ಬೆಳಗಾವಿ: "ಕಾಕತಿ" ವೀರರಾಣಿ ಚೆನ್ನಮ್ಮನ ಜನ್ಮಭೂಮಿಯಾದರೆ, "ಕಿತ್ತೂರು" ಕರ್ಮಭೂಮಿ. "ಬೈಲಹೊಂಗಲ" ಐಕ್ಯ(ಸಮಾಧಿ) ಸ್ಥಳ. ಈ ಮೂರು ಸ್ಥಳಗಳು ಕಿತ್ತೂರು ಸಂಸ್ಥಾನದ ಇತಿಹಾಸದಲ್ಲಿ ಪ್ರಾಮುಖ್ಯತೆ ಪಡೆದಿವೆ. ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಬೇಕು ಎಂಬ ದಶಕಗಳ ಬೇಡಿಕೆ ಬೇಡಿಕೆಯಾಗಿಯೇ ಉಳಿದಿದೆ. 200ನೇ ವಿಜಯೋತ್ಸವ ಸಂದರ್ಭದಲ್ಲಾದರೂ ಆಳುವ ಸರ್ಕಾರಗಳು ಗಟ್ಟಿ ನಿರ್ಧಾರ ಕೈಗೊಂಡು ಚೆನ್ನಮ್ಮನಿಗೆ ನಿಜವಾದ ಗೌರವ ಸಲ್ಲಿಸುವಂತೆ ಕೂಗು ಕೇಳಿ ಬಂದಿದೆ.
ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಿಚ್ಚು ಹಚ್ಚಿದ ಕ್ರಾಂತಿಯ ಕಿಡಿ ವೀರಾಗ್ರಿಣಿ ಕಿತ್ತೂರು ಚೆನ್ನಮ್ಮ ಕೇವಲ ರಾಜಕಾರಣಿಗಳ ಭಾಷಣಕ್ಕೆ ಮಾತ್ರ ಸಿಮೀತವಾಗಿದ್ದಾರೆ. ರಾಷ್ಟ್ರಮಟ್ಟದಲ್ಲಿ ಸಿಗಬೇಕಾದ ಪ್ರಾಮುಖ್ಯತೆ ಸಿಗುತ್ತಿಲ್ಲ. ಬ್ರಿಟಿಷರ ಜೊತೆಗೆ ಕೈ ಜೋಡಿಸಿದವರಿಗೆ ರಾಜ ಮರ್ಯಾದೆ, ಸೆಡ್ಡು ಹೊಡೆದು ಯುದ್ಧ ಮಾಡಿ, ಮಡಿದವರಿಗೆ ನಿರ್ಲಕ್ಷ್ಯವೇ ಉಡುಗೊರೆ. ಯಾಕಿಷ್ಟು ಉದಾಸೀನತೆ..? ಚೆನ್ನಮ್ಮ ಸ್ವಾಭಿಮಾನದಿಂದ ಹೋರಾಡಿದ್ದೆ ತಪ್ಪಾಯ್ತಾ ಎಂದು ಇಲ್ಲಿನ ಜನ ಖಾರವಾಗಿ ಪ್ರಶ್ನಿಸುತ್ತಿದ್ದಾರೆ.
