ಚಿಕ್ಕೋಡಿ (ಬೆಳಗಾವಿ) : ಅಪ್ಪ ಮಕ್ಕಳು ಇಷ್ಟು ದಿನ ಬ್ಲ್ಯಾಕ್‌ಮೇಲ್ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಅವರ ಕಪಿಮುಷ್ಠಿಯಿಂದ ಈ ಪಕ್ಷವನ್ನು ಹೊರತೆಗೆಯಬೇಕು, ಈ ಬಗ್ಗೆ ನಾವು ಹೈಕಮಾಂಡ್ಗೆ ಮನವಿ ಮಾಡುತ್ತೇವೆ. ಒಂದು ಐತಿಹಾಸಿಕ ನಿರ್ಣಯವನ್ನು ಬಿಜೆಪಿ ವರಿಷ್ಠರು ತೆಗೆದುಕೊಳ್ಳಬೇಕೆಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಪರೋಕ್ಷವಾಗಿ ಸ್ವಪಕ್ಷದ ನಾಯಕರಾದ ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ಕಿಡಿ ಕಾರಿದ್ದಾರೆ.
ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಇಷ್ಟು ದಿನ ಅಪ್ಪ ಮಕ್ಕಳು ಬ್ಲ್ಯಾಕ್‌ಮೇಲ್ ಮಾಡಿಕೊಂಡು ತಮ್ಮ ಕಪಿಮುಷ್ಠಿಯಲ್ಲಿ ಪಕ್ಷವನ್ನು ನಡೆಸಿಕೊಂಡು ಬಂದಿದ್ದಾರೆ. ಆ ಪಕ್ಷವನ್ನು ಉಳಿಸಲು ಹೈಕಮಾಂಡ್ ಐತಿಹಾಸಿಕ ನಿರ್ಣಯ ತೆಗೆದುಕೊಳ್ಳಬೇಕೆಂದು ನಾವು ಬಿಜೆಪಿ ವರಿಷ್ಠರಿಗೆ ಮನವಿ ಮಾಡುತ್ತೇವೆ ಎಂದಿದ್ದಾರೆ.
ರಾಜ್ಯ ಸರ್ಕಾರಕ್ಕೆ ಯಾವುದೇ ನೈತಿಕತೆ ಇಲ್ಲ, ರಾಜ್ಯ ಸರ್ಕಾರ ದಿವಾಳಿಯಾಗಿದೆ. ಈ ಸರ್ಕಾರದಲ್ಲಿ ದುಡ್ಡಿಲ್ಲ. ಎಲ್ಲ ಭ್ರಷ್ಟಾಚಾರ ಹಗರಣದಲ್ಲಿ ಸಿಲುಕಿದೆ. ಸಿಎಂ ಸಿದ್ದರಾಮಯ್ಯ ಅವರು ಮೊದಲ ರೀತಿಯಲ್ಲಿ ಇಲ್ಲ. ಅವರು ರಾಜೀನಾಮೆ ಕೊಟ್ಟು ಮತ್ತೊಮ್ಮೆ ಚುನಾವಣೆಗೆ ಬರುವುದು ಒಳ್ಳೆಯದು. ಸರ್ಕಾರದಲ್ಲಿ ಕಂಟ್ರೋಲ್ ತಪ್ಪಿದೆ. ಇನ್ನೂ ಆ ಸರ್ಕಾರವನ್ನು ಸರಿದಾರಿಗೆ ತರೋಕೆ ಬರುವುದಿಲ್ಲ. ಸಿಡಿ ಶಿವುನಿಂದ ಸರ್ಕಾರ ಸಂಪೂರ್ಣ ಕಂಟ್ರೋಲ್ ತಪ್ಪಿದ್ದರಿಂದ ಸಿಎಂ ರಾಜೀನಾಮೆ ಕೊಟ್ಟು ಮತ್ತೊಮ್ಮೆ ಚುನಾವಣೆಗೆ ಬರಲಿ ಎಂದು ಹೇಳಿದರು.
