ಬೆಂಗಳೂರು: ಜಾಲಹಳ್ಳಿ ಮೆಟ್ರೋ ಸ್ಟೇಷನ್ನಲ್ಲಿ ಸೆಕ್ಯೂರಿಟಿ ಸಿಬ್ಬಂದಿಯೊಬ್ಬರು ಅಸಭ್ಯ ವರ್ತನೆ ತೋರಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದೀಗ ಚರ್ಚೆಗೆ ಗ್ರಾಸವಾಗಿದೆ. ಮಹಿಳೆಯ ಮುಂದೆ ದುರ್ವರ್ತನೆ ತೋರಿದ್ದು, ಈ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಘಟನೆ ಕುರಿತು ಮೆಟ್ರೋ ಮೇಲಾಧಿಕಾರಿಗಳಿಗೆ ಮಹಿಳೆ ಜಾಲತಾಣ ಮತ್ತು ಇಮೇಲ್ ಮೂಲಕ ಇ-ಮೇಲ್ ದೂರು ನೀಡಿದ್ದಾರೆ. ಘಟನೆ ನಂತರ ದೂರು ನೀಡಿದರೂ ಮೇಲಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಮುಂದೆ ಆಗುವ ಅನಾಹುತಗಳಿಗೆ ಮೆಟ್ರೋ ಅಧಿಕಾರಿಗಳೇ ಹೊಣೆ ಎಂದು ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿರುವ ನಮ್ಮ ಮೆಟ್ರೋ ಅಧಿಕಾರಿಗಳು, ಮಹಿಳೆಯ ದೂರನ್ನು ಗಂಭೀರವಾಗಿ ಪರಿಗಣಿಸಿ ಆಂತರಿಕ ತನಿಖೆಯನ್ನು ನಡೆಸಲಾಗುತ್ತಿದೆ. ಮೇಲ್ನೋಟಕ್ಕೆ ಸೆಕ್ಯೂರಿಟಿ ಸಿಬ್ಬಂದಿ ಕೆಲ ಅಂಗವೈಕಲ್ಯಗಳನ್ನು ಹೊಂದಿದ್ದು ಈ ಕಾರಣ ಮಹಿಳೆಗೆ ಅಸಭ್ಯ ವರ್ತನೆ ಎಂದು ತೋರಿರುವ ಸಾಧ್ಯತೆ ಇದೆ. ಇನ್ನೂ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಿದ್ದೇವೆ. ಮಹಿಳೆಯರ ಸುರಕ್ಷತೆ ನಮ್ಮ ಮೆಟ್ರೋ ಸಂಸ್ಥೆಯ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಮ್ಮ ಮೆಟ್ರೋ ಅಧಿಕಾರಿಯಿಂದ ಮಹಿಳಾ ಸೆಕ್ಯೂರಿಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಪ್ರಕರಣ ದಾಖಲು
ಇತ್ತೀಚೆಗಷ್ಟೇ ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿಯೂ ಇಂತಹದ್ದೇ ಘಟನೆ ನಡೆದಿತ್ತು. ಮಹಿಳಾ ಸೆಕ್ಯೂರಿಟಿಯೊಂದಿಗೆ ಅನುಚಿತ ವರ್ತನೆ ತೋರಿ, ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮೆಟ್ರೊ ಅಧಿಕಾರಿ ವಿರುದ್ಧ ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ. ಮಹಿಳೆ ನೀಡಿದ ದೂರಿನ ಮೇರೆಗೆ ಅಸಿಸ್ಟೆಂಟ್ ಸೆಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಗಜೇಂದ್ರನ್, ಸೆಕ್ಯೂರಿಟಿ ಕಂಪನಿ ಮಾಲೀಕ ಪ್ರಕಾಶ್ ನಿಟ್ಟೂರು ಎಂಬುವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗುತ್ತಿಗೆ ಆಧಾರದ ಮೇರೆಗೆ ಖಾಸಗಿ ಏಜೆನ್ಸಿಯೊಂದರ ಮೂಲಕ ನೊಂದ ಮಹಿಳೆಯು ಭದ್ರತಾ ಸಿಬ್ಬಂದಿಯಾಗಿ ನೇಮಕಗೊಂಡು ಮೆಟ್ರೊ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೇ ನಿಲ್ದಾಣದಲ್ಲಿ ಗಜೇಂದ್ರನ್ ಎಎಸ್ಒ ಆಗಿ ಕೆಲಸ ಮಾಡುತ್ತಿದ್ದಾರೆ. 'ಕೆಲಸದ ಅವಧಿಯಲ್ಲಿ ನನ್ನನ್ನು ಒಳಗೊಂಡಂತೆ ಕೆಲ ಮಹಿಳಾ ಸಿಬ್ಬಂದಿ ಮೇಲೆ ಅಸಭ್ಯವಾಗಿ ವರ್ತಿಸಿದ್ದಾರೆ. ದೇಹದ ಅಂಗಾಂಗದ ಬಗ್ಗೆ ವರ್ಣನೆ ಮಾಡಿ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಒತ್ತಾಯ ಪೂರ್ವಕವಾಗಿ ಮೈಕೈ ಮುಟ್ಟಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಸುಳ್ಳು ಆರೋಪ ಹೊರಿಸಿ ಬೇರೆ ಸ್ಟೇಷನ್ಗೆ ವರ್ಗಾಯಿಸುತ್ತೇನೆ. ಅಲ್ಲದೇ, ಕೆಲಸದಿಂದ ಬಿಡಿಸುವುದಾಗಿ ಬೆದರಿಸಿದ್ದರು' ಎಂದು ಮಹಿಳೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
'ನಮ್ಮ ಮೆಟ್ರೋ ಅಧಿಕಾರಿಯಿಂದ ಕಿರುಕುಳ ನೀಡುತ್ತಿರುವ ಬಗ್ಗೆ ಸೆಕ್ಯೂರಿಟಿ ಏಜೆನ್ಸಿ ಮಾಲೀಕ ಪ್ರಕಾಶ್ ಅವರಿಗೆ ವಿಷಯ ತಿಳಿಸಿದರೆ, ಸಾಧ್ಯವಾದರೆ ಸಹಕರಿಸಿ, ಇಲ್ಲದಿದ್ದರೆ ಕೆಲಸ ಬಿಟ್ಟು ಹೋಗಿ, ನಿಮಗಾಗಿ ಅಧಿಕಾರಿಯನ್ನ ಎದುರು ಹಾಕಿಕೊಳ್ಳುವುದಿಲ್ಲ. ನಿಮ್ಮನ್ನ ಕೆಲಸದಿಂದ ತೆಗೆದುಹಾಕುತ್ತೇನೆ. ನನ್ನನ್ನು ಏನು ಮಾಡಲು ಸಾಧ್ಯವಿಲ್ಲ' ಎಂದು ಹೆದರಿಸಿ ಅವಮಾನಗೊಳಿಸಿರುವುದಾಗಿಯೂ ದೂರಿನಲ್ಲಿ ಮಹಿಳೆ ವಿವರಿಸಿದ್ದಳು. ಮಹಿಳೆ ನೀಡಿದ ದೂರಿನ ಮೇರೆಗೆ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.