ಉತ್ತರಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಸಿಕ್ಕಷ್ಟು ಗೌರವ, ಪ್ರಾಧಾನ್ಯತೆ, ಪ್ರಚಾರ ಈ ಭಾಗದ ಶೂರರಿಗೆ ಸಿಕ್ಕಿಲ್ಲ. ಝಾನ್ಸಿ ರಾಣಿ ಲಕ್ಷ್ಮೀಬಾಯಿಗಿಂತ 33 ವರ್ಷ ಮೊದಲು ಬ್ರಿಟಿಷರ ವಿರುದ್ಧ ಹೋರಾಡಿ ದಿಗ್ವಿಜಯ ಸಾಧಿಸಿದ ಹೆಗ್ಗಳಿಕೆ ಕಿತ್ತೂರು ಚೆನ್ನಮ್ಮ ಅವರದ್ದು. ಕಿತ್ತೂರು ಪುಟ್ಟ ಸಂಸ್ಥಾನವಾದರೂ ಸ್ವಾಭಿಮಾನ, ಶೂರತನಕ್ಕೇನು ಕಮ್ಮಿ ಇರಲಿಲ್ಲ. ಇಷ್ಟಾದರೂ ಶಾಲಾ-ಕಾಲೇಜಿನ ಪಠ್ಯದಲ್ಲಿ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಶುರುವಾಗಿದ್ದು 1857ರಲ್ಲಿ ಅಂತಾನೆ ದಾಖಲಾಗಿದೆ. ಇದನ್ನು ಸರಿಪಡಿಸಿ "ಕಿತ್ತೂರು ದಂಗೆ" ಮೊಟ್ಟ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ದಾಖಲಿಸುವ ಕೆಲಸ ಆಗದಿರುವುದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಚೆನ್ನಮ್ಮನಿಗೆ ಮಾಡಿರುವ ದೊಡ್ಡ ಅಪಮಾನ ಎಂಬ ನೋವು ಚೆನ್ನಮ್ಮನ ಅಭಿಮಾನಿಗಳದ್ದು.
ಎರಡನೇ ಯುದ್ಧದಲ್ಲಿ ಕಿತ್ತೂರು ಸಂಸ್ಥಾನ ಸೋತಾಗ ರಾಣಿ ಚೆನ್ನಮ್ಮನನ್ನು ಬಂಧಿಸುವ ಬ್ರಿಟಿಷರು ಬೈಲಹೊಂಗಲದಲ್ಲಿ ಗೃಹಬಂಧನದಲ್ಲಿ ಇರಿಸುತ್ತಾರೆ. ಹೀಗೆ ಐದು ವರ್ಷ ಕಳೆಯುವ ಚೆನ್ನಮ್ಮ 1829ರ ಫೆಬ್ರವರಿ 2ರಂದು ಲಿಂಗೈಕ್ಯರಾಗುತ್ತಾರೆ. ಆಗ ಬೈಲಹೊಂಗಲದಲ್ಲಿರುವ ಕಲ್ಮಠದ ಜಾಗದಲ್ಲಿಯೇ ಚೆನ್ನಮ್ಮನವರ ಅಂತ್ಯಕ್ರಿಯೆ ನಡೆಯುತ್ತದೆ. ಆ ಜಾಗದಲ್ಲೇ ಚೆನ್ನಮ್ಮನ ಒಂದು ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಇದು ಈಗ ಪವಿತ್ರ ಕ್ಷೇತ್ರವಾಗಿ ಮಾರ್ಪಟ್ಟಿದೆ. ಇನ್ನು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದಡಿ ಸಮಾಧಿ ಸ್ಥಳದಲ್ಲಿ 12 ವರ್ಷಗಳ ಹಿಂದೆ ಕೆಲ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆದರೆ, ಆಮೆಗತಿಯ ಕಾಮಗಾರಿಯಿಂದ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಚೆನ್ನಮ್ಮನ ಸಮಾಧಿ ಸ್ಥಳದ ಸುತ್ತಲೂ ಸುಂದರವಾದ ಗ್ಲಾಸ್ ಹೌಸ್ ನಿರ್ಮಿಸಲಾಗಿದೆ. ಆದರೆ, ಇನ್ನುಳಿದಂತೆ ಉದ್ಯಾನ, ಚೆನ್ನಮ್ಮನ ಜೀವನಗಾಥೆ ಬಿಂಬಿಸುವ ಪ್ರತಿರೂಪಗಳು, ವಸ್ತು ಸಂಗ್ರಹಾಲಯ ಕಾಮಗಾರಿಗಳು ಪೂರ್ತಿಯಾಗಿಲ್ಲ. ಸಮಾಧಿ ಆವರಣದಲ್ಲಿ ಸ್ವಚ್ಛತೆ ಅಷ್ಟಕ್ಕಷ್ಟೇ. ಕಸಕಡ್ಡಿ ತುಂಬಿ ಅವ್ಯವಸ್ಥೆಯ ಆಗರವಾಗಿದೆ. ಮಳೆಯಾದರೆ ಕೆಸರು ಗದ್ದೆಯಂತಾಗಿದೆ. ಇನ್ನು ಕಾಮಗಾರಿ ವಿಳಂಬಕ್ಕೆ ಅನುದಾನದ ಕೊರತೆಯೋ, ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯೋ ಗೊತ್ತಾಗುತ್ತಿಲ್ಲ. ಹಾಗಾಗಿ, ಈ ಸ್ಥಳವನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿ ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಪಡಿಸಿ, ಪ್ರಸಿದ್ಧ ಪ್ರವಾಸಿ ತಾಣ ಮಾಡಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.
