ಮೈಸೂರು: ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪಿಇಟಿಎ) ಇಂಡಿಯಾ, ಥೇಟ್ ಜೀವಂತ ಆನೆಯಂತೆಯೇ ಕಾಣುವ ರೋಬೋಟಿಕ್ ಆನೆಯನ್ನು ಸುತ್ತೂರು ಮಠಕ್ಕೆ ಉಡುಗೊರೆಯಾಗಿ ನೀಡಿದೆ. 10 ಅಡಿ ಎತ್ತರ ಇರುವ ರೋಬೋ ಆನೆಯನ್ನು ಕೇರಳದ ಕಲಾವಿದ ಪ್ರಶಾಂತ್ ಎನ್ನುವವರು ತಯಾರಿಸಿದ್ದಾರೆ. ಆನೆಗಳನ್ನು ಸಂರಕ್ಷಿಸಬೇಕು ಮತ್ತು ಹಿಂಸೆಯಿಂದ ಮುಕ್ತ ಮಾಡಬೇಕೆಂಬ ಉದ್ದೇಶದಿಂದ ಕೃತಕ ಆನೆಯನ್ನು ದೇವಸ್ಥಾನದ ಉತ್ಸವಗಳಲ್ಲಿ ಬಳಸಲು ಇದನ್ನು ನಿರ್ಮಾಣ ಮಾಡಲಾಗಿದೆ.
ಕೇರಳದಲ್ಲಿ ಎರಡು ಹಾಗೂ ಬೆಂಗಳೂರಿನ ಒಂದು ದೇವಾಲಯಕ್ಕೆ ಕೃತಕ ಆನೆಯನ್ನು ಕೊಟ್ಟಿದ್ದಾರೆ. ಈ ರೋಬೋಟಿಕ್ ಆನೆ ಜೀವಂತ ಆನೆಯಂತೆಯೇ ಕಿವಿ ಅಲ್ಲಾಡಿಸುತ್ತದೆ, ಕಣ್ಣು ಮಿಟುಕಿಸುತ್ತದೆ, ಕತ್ತು ಅಲ್ಲಾಡಿಸುತ್ತದೆ ಮತ್ತು ಸೊಂಡಿಲನ್ನು ಮೇಲೆ ಎತ್ತುತ್ತದೆ. ಅಲ್ಲದೇ ನೀರು ಚಿಮುಕಿಸುತ್ತದೆ. ಇದರ ಮೇಲೆ ಜಂಬೂಸವಾರಿ ಮಾದರಿಯಲ್ಲಿ ಮಂಟಪ ಮಾಡಲಾಗಿದೆ. ವಿದ್ಯುತ್ ಚಾಲಿತ ರೋಬೋ ಆನೆ ಶಿವನನ್ನು ಎಷ್ಟು ದೂರು ಬೇಕಾದರೆ ಸುಲಭವಾಗಿ ತೆಗೆದುಕೊಂಡು ಹೋಗಬಹುದು.
ಸುತ್ತೂರು ಮಠದಲ್ಲಿ ಭಕ್ತಾದಿಗಳು ಹಲವಾರು ವರ್ಷಗಳಿಂದ ಸಾಕಾನೆಯನ್ನು ನೋಡಿರಲಿಲ್ಲ. ಈ ಕೊರತೆಯನ್ನು ರೋಬೋಟಿಕ್ ಆನೆ ನೀಗಿಸಿದೆ. ಸುತ್ತೂರು ಮಠಕ್ಕೆ ಶಿವ ಎಂಬ ರೋಬೋ ಆನೆಯನ್ನು ತರಲಾಗಿದೆ. 10 ಅಡಿ ಎತ್ತರ ಇರುವ ಕೃತಕ ಆನೆಯನ್ನು ಸುತ್ತೂರು ಮಠದಲ್ಲಿ ನಡೆಯುವ ಎಲ್ಲ ಧಾರ್ಮಿಕ ಹಾಗೂ ಜಾತ್ರ ಮಹೋತ್ಸವ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲಾಗುವುದು ಎಂದು ಸುತ್ತೂರು ಮಠದ ಜೆಎಸ್‌ಎಸ್ ಸಂಸ್ಥೆ ಸಂಯೋಜನಾಧಿಕಾರಿ ಜಿ.ಎಲ್.ತ್ರಿಪುರಾಂತಕ ತಿಳಿಸಿದ್ದಾರೆ.
ಇದನ್ನೂ ಓದಿ: ಹೂ, ಹಣ್ಣು, ಮಾವು, ಬೇವು ಖರೀದಿ ಬಲು ಜೋರು; ಬಿರು ಬಿಸಿಲಲ್ಲಿ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ - Ugadi Festival