ಕಾರವಾರ: ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾದವರಿಗಾಗಿ ಮತ್ತೆ ಶೋಧ ಕಾರ್ಯಾಚರಣೆಯನ್ನು ಶುಕ್ರವಾರದಿಂದ ಆರಂಭಿಸಲಾಗಿದೆ. ಗಂಗಾವಳಿ ನದಿಯಲ್ಲಿ ಬೃಹದಾಕಾರದ ಡ್ರಜ್ಜಿಂಗ್ ಯಂತ್ರದ ಸಹಾಯದಿಂದ ಶೋಧ ಕಾರ್ಯ ನಡೆದಿದ್ದು, ಕಟ್ಟಿಗೆಯ ತುಂಡು ಮತ್ತು ಹಗ್ಗದ ತುಣುಕುಗಳು ಪತ್ತೆಯಾಗಿವೆ. ಇದು ಹುದುಕಿಕೊಂಡಿರುವ ಬೆಂಜ್ ಲಾರಿಯ ಸುಳಿವು ನೀಡುವಂತಿದೆ.
ಗೋವಾದ ಪಣಜಿಯಿಂದ ಆಮದು ಮಾಡಿಕೊಂಡಿರುವ ಡ್ರಜ್ಜಿಂಗ್ ಯಂತ್ರವು ಇಂದು ಕೂಡ ಮಣ್ಣು ತೆರವು ಕಾರ್ಯ ಮುಂದುವರೆಸಿದೆ. ಗಂಗಾವಳಿ ನದಿಯಲ್ಲಿ ಹುದುಗಿದ ಮಣ್ಣಿನ ದಿಬ್ಬದಲ್ಲಿ ಗುರುತು ಮಾಡಲಾದ ಸ್ಥಳದಲ್ಲಿ ಕಾರ್ಯಾಚರಣೆಗಿಳಿದ ಡ್ರಜ್ಜಿಂಗ್ ಯಂತ್ರದ ಕೊಂಡಿಗೆ ಆರಂಭದಲ್ಲಿ ಹಗ್ಗ ಹಾಗೂ ಕಟ್ಟಿಗೆಯ ದಿಮ್ಮೆಯನ್ನು ಹೊರತೆಗೆದಿದೆ. ಸದ್ಯ ಪತ್ತೆಯಾದ ಕಟ್ಟಿಗೆಯು ಬೆಂಜ್ ಲಾರಿಯಲ್ಲಿದ್ದ ಕಟ್ಟಿಗೆ ತುಂಡು ಎನ್ನಲಾಗುತ್ತಿದೆ. ಇದರಿಂದ ಬೆಂಜ್ ಲಾರಿಯೂ ಅಲ್ಲೇ ಹುದುಗಿರುವ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲೇ ಕಾರ್ಯಾಚರಣೆ ಮುಂದುವರಿಸಲಾಗಿದೆ.
ಜುಲೈ 16ರಂದು ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದ ಗುಡ್ಡ ಕುಸಿತದ ದುರಂತದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಪೈಕಿ 8 ಮಂದಿಯ ಮೃತದೇಹಗಳು ಮಾತ್ರ ಪತ್ತೆಯಾಗಿವೆ. ಸ್ಥಳೀಯರಾದ ಜಗನ್ನಾಥ ನಾಯ್ಕ, ಲೋಕೇಶ ನಾಯ್ಕ ಹಾಗೂ ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ಮೃತದೇಹ ಈವರೆಗೂ ಪತ್ತೆಯಾಗಿಲ್ಲ. ಕೇರಳ ಮೂಲದ ಅರ್ಜುನ್ ಚಲಾಯಿಸುತ್ತಿದ್ದ ಬೆಂಜ್ ಲಾರಿ ಇದೇ ಸ್ಥಳದಲ್ಲಿ ಜು.16 ರಂದು ಗುಡ್ಡ ಕುಸಿತದ ವೇಳೆ ನಾಪತ್ತೆಯಾಗಿತ್ತು.
ಭಾರತೀಯ ಸೇನೆ, ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ಪಡೆಗಳು, ಡ್ರೋನ್, ಕ್ರಾಲಿಂಗ್ ಎಕ್ಸ್ಕಾವೇಟರ್ ಮೂಲಕ ನಿರಂತರ ಶೋಧ ಕಾರ್ಯ ಕೈಗೊಂಡರೂ ಯಾವುದೇ ಪ್ರತಿಫಲ ದೊರಕಿರಲಿಲ್ಲ. ಉಡುಪಿಯ ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡ ಸತತ ಎರಡು ದಿನಗಳ ಕಾಲ ಕಾರ್ಯಾಚರಣೆ ಕೈಗೊಂಡರೂ ಮೃತದೇಹ ಪತ್ತೆಯಾಗಿರಲಿಲ್ಲ. ಅಲ್ಲದೇ, ಮಳೆ ಜೋರಾಗಿ ಗಂಗಾವಳಿ ನದಿಯ ನೀರಿನ ಹರಿವು ಹೆಚ್ಚಿದ್ದರಿಂದ ಜುಲೈ 28ರಂದು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಇದೀಗ ಎರಡು ತಿಂಗಳ ಬಳಿಕ ಕಾರ್ಯಾಚರಣೆ ಪುನಾರಂಭಿಸಲಾಗಿದೆ. ಗೋವಾದಿಂದ ತರಿಸಿದ್ದ ಡ್ರಜ್ಜಿಂಗ್ ಯಂತ್ರಕ್ಕೆ ಶುಕ್ರವಾರ ಪೂಜೆ ಸಲ್ಲಿಸಿ ಮಣ್ಣು ತೆರವು ಕಾರ್ಯ ಮಾಡಲಾಗುತ್ತಿದೆ. ಈ ಯಂತ್ರದ ಮೂಲಕ 10 ದಿನಗಳವರೆಗೆ ಹುಡುಕಾಟ ನಡೆಸಲಾಗುತ್ತದೆ. ಈ ಕಾರ್ಯಾಚರಣೆಗೆ ಒಟ್ಟು 90 ಲಕ್ಷ ರೂ. ವೆಚ್ಚವಾಗಲಿದೆ ಎಂದು ತಿಳಿದು ಬಂದಿದೆ.