ಮಂಡ್ಯ: ನಿಗದಿತ ಹಣ ಕಟ್ಟಿದರೆ ಡಬಲ್ ಹಣ ಕೊಡುವ ಆಮಿಷ ತೋರಿಸಿ ಹಲವು ಖಾಸಗಿ ಕಂಪನಿಗಳು ಮಂಡ್ಯ ಜಿಲ್ಲೆಯ ಸಾವಿರಾರು ಜನರಿಗೆ ನೂರಾರು ಕೋಟಿ ರೂಪಾಯಿ ವಂಚಿಸಿರುವ ಘಟನೆ ನಡೆದಿದೆ. ಹಲವು ಕಂಪನಿಗಳು 2011ರಲ್ಲಿ ಮಂಡ್ಯ ಜಿಲ್ಲೆಯಲ್ಲಿ ಸಕ್ರಿಯವಾಗಿದ್ದವು. ಏಜೆಂಟರುಗಳ ಸಹಾಯದಿಂದ ಗ್ರಾಮೀಣ ಭಾಗದ ಜನರನ್ನ ಸೆಳೆದು ಇಂತಿಷ್ಟು ಹಣ ಕಟ್ಟಿದ್ರೆ ಹಣ ಡಬಲ್ ಕೊಡುವ ಆಮಿಷವೊಡ್ಡಿದ್ದರು. ಅದರಂತೆ ಜಿಲ್ಲೆಯಲ್ಲಿ ಸಾವಿರಾರು ಜನರು ಹತ್ತು ಸಾವಿರದಿಂದ ಹಿಡಿದು ಲಕ್ಷಾಂತರ ರೂ ಹಣವನ್ನು ಪ್ರತಿ ತಿಂಗಳಂತೆ ಐದಾರು ವರ್ಷ ಕಟ್ಟಿದ್ದರು. ಕೆಲವಷ್ಟು ಮಂದಿ ಠೇವಣಿಯನ್ನು ಕೂಡ ಇಟ್ಟಿದ್ದರು.
ಏಜೆಂಟ್ಗಳು ಸಹಾ ಹಣದಾಸೆಗೆ ಹಣವನ್ನ ಖಾಸಗಿ ಕಂಪನಿಗಳಿಗೆ ಕಟ್ಟಿಸಿದ್ದರು. ಆದರೆ, ಆನಂತರ ಹಣವನ್ನ ಕಟ್ಟಿಸಿಕೊಂಡ ಖಾಸಗಿ ಕಂಪನಿಗಳು ತಮ್ಮ ಕಚೇರಿಗಳನ್ನ ಬಂದ್ ಮಾಡಿಕೊಂಡು ಮಂಗ ಮಾಯವಾಗಿವೆ. ಇದರಿಂದ ಹಣ ಕಟ್ಟಿದ ಜನರು ದಿಕ್ಕು ತೋಚದೇ ಕಂಗಾಲಾಗಿದ್ದಾರೆ. ಆದರೆ ಇದೀಗ ಜಿಲ್ಲಾಡಳಿತಕ್ಕೆ ಅರ್ಜಿಗಳನ್ನ ಸಲ್ಲಿಸಿದರೆ ಹಣ ವಾಪಸ್ ಬರುತ್ತದೆ ಎಂದು ನಿತ್ಯ ಸಾವಿರಾರು ಸಂತ್ರಸ್ತೆಯರು ಅರ್ಜಿಗಳನ್ನ ಸಲ್ಲಿಸುತ್ತಿದ್ದಾರೆ.
ಹಣ ಕಟ್ಟಿಸಿಕೊಂಡ ಹಲವು ಖಾಸಗಿ ಕಂಪನಿಗಳು ಹಣ ಕಟ್ಟಿಸಿಕೊಂಡಿದ್ದಕ್ಕೆ ಬಾಂಡ್ಗಳನ್ನ ನೀಡಿದ್ದಾರೆ. ಪ್ರಾರಂಭದಲ್ಲಿ ಜಿಲ್ಲಾ ಕೇಂದ್ರದಲ್ಲಿ ಕಚೇರಿಗಳನ್ನ ತೆರೆದಿದ್ದವು. ನಂತರದಲ್ಲಿ ಕಚೇರಿಗಳನ್ನ ಬಂದ್ ಮಾಡಿಕೊಂಡು ಹೋಗಿವೆ. ಇನ್ನು ಗ್ರಾಮೀಣ ಭಾಗದಲ್ಲಿ ಕಂಪನಿಗಳಿಗೆ ಹಣ ಕಟ್ಟಿಸಿಕೊಟ್ಟ ಏಜೆಂಟ್ಗಳಿಗೂ ದೊಡ್ಡ ತಲೆ ನೋವಾಗಿದೆ. ಯಾರ ಬಳಿ ಹೋಗಿ ಕೇಳುವುದು ಎಂಬುವಂತೆ ಆಗಿದೆ. ಹೀಗಾಗಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ರೆ ಹಣ ಸಿಗಬಹುದು ಎಂದು ಊಟ ನಿದ್ರೆ ಬಿಟ್ಟು ಜನ ಸರತಿ ಸಾಲಿನಲ್ಲಿ ನಿಂತು ಅರ್ಜಿ ಸಲ್ಲಿಸುತ್ತಿದ್ದಾರೆ.