ರಾಜ್ಯದಲ್ಲಿ ವಾಲ್ಮೀಕಿ ನಿಗಮ ಭ್ರಷ್ಟಾಚಾರ ತುಂಬಾ ಮುಖ್ಯವಾಗಿದೆ. ನಾವು ಸಾಮೂಹಿಕ ನಾಯಕತ್ವದಲ್ಲಿ ಬಳ್ಳಾರಿಗೆ ಪಾದಯಾತ್ರೆ ಹೋಗುತ್ತೇವೆ. ಮುಡಾ ಹಗರಣ ವ್ಯಕ್ತಿಗತವಾಗಿದೆ. ಆದರೆ, ವಾಲ್ಮೀಕಿ ನಿಗಮದ ಹಣ, ಸಮುದಾಯದ ಹಣವಾಗಿದ್ದು, ಕೋಟ್ಯಂತರ ರೂಪಾಯಿ ಭ್ರಷ್ಟಾಚಾರವಾಗಿದೆ. ಒಂದು ಸಮುದಾಯದ ಹಣ ದುರುಪಯೋಗ ಆದಾಗ ನಾವು ಅದಕ್ಕೆ ಒತ್ತು ನೀಡಿದ್ದೇವೆ. ಮುಡಾ ಹಗರಣಕ್ಕಿಂತಲೂ ವಾಲ್ಮೀಕಿ ಹಗರಣ ದೊಡ್ಡದು. ಹೈಕಮಾಂಡ್ ಅನುಮತಿ ಕೊಟ್ರೆ ನಾವು ಪಾದಯಾತ್ರೆಗೆ ಹೋಗುತ್ತೇವೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಡಿ ಕೆ ಶಿವಕುಮಾರ್ ಸಿಎಂ ಮಾಡಲು ವಿಜಯೇಂದ್ರ ಪಾದಯಾತ್ರೆಗೆ ಹೊರಟಿದ್ದಾರೆ : ಮುಡಾ ಹಗರಣ ಮುಂದಿಟ್ಟುಕೊಂಡು ನಮ್ಮ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಹೊರಟ್ಟಿದ್ದಾರೆ. ಅವರು ಸಿದ್ದರಾಮಯ್ಯ ಅವರ ವಿರುದ್ಧ ಹೊರಟಿದ್ದಾರೋ ಅಥವಾ ಡಿ ಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲಿಕ್ಕೆ ಹೊರಟಿದ್ದಾರೆಯೇ? ಎಂಬುವುದನ್ನು ನಾವು ನೋಡಬೇಕಾಗಿದೆ ಎಂದು ವಿಜಯಪುರ ಶಾಸಕ ಹಾಗೂ ಕೇಂದ್ರ ಮಾಜಿ ಸಚಿವ ಬಸನಗೌಡ ಯತ್ನಾಳ್ ಅವರು ಕೂಡಾ ಹರಿಹಾಯ್ದಿದ್ದಾರೆ.
ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ವಾಲ್ಮೀಕಿ ನಿಗಮದ ಹಣವನ್ನು ಈ ಸರ್ಕಾರ ಕೊಳ್ಳೆ ಹೊಡೆದಿದೆ. ಒಂದು ಸಮುದಾಯಕ್ಕೆ ಹೋಗಬೇಕಾದ ಹಣವನ್ನು ಸಂಪೂರ್ಣವಾಗಿ ನುಂಗಿ ಹಾಕಿದ್ದಾರೆ. ಮತ್ತೊಂದೆಡೆ ಮೈಸೂರಿನ ಮುಡಾದಲ್ಲಿ ಒಬ್ಬ ದಲಿತ ಸಮುದಾಯದ ಬಡ ರೈತನ ಜಮೀನನ್ನ ನುಂಗಿ ಹಾಕಿದ್ದಾರೆ. ಅದಕ್ಕೆ ನಾವು ಕಾಂಗ್ರೆಸ್ನ ಭ್ರಷ್ಟಾಚಾರವನ್ನು ಮುಂದಿಟ್ಟುಕೊಂಡು ಯಾವುದೇ ಒಳ ಒಪ್ಪಂದವಿಲ್ಲದೇ ಹೋರಾಟವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಬಂದಾಗಿದೆ : ಕರ್ನಾಟಕ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ. ಪ್ರತಿ ವರ್ಷ ಗ್ಯಾರಂಟಿಗೆ 65 ಸಾವಿರ ಕೋಟಿ ಬೇಕು. ಗೃಹಲಕ್ಷ್ಮಿ ಯೋಜನೆಯಲ್ಲಿ ಪ್ರತಿ ಕುಟುಂಬಕ್ಕೆ ಎರಡು ಸಾವಿರ ಘೋಷಣೆ ಮಾಡಿದ್ದರೂ ಇದುವರೆಗೆ ಆ ಹಣ ಮಹಿಳೆಯರಿಗೆ ತಲುಪುತ್ತಿಲ್ಲ. ಭಾಗ್ಯದ ಲಕ್ಷ್ಮಿ ಬೆಳಗಾವಿಯಲ್ಲಿ ಕುಳಿತಿದ್ದಾರೆ. ಹಣ ಬಿಡುಗಡೆ ಮಾಡಿ ಅಥವಾ ಮನೆಗೆ ನಡಿರಿ ಎಂದು ನಾವು ಒತ್ತಾಯ ಮಾಡುತ್ತೇವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಯತ್ನಾಳ್ ಗುಡುಗಿದರು.