ಬೆಂಗಳೂರು: ನಕಲಿ ಪಿಸ್ತೂಲ್ ತೋರಿಸಿ ಮಹಿಳೆಯ ಚಿನ್ನದ ಮಾಂಗಲ್ಯ ಸರ ದೋಚಿದ್ದ ನಿವೃತ್ತ ಸೇನಾ ಸಿಬ್ಬಂದಿಯನ್ನ ಸುಬ್ರಹ್ಮಣ್ಯಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಚಿತ್ತೂರು ಮೂಲದ ವಿನಯ್ (40) ಬಂಧಿತ ಆರೋಪಿ. ಜುಲೈ 15ರಂದು ಸುಬ್ರಹ್ಮಣ್ಯಪುರ ವ್ಯಾಪ್ತಿಯ ಕಾಕತೀಯ ನಗರದ ಮನೆಯೊಂದಕ್ಕೆ ನುಗ್ಗಿದ್ದ ಆರೋಪಿ, ಮಹಿಳೆಯ ಮೇಲೆ ಹಲ್ಲೆ ಮಾಡಿ ಆಕೆಯ ಸರ ಕಿತ್ತುಕೊಂಡು ಪರಾರಿಯಾಗಿದ್ದ. ಪೊಲೀಸ್ ಸಹಾಯವಾಣಿಗೆ ಬಂದ ದೂರು ಆಧರಿಸಿ ತ್ವರಿತ ಕಾರ್ಯಾಚರಣೆ ಕೈಗೊಂಡ ಪೊಲೀಸರು, ಸಾರ್ವಜನಿಕರ ಸಹಕಾರದೊಂದಿಗೆ ಆರೋಪಿಯನ್ನ ಬಂಧಿಸಿ, ಆತನಿಂದ 5.50 ಲಕ್ಷ ಮೌಲ್ಯದ 73 ಗ್ರಾಂ ತೂಕದ ಚಿನ್ನದ ಸರವನ್ನ ವಶಪಡಿಸಿಕೊಂಡಿದ್ದಾರೆ.
ನಡೆದಿದ್ದೇನು?: ಸೇನೆಯ ಪೊಲೀಸ್ ಘಟಕದಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿದ್ದ ಆರೋಪಿ, ಕಳ್ಳತನಕ್ಕೆಂದು ಬೆಂಗಳೂರಿಗೆ ಬಂದಿದ್ದ. ಜುಲೈ 15ರಂದು ಬೆಳಗ್ಗೆ 9:45ರ ಸುಮಾರಿಗೆ ಸುಬ್ರಹ್ಮಣ್ಯಪುರ ವ್ಯಾಪ್ತಿಯ ಮನೆಯೊಂದಕ್ಕೆ ಫ್ಲಂಬರ್ ಸೋಗಿನಲ್ಲಿ ಬಂದಿದ್ದ ಆರೋಪಿ, ಮನೆಯಲ್ಲಿದ್ದ ಮಹಿಳೆಗೆ ನಕಲಿ ಪಿಸ್ತೂಲ್ ತೋರಿಸಿ ಬೆದರಿಸಿದ್ದ. ಬಳಿಕ ಪಿಸ್ತೂಲ್ ಹಿಂಬದಿಯಿಂದ ಆಕೆಯ ತಲೆಗೆ ಹೊಡೆದು ಮೈಮೇಲಿದ್ದ 73 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದ. ಸರ ಕಳೆದುಕೊಂಡ ಮಹಿಳೆ ಸಾರ್ವಜನಿಕರ ಸಹಾಯದಿಂದ ಪೊಲೀಸ್ ಸಹಾಯವಾಣಿಗೆ ದೂರು ನೀಡಿದ್ದರು.
ತಕ್ಷಣ ಸ್ಥಳಕ್ಕೆ ಬಂದ ಹೊಯ್ಸಳ ಪೊಲೀಸ್ ಸಿಬ್ಬಂದಿ ಸಾರ್ವಜನಿಕರ ಸಹಾಯದಿಂದ ಆರೋಪಿಯನ್ನ ಸೆರೆಹಿಡಿದಿದ್ದಾರೆ. ಆತನಿಂದ 73 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ನ್ಯಾಯಾಲಯದ ಬಳಿ ವಕೀಲೆಗೆ ಚಾಕು ಇರಿತ, ಆರೋಪಿ ಪೊಲೀಸ್ ವಶಕ್ಕೆ - Woman Lawyer Stabbed