ಉತ್ತರದ ಶೂರರಿಗೆ ಬೆಣ್ಣೆ, ದಕ್ಷಿಣದ ವೀರರಿಗೆ ಸುಣ್ಣ: ಉತ್ತರ ಭಾರತದ ಅನೇಕ ಸ್ವಾತಂತ್ರ್ಯ ಹೋರಾಟಗಾರರಿಗೆ ಸಿಕ್ಕಷ್ಟು ಪ್ರಾಧಾನ್ಯತೆ ಇಲ್ಲಿಯ ಶೂರರಿಗೆ ಸಿಕ್ಕಿಲ್ಲ. ಝಾನ್ಸಿ ರಾಣಿ ಲಕ್ಷ್ಮೀ ಬಾಯಿ, ಭಗತ್ ಸಿಂಗ್, ಮಂಗಲ್ ಪಾಂಡೆ ಸೇರಿ ಅನೇಕರ ಬಗ್ಗೆ ದೇಶದ ಎಲ್ಲಾ ರಾಜ್ಯಗಳ ಮಕ್ಕಳು ಪಠ್ಯದಲ್ಲಿ ಓದಿದ್ದಾರೆ. ಆದರೆ, ರಾಣಿ ಚೆನ್ನಮ್ಮ, ಸರ್ದಾರ ಗುರುಸಿದ್ದಪ್ಪ, ಅಮಟೂರ ಬಾಳಪ್ಪ, ಸಂಗೊಳ್ಳಿ ರಾಯಣ್ಣ ಸೇರಿ ಈ ಭಾಗದ ಅನೇಕ ಹೋರಾಟಗಾರರ ಬಗ್ಗೆ ಉತ್ತರದವರಿಗೆ ಗೊತ್ತೆ ಇಲ್ಲ. ಇದಕ್ಕೆಲ್ಲಾ ಕಾರಣ ಮಲತಾಯಿ ಧೋರಣೆ. ಇನ್ಮುಂದೆ ಆದರೂ ಈ ತಾರತಮ್ಯ ನೀತಿಯನ್ನು ಕೈ ಬಿಟ್ಟು ಎಲ್ಲಾ ಹೋರಾಟಗಾರರಿಗೂ ಸೂಕ್ತ ಗೌರವ ಸಿಗಬೇಕಿದೆ ಎನ್ನುತ್ತಾರೆ ಸ್ಥಳೀಯ ಹೋರಾಟಗಾರರು.