ಇನ್ನು ಸಂತ್ರಸ್ತರ ಅಸಹಾಯಕತೆಯನ್ನ ಬಳಸಿಕೊಂಡ ಕೆಲವಷ್ಟು ಸಂಘ - ಸಂಸ್ಥೆಗಳು ಹಣ ಕೊಡಿಸುವುದಾಗಿ ನಂಬಿಸಿ ಮೋಸ ಹೋದ ಜನರಿಂದಲೇ ಹಣ ವಸೂಲಿ ಮಾಡುತ್ತಿವೆ. ಇನ್ನು ಪ್ರಾರಂಭದಲ್ಲಿ ಅರ್ಜಿಗಳನ್ನ ಸ್ವೀಕಾರ ಮಾಡಿದ ಜಿಲ್ಲಾಡಳಿತ ಇದೀಗ ಅರ್ಜಿಗಳನ್ನ ಸ್ವೀಕಾರ ಮಾಡುವುದನ್ನ ಕೂಡ ನಿಲ್ಲಿಸಿದೆ. ಸರ್ಕಾರದಿಂದ ಸಕ್ಷಮ ಪ್ರಾಧಿಕಾರ ರಚನೆ ಆಗಿ, ಅರ್ಜಿಗಳನ್ನ ಸ್ವೀಕರಿಸಲು ಅಧಿಕೃತ ಆದೇಶ ಹೊರಡಿಸುವವರೆಗೂ ಅರ್ಜಿಗಳ ಸ್ವೀಕಾರ ಸ್ಥಗಿತ ಮಾಡಲಾಗಿದೆ.
ಈ ಬಗ್ಗೆ ಜಿಲ್ಲಾಧಿಕಾರಿ ಡಾ. ಕುಮಾರ್ ಮಾತನಾಡಿ, ಬಡ್ಸ್ ಕಾಯಿದೆ ಮತ್ತು ಕೆಪಿಐಡಿ ಕಾಯಿದೆ ಅಡಿ ವಿವಿಧ ಖಾಸಗಿ ಕಂಪನಿಗಳು ಸಾರ್ವಜನಿಕರಿಂದ ಹಣ ಪಡೆದು ವಂಚಿಸಿರುವ ಸಂಬಂಧ ಕಳೆದ ಒಂದು ತಿಂಗಳಿನಿಂದ ಸಾಕಷ್ಟು ಸಂಖ್ಯೆಯಲ್ಲಿ ವಂಚನೆಗೊಳಗಾದವರು ಜಿಲ್ಲಾಧಿಕಾರಿ ಕಚೇರಿಗೆ ಬಂದು ಅರ್ಜಿಗಳನ್ನು ಸಲ್ಲಿಸುತ್ತಿದ್ದರು. ಇದರ ನಡುವೆ ಕೆಲ ಸಂಘ - ಸಂಸ್ಥೆಗಳು ಹಣ ವಾಪಸ್ ಕೊಡಿಸುತ್ತೇವೆ ಎಂದು ನಂಬಿಸಿ ಹಣ ಪಡೆದು ವಂಚನೆಗೊಳಗಾದವರನ್ನು ಮತ್ತೆ ವಂಚಿಸುತ್ತಿದ್ದಾರೆ. ಇಂತಹವರ ಮೇಲೆ ಕ್ರಮ ಕೈಗೊಳ್ಳಲು ಸಕ್ಷಮ ಪ್ರಾಧಿಕಾರ ಪೊಲೀಸರಿಗೆ ಸೂಚನೆ ಕೊಟ್ಟಿತ್ತು ಎಂದು ಹೇಳಿದರು.
ಬಡ್ಸ್ ಕಾಯಿದೆ ಮತ್ತು ಕೆಪಿಐಡಿ ಕಾಯಿದೆ ಅರ್ಜಿಗಳನ್ನು ಸ್ವೀಕರಿಸಲು ಮೊದಲು ಸಕ್ಷಮ ಪ್ರಾಧಿಕಾರ ರಚನೆಯಾಗಬೇಕು. ನಂತರ ಸಕ್ಷಮ ಪ್ರಾಧಿಕಾರ ಅರ್ಜಿ ಸ್ವೀಕಾರಕ್ಕೆ ಅಧಿಕೃತ ಅಧಿಸೂಚನೆ ಹೊರಡಿಸಬೇಕು. ಇದೆಲ್ಲವನ್ನು ಮಾಡದೇ ಅರ್ಜಿ ಸ್ವೀಕರಿಸಿದರೆ ಕಾನೂನಾತ್ಮಕ ತೊಡಕುಗಳು ಉಂಟಾಗುತ್ತದೆ. ಈ ಸಂಬಂಧ ಕೋರ್ಟಿಗೆ ಹೋದರೆ ಸಮಸ್ಯೆಯಾಗುತ್ತದೆ ಎಂದು ನಿನ್ನೆ ವಿಶೇಷಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರ ಸುತ್ತೋಲೆಯೊಂದನ್ನು ಕೊಟ್ಟಿದೆ ಎಂದು ತಿಳಿಸಿದರು.