ಬೆಂಗಳೂರು: ಅ.21 ರಂದು ನಡೆಯಲಿರುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸುವ ವಿಧಾನ ಪರಿಷತ್ ಸ್ಥಾನದ ಮರು ಚುನಾವಣೆಗೆ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಿದ್ದು, ಉಭಯ ಜಿಲ್ಲೆಗಳ ಮುಖಂಡರ ಅಭಿಪ್ರಾಯ ಪಡೆದು ಕೇಂದ್ರಕ್ಕೆ ಪಟ್ಟಿ ಕಳಿಸಿಕೊಡಲು ಬಿಜೆಪಿ ರಾಜ್ಯ ಘಟಕ ನಿರ್ಧರಿಸಿದೆ.
ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆಯಿಂದ ತೆರವಾದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸುವ ವಿಧಾನ ಪರಿಷತ್ ಸ್ಥಾನದ ಮರು ಚುನಾವಣೆ ಅ.21 ರಂದು ನಿಗದಿಯಾಗಿದ್ದು ಬಿಜೆಪಿ- ಜೆಡಿಎಸ್ ಮ್ರೈತ್ರಿ ಅಭ್ಯರ್ಥಿ ಆಯ್ಕೆ ಕಸರತ್ತು ನಡೆಯುತ್ತಿದೆ. ಬಿಜೆಪಿ ಗೆದ್ದಿದ್ದ ಕ್ಷೇತ್ರವಾಗಿರುವ ಹಿನ್ನೆಲೆಯಲ್ಲಿ ಟಿಕೆಟ್ ಬಿಜೆಪಿ ಪಾಲಿಗೆ ಸಿಕ್ಕಿದ್ದು ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡುತ್ತಿದೆ. ಹಾಗಾಗಿ ಈ ಬಾರಿ ಗೆಲ್ಲುವ ಸಾಧ್ಯತೆ ಬಿಜೆಪಿಗೇ ಹೆಚ್ಚಾಗಿದೆ. ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಬಿಜೆಪಿಯ ಕಟ್ಟಾಳು ಆಗಿದ್ದ ಮಾಜಿ ಶಾಸಕ ರಘುಪತಿ ಭಟ್: ನೈಋುತ್ಯ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಪದವೀಧರ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದು ಪಕ್ಷ ವಿರೋಧಿ ಚಟುವಟಿಕೆ ಕಾರಣಕ್ಕೆ ಈಗ ಅವರು ರೇಸ್ನಿಂದ ಹೊರಗುಳಿಯುವಂತಾಗಿದೆ.
ಸುದೀರ್ಘ ಅವಧಿಗೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದ ಮಾಜಿ ಸಂಸದ ನಳಿನ್ಕುಮಾರ್ ಕಟೀಲ್ಗೆ ಈ ಬಾರಿಯ ಲೋಕಸಭಾ ಟಿಕೆಟ್ ನಿರಾಕರಿಸಿ ಹೊಸಬರಿಗೆ ಅವಕಾಶ ನೀಡಿದರೂ ಅಸಮಧಾನಗೊಳ್ಳದೆ ಹೊಸ ಅಭ್ಯರ್ಥಿ ಗೆಲ್ಲಿಸಲು ಅವರು ಶ್ರಮಿಸಿದ್ದರು. ಅಲ್ಲದೆ ಪಕ್ಷದ ನಿಷ್ಠೆ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ಅವರಿಗೆ ಈಗ ಪರಿಷತ್ ಟಿಕೆಟ್ ನೀಡಬೇಕು ಎನ್ನುವ ಅಭಿಪ್ರಾಯ ಪಕ್ಷದ ರಾಜ್ಯ ನಾಯಕರು ಮತ್ತು ಸಂಘ ಪರಿವಾರದ ಕಡೆಯಿಂದ ಬಂದಿದೆ ಎನ್ನಲಾಗಿದೆ. ರೇಸ್ನಲ್ಲಿ ಅವರ ಹೆಸರೇ ಮೊದಲ ಸ್ಥಾನದಲ್ಲಿದೆ.
ಕಟೀಲ್ ಜೊತೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉಡುಪಿ ನಾಯಕರಾದ ಮಟ್ಟಾರು ರತ್ನಾಕರ ಹೆಗ್ಡೆ, ಕೆ.ಉದಯ ಕುಮಾರ್ ಶೆಟ್ಟಿ, ಕುಯಿಲಾಡಿ ಸುರೇಶ್ ನಾಯಕ್, ದಕ್ಷಿಣ ಕನ್ನಡ ನಾಯಕರಾದ ಸತೀಶ್ ಕುಂಪಲ, ಕಿಶೋರ್ ಬೊಟ್ಯಾಡಿ, ಹರಿಕೃಷ್ಣ ಬಂಟ್ವಾಳ್ ಆಕಾಂಕ್ಷಿಗಳಾಗಿದ್ದಾರೆ.
