ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಘಟನಾ ಸ್ಥಳಕ್ಕೆ ಎನ್ಎಸ್ಜಿ ಕಮಾಂಡೋ ತಂಡ ಆಗಮಿಸಿ ಕೂಲಂಕಶವಾಗಿ ಪರಿಶೀಲನೆ ನಡೆಸುತ್ತಿದೆ. ಬಾಂಬ್ ನಿಷ್ಕ್ರಿಯ ದಳದ ಜೊತೆ ಎನ್ಎಸ್ಜಿ ಹೊಟೇಲ್ ಹಾಗೂ ಸುತ್ತಮುತ್ತ ಕಡೆಗಳಲ್ಲಿ ತಪಾಸಣೆ ನಡೆಸುತ್ತಿದೆ.
ಮತ್ತೊಂದಡೆ ಆರೋಪಿಯ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ. ಪ್ರಕರಣದ ಸಂಬಂಧ ರಚಿಸಲಾಗಿರುವ 8 ವಿಶೇಷ ತಂಡಗಳು ತನಿಖೆ ನಡೆಸುತ್ತಿವೆ. ಇನ್ನೊಂದೆಡೆ ಎನ್ಐಎ ತನ್ನದೇ ಶೈಲಿಯಲ್ಲಿ ಇನ್ವೆಸ್ಟಿಗೇಷನ್ ಮಾಡುತ್ತಿದೆ.
ಆರೋಪಿಯ ಟ್ರಾವೆಲ್ ಹಿಸ್ಟರಿ ಪತ್ತೆ ಕಾರ್ಯ ಚುರುಕು: ಬಾಂಬ್ ಸ್ಫೋಟಕ್ಕೂ ಮುನ್ನ ಶಂಕಿತ ಬ್ಯಾಗ್ ಸಮೇತ ಓಡಾಡಿದ್ದು, ಸಿಸಿಟಿವಿಯಲ್ಲಿ ಆತನ ಚಹರೆ ಪತ್ತೆಯಾಗಿದೆ. ಆದರೆ ಮುಖ ಕಾಣದಂತೆ ಕ್ಯಾಪ್ ಧರಿಸಿ ಓಡಾಡಿದ್ದು ಕಂಡು ಬಂದಿದೆ. ಶಂಕಿತ ಎಲ್ಲಿಂದ ಬಂದಿದ್ದಾನೆ ಹಾಗೂ ಬಾಂಬ್ ಇಟ್ಟು ಎಲ್ಲಿಗೆ ತೆರಳಿದ ಎನ್ನುವ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ. ಆತ ಉಳಿದುಕೊಂಡಿದ್ದ ಸ್ಥಳ, ಓಡಾಟ ನಡೆಸಿರುವ ರಸ್ತೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈಗಾಗಲೇ 300ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಪ್ರಕರಣ ಎನ್ಐಎಗೆ ಹಸ್ತಾಂತರಿಸುವ ಸಾಧ್ಯತೆ: ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸುವ ಸಾಧ್ಯತೆ ದಟ್ಟವಾಗಿದೆ. ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಹಾಗೂ ಇಲ್ಲಿನ ಕೆಫೆಯಲ್ಲಿ ನಡೆದ ಸ್ಫೋಟಕ್ಕೂ ಸಾಮ್ಯತೆ ಕಂಡು ಬಂದಿರುವುದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ಕಾನೂನುಬಾಹಿರ ಚಟುವಟಿಕೆ ತಡೆಗಟ್ಟುವಿಕೆ ಕಾಯ್ದೆಯಡಿ ಪ್ರಕರಣ ದಾಖಲಾಗಿರುವುದರಿಂದ ಎನ್ಐಎ ವಹಿಸಿಕೊಳ್ಳಬೇಕಿದೆ. ಈ ಬಗ್ಗೆ ಅಧಿಕೃತವಾಗಿ ರಾಜ್ಯ ಸರ್ಕಾರ ಆದೇಶ ಮಾಡಬೇಕಿದೆ.
ಸ್ಥಳದಲ್ಲಿ ಪರಿಶೀಲನೆ: ಘಟನೆ ನಡೆದ ಸ್ಥಳಕ್ಕೆ ಬಂದು ಪರಿಶೀಲಿಸಿ ತಮ್ಮದೇ ಆದ ಶೈಲಿಯಲ್ಲಿ ತನಿಖೆ ನಡೆಸುತ್ತಿರುವ ಎನ್ಐಎ ಅಧಿಕಾರಿಗಳು ಸಿಸಿಬಿ ಪೊಲೀಸರಿಂದ ತನಿಖೆಗೆ ಪೂರಕವಾದ ಹೆಚ್ಚುವರಿ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ. ಇಂದು ಸಂಜೆ ಅಥವಾ ನಾಳೆ ಎನ್ಐಎಗೆ ಅಧಿಕೃತವಾಗಿ ಕೇಸ್ ಒಪ್ಪಿಸುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸುಧಾರಿತ ಸ್ಫೋಟಕ ಸಾಧನ ಬಳಸಿ ಸ್ಫೋಟಕ್ಕೆ ಕಾರಣರಾಗಿರುವ ಆರೋಪಿಯು ವ್ಯವಸ್ಥಿತ ಸಂಚು ಮಾಡಿಕೊಂಡಿರುವುದು ದೃಢವಾಗಿದೆ. ಬಾಂಬ್ಗೆ ಬೇಕಾದ ಸಲಕರಣೆಗಳನ್ನು ಎಲ್ಲಿ ಖರೀದಿ ಮಾಡಿದ್ದ, ಎಲ್ಲಿ ಬಾಂಬ್ ತಯಾರು ಮಾಡಿದ ಹಾಗೂ ಈ ಕೃತ್ಯದ ಹಿಂದೆ ಯಾರೆಲ್ಲಾ ಇದ್ದಾರೆ ಎಂಬುದನ್ನ ಆರೋಪಿಯ ಬಂಧನದ ಬಳಿಕ ತಿಳಿಯಲಿದೆ. ದುಷ್ಕರ್ಮಿ ಕೃತ್ಯ ಸೂಕ್ಷ್ಮವಾಗಿ ಗಮನಿಸಿದರೆ ಸೂಕ್ತ ತರಬೇತಿ ಪಡೆದು ಬಾಂಬ್ ಸ್ಫೋಟಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಕೆಫೆ ಸ್ಫೋಟ; ಸರ್ಕಾರವೇ ಗಾಯಾಳುಗಳ ಚಿಕಿತ್ಸಾ ವೆಚ್ಚ ಭರಿಸಲಿದೆ: ಸಿಎಂ ಸಿದ್ದರಾಮಯ್ಯ