಿ ಗೆಚ್ಚು ಖರೀದಿಯಾಗಿದೆ. ಹೆಚ್ಚು ಕಡಿಮೆ ಎಲ್ಲಾ ರೈತರಿಗೆ ಸಿಗುವ ಅವಕಾಶ ಇದೆ. ಹಾಗಾಗಿ ಯಾರೂ ಅವಸರ ಮಾಡಿ, ಗಾಬರಿಯಾಗುವ ಅವಶ್ಯಕತೆಯಿಲ್ಲ. ಎಲ್ಲಾ ರೈತರು ಸಹಕರಿಸಬೇಕು" ಎಂದು ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಇಂದಿನಿಂದ ಕೊಬ್ಬರಿ ಖರೀದಿ: ಕಲ್ಲುಗಳ ಸಾಲು ನಿರ್ಮಿಸಿ ಸ್ವಯಂ ಟೋಕನ್ ಪಡೆಯುತ್ತಿರುವ ರೈತರು