ಕ್ಷೇತ್ರದ ಚುನಾವಣಾ ಉಸ್ತುವಾರಿಗಳನ್ನಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕೋಟ ಶ್ರೀನಿವಾಸ್ ಪೂಜಾರಿ, ಬ್ರಿಜೇಶ್ ಚೌಟ, ಪ್ರೀತಮ್ ಗೌಡರನ್ನು ನೇಮಿಸಿದ್ದು, ಅಭ್ಯರ್ಥಿ ಆಯ್ಕೆ ಸಂಬಂಧ ಅಭಿಪ್ರಾಯ ಸಂಗ್ರಹ ಮತ್ತು ವರದಿ ತಯಾರಿಸಿ ರಾಜ್ಯ ಘಟಕ್ಕೆ ನೀಡಿದೆ. ಇನ್ನು ನಿಕಟಪೂರ್ವ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ ಅವರ ಸಲಹೆಯನ್ನು ರಾಜ್ಯ ಘಟಕದಿಂದ ಪಡೆಯಲಾಗಿದೆ. ಜಿಲ್ಲಾ ಸಮಿತಿಗಳ ಜೊತೆಗೂ ಚರ್ಚಿಸಲಾಗಿದೆ. ಸ್ಥಳೀಯ ನಾಯಕರ ಅಭಿಪ್ರಾಯ ಹಾಗೂ ರಾಜ್ಯ ನಾಯಕರ ಅಭಿಪ್ರಾಯ ಎರಡನ್ನೂ ಆಧರಿಸಿ ಅಭ್ಯರ್ಥಿ ಹೆಸರನ್ನು ರಾಜ್ಯ ಘಟಕ ಅಂತಿಮಗೊಳಿಸಬೇಕಿದ್ದು, ಮೂರು ಹೆಸರುಗಳನ್ನು ಹೈಕಮಾಂಡ್ಗೆ ಕಳಿಸಿಕೊಡಲಿದೆ. ಹೈಕಮಾಂಡ್ ಅಂತಿಮವಾಗಿ ಅಭ್ಯರ್ಥಿ ಹೆಸರು ಪ್ರಕಟಿಸಲಿದೆ.
ಅಚ್ಚರಿ ಆಯ್ಕೆ: ಇನ್ನು, ರಾಜ್ಯ ಘಟಕದ ಶಿಫಾರಸು ಪರಿಗಣಿಸದೆ ಹೈಕಮಾಂಡ್ನಿಂದ ಅಚ್ಚರಿ ಅಭ್ಯರ್ಥಿ ಆಯ್ಕೆಯ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಈ ಹಿಂದೆಯೂ ಸಾಕಷ್ಟು ಬಾರಿ ಅಚ್ಚರಿ ಆಯ್ಕೆ ಮಾಡಿದ ನಿದರ್ಶನಗಳಿವೆ. ರಾಜ್ಯ ಘಟಕದ ಶಿಫಾರಸು ಪರಿಗಣಿಸುವ ಸಾಧ್ಯತೆ ಎಷ್ಟಿದೆಯೋ ಪರಿಗಣಿಸದೇ ಇರುವ ಸಾಧ್ಯತೆಯೂ ಅಷ್ಟೇ ಇದೆ. ರಾಜ್ಯ ಘಟಕದ ಶಿಫಾರಸಿಗೂ ಮೊದಲೇ ಅಭ್ಯರ್ಥಿಯನ್ನು ಅಂತಿಮಗೊಳಿಸಿದರೂ ಅಚ್ಚರಿ ಇಲ್ಲ.
ಇನ್ನು, ಈ ಕುರಿತು ಮಾಹಿತಿ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಶೀಘ್ರದಲ್ಲಿ ಅಭ್ಯರ್ಥಿ ಹೆಸರು ಅಂತಿಮಗೊಳಿಸಿ ಹೈಕಮಾಂಡ್ಗೆ ಕಳುಹಿಸಿಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಚನ್ನಪಟ್ಟಣವನ್ನು ಚಿನ್ನದ ನಾಡು ಮಾಡಲು ತೀರ್ಮಾನಿಸಿದ್ದೇವೆ: ಡಿಸಿಎಂ ಡಿಕೆಶಿ - D K Shivakumar