ಹುಬ್ಬಳ್ಳಿ: ದಾಂಡೇಲಿಯ ಕಾಳಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಆರು ಜನ ಸಾವನ್ನಪ್ಪಿದ್ದು, ಈಶ್ವರ ನಗರದಲ್ಲಿರುವ ಮೃತರ ಮನೆಯಲ್ಲಿ ನೀರವಮೌನ ಆವರಿಸಿದೆ.
ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಈಶ್ವರ ನಗರಕ್ಕೆ ನಜೀರ್ ಅಹ್ಮದ್ ಕುಟುಂಬ ಆಗಮಿಸಿ ಮನೆಯ ಗೃಹ ಪ್ರವೇಶ ಮಾಡಿತ್ತು. ನಜೀರ್ ಅಹ್ಮದ್ ಮೂಲತಃ ಧಾರವಾಡ ಜಿಲ್ಲೆಯ ಹಳ್ಳಿಕೇರಿ ನಿವಾಸಿಯಾಗಿದ್ದು, ಧಾರವಾಡ ಪಾಲಿಕೆಯಲ್ಲಿ ಗುತ್ತಿಗೆ ಕೆಲಸ ಮಾಡುತ್ತ ಸಾಲ ಶೂಲ ಮಾಡಿ ಮನೆ ಕಟ್ಟಿಸಿದ್ದರು. ಕೇವಲ ಮನೆಯಲ್ಲಿ ನಾಲ್ಕು ತಿಂಗಳ ವಾಸವಾಗಿದ್ದರಷ್ಟೆ. ಆದರೆ ನಿನ್ನೆ ನಡೆದ ದುರಂತದಿಂದ ಇದೀಗ ಮನೆಯೇ ಅನಾಥವಾಗಿದೆ.
ನಜೀರ್ ಅಹ್ಮದ್ ಸಹೋದರಿ ಕಣ್ಣೀರು: 6 ಜನ ಸದಸ್ಯರು ಮೃತಪಟ್ಟಿದ್ದು, ಶಾಕ್ನಿಂದ ಹೊರಬರಲಾರದೇ ಕುಟುಂಬದಲ್ಲಿ ದು:ಖಮಡುಗಟ್ಟಿದೆ.
ಈಶ್ವರ ನಗರದ ನಿವಾಸದಲ್ಲಿ ಮೃತ ನಜೀರ್ ಅಹ್ಮದ್ ಸಹೋದರಿ ಫರೀದಾ ಬೇಗಂ, ಪಿಕ್ನಿಕ್ಗೆ ಎಂದು ದಾಂಡೇಲಿಗೆ ಹೋಗಿದ್ದರ ಬಗ್ಗೆ ಮಾತನಾಡಿದ್ದಾರೆ. 'ನಿನ್ನೆ ರಜೆಯ ಕಾರಣ ಕುಟುಂಬ ಸಮೇತ ಮುಂಜಾನೆ ದಾಂಡೇಲಿಗೆ ಹೋಗಿದ್ದರು. ಈ ಬಗ್ಗೆ ಮೊದಲಿಗೆ ನಮಗೆ ಮಾಹಿತಿ ಇರಲಿಲ್ಲ. ಪ್ರವಾಸಕ್ಕೆ ಹೋಗುವ ಸಮಯದಲ್ಲಿ ವಾಟ್ಸಪ್ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದರು. ಆಗ ಅವರು ದಾಂಡೇಲಿಗೆ ಹೋಗಿರುವುದು ತಿಳಿಯಿತು. ಬಳಿಕ ನನ್ನ ಪತಿಗೆ ಮೃತ ನಜೀರ್ ಅಹಮ್ಮದ್ ಪತ್ನಿ ಕರೆ ಮಾಡಿ ಮಿಸ್ಸಿಂಗ್ ಆಗಿರುವುದರ ಬಗ್ಗೆ ಹೇಳಿದರು. ಆಗ ಘಟನೆ ಬಗ್ಗೆ ಗೊತ್ತಾಯಿತು " ಎಂದು ಮಾಹಿತಿ ನೀಡಿದರು.
ಘಟನೆಯಲ್ಲಿ ನಜೀರ್ ಅಹಮ್ಮದ್ ಹೆಂಡತಿ ಸಲ್ಮಾ ಹಾಗೂ ಅತ್ತೆ ಬದುಕುಳಿದಿದ್ದಾರೆ. ಉಳಿದದಂತೆ ನಜೀರ್ ಅಹ್ಮದ್ ಹಾಗೂ ಇಬ್ಬರು ಮಕ್ಕಳಾದ ಅಲ್ಫಿಯಾ, ಮಾಹಿನ್, ನಜೀರ್ ಸಂಬಂಧಿಯಾದ ರೇಷ್ಮಾ ಹಾಗೂ ರೇಷ್ಮಾ ಮಕ್ಕಳಾದ ಇಫ್ರಾ, ಅಭಿದ್ ಘಟನೆಯಲ್ಲಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಕಾಳಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಆರು ಮಂದಿ ಸಾವು; ದಾಂಡೇಲಿಯಲ್ಲಿ ದುರಂತ - Kali River Tragedy