ಮೈಸೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸಚಿವ ಸಂಪುಟದಲ್ಲಿ ಯಾವುದೇ ಚರ್ಚೆಯಾಗಿಲ್ಲ. ಪೋಲೀಸರು ತನಿಖೆ ಮಾಡುತ್ತಿದ್ದಾರೆ. ತಪ್ಪಿತಸ್ಥರಿಗೆ ಕಾನೂನು ರೀತಿ ಶಿಕ್ಷೆ ಆಗುತ್ತದೆ ಎಂದು ಮೈಸೂರಿನಲ್ಲಿ ಸಚಿವ ಡಾ.ಹೆಚ್.ಸಿ.ಮಹಾದೇವಪ್ಪ ಹೇಳಿದರು.
ಇಂದು ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮವನ್ನ ಅರಮನೆ ಮುಂಭಾಗದಲ್ಲಿ ಉದ್ಘಾಟಿಸಿ ನಂತರ ಮಾಧ್ಯಮಗಳ ಜತೆ ಮಾತನಾಡಿದ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹಾದೇವಪ್ಪ, ನಾನು 1985 ರಿಂದಲೂ ಯೋಗ ಮಾಡುತ್ತಿದ್ದೇನೆ. ಈ ವಯಸ್ಸಿನಲ್ಲೂ ಆರೋಗ್ಯವಾಗಿದ್ದೇನೆ. ಪ್ರತಿಯೊಬ್ಬರು ಆರೋಗ್ಯದ ದೃಷ್ಟಿಯಿಂದ ಯೋಗ ಮಾಡಬೇಕು. ನಾನು ಸಂತೋಷದಿಂದ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ ಎಂದರು.
ರೇಣುಕಾಸ್ವಾಮಿ ಹತ್ಯೆ ವಿಚಾರದಲ್ಲಿ ನಟ ದರ್ಶನ್ ಅವರನ್ನ ಸೇಫ್ ಮಾಡಲು ಕೆಲವರ ಒತ್ತಡ ಹಾಕುತ್ತಿದ್ದಾರೆ ಎಂಬ ಬಗ್ಗೆ ಮಾತನಾಡಿದ ಅವರು, ಈ ವಿಚಾರವಾಗಿ ಸಚಿವ ಸಂಪುಟದಲ್ಲಿ ಯಾವುದೇ ಚರ್ಚೆಯಾಗಿಲ್ಲ. ತಪ್ಪಿತಸ್ಥರಿಗೆ ಕಾನೂನು ರೀತಿ ಶಿಕ್ಷಯಾಗುತ್ತದೆ. ಈ ವಿಚಾರವನ್ನ ಪೋಲೀಸರು ತನಿಖೆ ಮಾಡುತ್ತಿದ್ದಾರೆ. ತನಿಖೆಗೆ ಯಾವುದೇ ಒತ್ತಡ ಇಲ್ಲ ಎಂದು ಸಚಿವ ಮಹಾದೇವಪ್ಪ ಹೇಳಿದರು.
ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ: ಗ್ಯಾರಂಟಿ ಯೋಜನೆಗಳನ್ನ ರಾಜಕೀಯ ಉದ್ದೇಶಕ್ಕಾಗಿ ತಂದಿಲ್ಲ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲುವುದಿಲ್ಲ. ಬಡವರ ಆರ್ಥಿಕ ಸುಧಾರಣೆಗಾಗಿ ಗ್ಯಾರಂಟಿ ಯೋಜನೆಯನ್ನ ತಂದಿದ್ದೇವೆ. ಈ ಯೋಜನೆಗಳ ಬಗ್ಗೆ ಟೀಕೆ ಟಿಪ್ಪಣಿ ಮಾಡುತ್ತಾರೆ. ಕೆಲವರು ಯೋಜನೆಯನ್ನ ನಿಲ್ಲುಸುತ್ತಾರೆ ಎಂಬ ಸುಳ್ಳು ವದ್ಧಂತಿಗಳನ್ನ ಹರಡುತ್ತಾರೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನ ನಿಲ್ಲಿಸುವ ಮಾತೇ ಇಲ್ಲ. ಜನರು ಆತಂಕ ಪಡುವ ಅಗತ್ಯ ಇಲ್ಲ ಎಂದು ಪ್ರತಿಕ್ರಿಯೆ ನೀಡಿದರು.
ಪೆಟ್ರೋಲ್-ಡಿಸೇಲ್ ಏರಿಕೆ ಸಮರ್ಥಿಸಿಕೊಂಡ ಸಚಿವ: ಪೆಟ್ರೋಲ್ ಮತ್ತು ಡೀಸೆಲ್ ಏರಿಕೆಯನ್ನು ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದ ಬೆಲೆ ಕಡಿಮೆ ಇದ್ದರೂ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರ ಕಡಿಮೆ ಮಾಡಲಿಲ್ಲ. ಅಕ್ಕ ಪಕ್ಕದ ರಾಜ್ಯಗಳಿಗೆ ಹೋಲಿಸಿದರೇ ನಮ್ಮ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಡಿಮೆ ಇದೆ. ವಿರೋಧ ಪಕ್ಷಗಳು ಸುಮ್ಮನೆ ಕೀಟಲೆ ಮಾಡುತ್ತಾರೆ. ಈ ಎಲ್ಲ ಕಾರಣಗಳಿಗೂ ಅವೈಜ್ಞಾನಿಕ ಜಿಎಸ್ಟಿ ಏರಿಕೆ ಕಾರಣ ಎಂದರು.