ಸಮಾಜಸೇವಕ ರಫೀಕ್ ಬಡೇಘರ್ ಈಟಿವಿ ಭಾರತ ಜೊತೆಗೆ ಮಾತನಾಡಿ, 10 ವರ್ಷ ಆದರೂ ಸಮಾಧಿ ಸ್ಥಳದ ಕಾಮಗಾರಿ ಪೂರ್ಣ ಆಗಿಲ್ಲ. ನಮ್ಮ ತಾಳ್ಮೆ ಪರೀಕ್ಷಿಸಲು ಹೋಗಬೇಡಿ. ಬ್ರಿಟಿಷ್ ಅಧಿಕಾರಿ ಥ್ಯಾಕರೆ ಚೆಂಡು ಹಾರಿಸಿ 200 ವರ್ಷ ಆಗುತ್ತಿದೆ. ಇದರ ಸವಿನೆನಪಿಗೋಸ್ಕರ ವೀರಮಾತೆ ಚೆನ್ನಮ್ಮನ ಐಕ್ಯಸ್ಥಳ ರಾಷ್ಟ್ರೀಯ ಸ್ಮಾರಕವೆಂದು ತಕ್ಷಣವೇ ಘೋಷಿಸಬೇಕು. ಚೆನ್ನಮ್ಮನ ತ್ಯಾಗ, ಬಲಿದಾನದಿಂದ ಇಂದು ರಾಜಕಾರಣಿಗಳು ಅಧಿಕಾರ ಅನುಭವಿಸುತ್ತಿದ್ದಿರಿ. ತನ್ನ ಜೀವ ಕೊಟ್ಟು ಈ ನಾಡನ್ನು ಉಳಿಸಿರುವ ಚೆನ್ನಮ್ಮನದ್ದು ದೊಡ್ಡ ತ್ಯಾಗ. ಅಂಥ ಮಹಾತಾಯಿಗೆ ಗೌರವ ತರುವ ಕೆಲಸ ಆಗಬೇಕು ಎಂದು ಒತ್ತಾಯಿಸಿದರು.
ಪರಕೀಯರು ನಮ್ಮ ಜನ್ಮಭೂಮಿ ಯಾಕೆ ಆಳುತ್ತಿದ್ದಾರೆ ಎಂದು ಮೊಟ್ಟ ಮೊದಲ ಬಾರಿಗೆ ಪ್ರಶ್ನಿಸಿದ್ದು ರಾಣಿ ಚೆನ್ನಮ್ಮ. ಅಲ್ಲದೇ ಬ್ರಿಟಿಷರಿಗೆ ಮೊದಲ ಸೋಲಿನ ರುಚಿ ತೋರಿಸಿದ ಕೀರ್ತಿ ಕೂಡ ಇದೇ ವೀರರಾಣಿಗೆ ಸಲ್ಲುತ್ತದೆ. ಇಂಥ ಚೆನ್ನಮ್ಮನ ಇತಿಹಾಸದಲ್ಲಿ ಕಾಕತಿ, ಕಿತ್ತೂರು ಮತ್ತು ಬೈಲಹೊಂಗಲ ಮೂರು ಪ್ರದೇಶಗಳು ಬಹಳ ಪ್ರಾಮುಖ್ಯತೆ ಪಡೆದುಕೊಂಡಿವೆ. ಇವುಗಳ ಬಗ್ಗೆ ಪಠ್ಯಪುಸ್ತಕಗಳಲ್ಲಿ ಮಕ್ಕಳಿಗೆ ತಿಳಿಸಬೇಕು. ಅಲ್ಲದೇ ಈ ಮೂರು ಸ್ಥಳಗಳನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಿ ಅಭಿವೃದ್ಧಿ ಪಡಿಸಬೇಕು. ಇನ್ನು ಚೆನ್ನಮ್ಮನ ನೈಜ ಇತಿಹಾಸ ಹೊರ ತರುವ ಕೆಲಸವೂ ಆಗಬೇಕು ಎನ್ನುತ್ತಾರೆ ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ.
ಏನಾಗಬೇಕು?: ಪ್ರವಾಸಿಗರಿಗೆ ರಾಣಿ ಚೆನ್ನಮ್ಮನ ಇತಿಹಾಸ ತಿಳಿಸಲು ಗೈಡ್ಗಳನ್ನು ನೇಮಿಸಬೇಕು. ಬೈಲಹೊಂಗಲದಲ್ಲಿ ಚೆನ್ನಮ್ಮನಿಗೆ ಸಂಬಂಧಪಟ್ಟ ಸ್ಥಳಗಳನ್ನು ಗುರುತಿಸಬೇಕು. ಗೃಹಬಂಧನದಲ್ಲಿರಿಸಿದ್ದ ಕೋಟೆ, ಬಾವಿಗಳನ್ನು ಮುಂದಿನ ಪೀಳಿಗೆಗೆ ಜೀವಂತ ಇಡಬೇಕು. ರಾಕ್ ಗಾರ್ಡನ್, ವಸ್ತು ಸಂಗ್ರಹಾಲಯ ಮತ್ತು ಉದ್ಯಾನ ನಿರ್ಮಾಣ ಸೇರಿ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಿ, ಸಾರ್ವಜನಿಕರ ದರ್ಶನಕ್ಕೆ ಮುಕ್ತಗೊಳಿಸಬೇಕಿದೆ.
ಬೈಲಹೊಂಗಲದಲ್ಲೂ ಉತ್ಸವ ಮಾಡಿ: 200ನೇ ಚೆನ್ನಮ್ಮನ ವಿಜಯೋತ್ಸವ ಹಿನ್ನೆಲೆ ಕಿತ್ತೂರಿನಲ್ಲಿ ಅ.23, 24, 25ರಂದು ಮೂರು ದಿನ ಅದ್ಧೂರಿಯಾಗಿ ಉತ್ಸವ ಆಚರಿಸಲಾಗುತ್ತದೆ. ಅ.22ರಂದು ಬೆಳಗಾವಿ ನಗರದಲ್ಲಿ ಒಂದು ದಿನದ ರಸಮಂಜರಿ ಏರ್ಪಡಿಸಲಾಗಿದೆ. ಅಲ್ಲದೇ ಅ.23ರಂದು ಚೆನ್ನಮ್ಮನ ತವರೂರು ಕಾಕತಿಯಲ್ಲೂ ಕಾರ್ಯಕ್ರಮ ನಡೆಯುತ್ತದೆ. ಅದೇ ರೀತಿ ಚೆನ್ನಮ್ಮನ ಐಕ್ಯಸ್ಥಳ ಬೈಲಹೊಂಗಲದಲ್ಲೂ ಉತ್ಸವ ನಿಮಿತ್ತ ಕಾರ್ಯಕ್ರಮ ಆಯೋಜಿಸುವಂತೆ ಒತ್ತಾಯ ಕೇಳಿ ಬಂದಿದೆ. ಈ ಸಂಬಂಧ ಸಭೆ ಮಾಡಿರುವ ಸ್ಥಳೀಯರು ತಮ್ಮ ಬೇಡಿಕೆ ಈಡೇರದಿದ್ದರೆ ಬೈಲಹೊಂಗಲ ಬಂದ್ಗೆ ಕರೆ ನೀಡಲು ನಿರ್ಧರಿಸಿದ್ದಾರೆ.
ಹೇಗೆ ಬರಬೇಕು?: ಕ್ರಾಂತಿಯ ನೆಲ ಬೈಲಹೊಂಗಲದಲ್ಲಿರುವ ರಾಣಿ ಚೆನ್ನಮ್ಮನ ಸಮಾಧಿ ವೀಕ್ಷಣೆಗೆ ಬರುವ ಪ್ರವಾಸಿಗರು ಬೆಳಗಾವಿಯಿಂದ ಬರುವವರಿಗೆ 46 ಕಿ.ಮೀ., ಧಾರವಾಡ 50ಕಿ.ಮೀ., ಕಿತ್ತೂರು 26 ಕಿ.ಮೀ., ಸಂಗೊಳ್ಳಿ 13 ಕಿ.ಮೀ ಅಂತರವಿದೆ. ಬಸ್ ಸೌಕರ್ಯ ಸಾಕಷ್ಟಿದ್ದು, 26 ಕಿ.ಮೀ. ಅಂತರದಲ್ಲಿ ಕಿತ್ತೂರು, ಸಂಗೊಳ್ಳಿ ಮತ್ತು ಬೈಲಹೊಂಗಲಕ್ಕೆ ತಾವು ಭೇಟಿ ನೀಡಬಹುದು.
ಇದನ್ನೂ ಓದಿ: ಕಿತ್ತೂರು ಇತಿಹಾಸ ಸಾರುತ್ತಿದೆ ಇಂದಿರಾ ಗಾಂಧಿ ಉದ್ಘಾಟಿಸಿದ್ದ ರಾಣಿ ಚೆನ್ನಮ್ಮ ವಸ್ತು ಸಂಗ್ರಹಾಲಯ