ರಾಮನಗರ: ಜೆಡಿಎಸ್ ಪಕ್ಷದ ಚಿಹ್ನೆಯಿಂದ ನಿಲ್ಲುವಂತೆ ಸಿ.ಪಿ.ಯೋಗೇಶ್ವರ್ ಅವರಿಗೆ ಮನವಿ ಮಾಡಿದರೂ ಅವರು ತಿರಸ್ಕರಿಸಿದ್ದಾರೆ. ಹೀಗಾಗಿ, ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಯಾರೆಂದು ತೀರ್ಮಾನಿಸುತ್ತೇವೆ. ಕಳೆದ ಎರಡು ಬಾರಿ ಚನ್ನಪಟ್ಟಣ ಕ್ಷೇತ್ರ ಜೆಡಿಎಸ್ ಪಾಲಾಗಿತ್ತು. ಈಗಲೂ ಹಲವು ಸಂಘಟನೆಗಳಿಂದ ನಿಖಿಲ್ ಅವರನ್ನು ನಿಲ್ಲಿಸಲು ಒತ್ತಡವಿದೆ. ಆದರೆ ನಿಖಿಲ್, ನನಗೆ ಟಿಕೆಟ್ ಬೇಡ, ಸ್ಥಳೀಯ ಅಭ್ಯರ್ಥಿಯನ್ನು ನಿಲ್ಲಿಸಿ ಎಂದು ಹೇಳಿರುವುದಾಗಿ ಜೆಡಿಎಸ್ ಜಿಲ್ಲಾಧ್ಯಕ್ಷ ಎ.ಮಂಜುನಾಥ್ ತಿಳಿಸಿದ್ದಾರೆ.
ರಾಮನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೆಚ್.ಡಿ.ದೇವೇಗೌಡರು, ಹೆಚ್. ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಹಾಗೂ ಸ್ವಪಕ್ಷೀಯರು ಸೇರಿ ಸಭೆ ನಡೆಸಿದ್ದೇವೆ. ಮೂರು ಉಪ ಚುನಾವಣೆಗಳಲ್ಲಿ ಎರಡು ಕ್ಷೇತ್ರಕ್ಕೆ ಎನ್‌ಡಿಎ ಅಭ್ಯರ್ಥಿ ಆಯ್ಕೆಯಾಗಿದೆ. ಚನ್ನಪಟ್ಟಣಕ್ಕೆ ಬಿಜೆಪಿ ವರಿಷ್ಠರ ಜೊತೆಗೆ ಮಾತನಾಡಿ, ಎನ್‌ಡಿಎ ಅಭ್ಯರ್ಥಿಯಾಗಿ ಜೆಡಿಎಸ್ನಿಂದ ಸ್ಪರ್ಧಿಸಲು ತಿಳಿಸಿದ್ದೇವೆ ಎಂದರು.
ನಿಖಿಲ್ ಅವರು ನಾನು ರಾಜ್ಯ ಸುತ್ತಬೇಕಾಗಿದೆ, ನನಗೆ ಟಿಕೆಟ್ ಬೇಡ ಎಂದಿದ್ದಾರೆ. ಆದರೆ ಯೋಗೇಶ್ವರ್ ನಮ್ಮ ಮನವಿ ತಿರಸ್ಕರಿಸಿರುವುದರಿಂದ ನಿಖಿಲ್ ಅವರೇ ಸ್ಪರ್ಧಿಸಲಿ ಎಂಬುದು ನಮ್ಮೆಲ್ಲರ ಒತ್ತಾಯ. ಯೋಗೇಶ್ವರ್ ಮೊದಲು ಕ್ಷೇತ್ರ ಬಿಟ್ಟುಕೊಡಲು ಮಾತುಕತೆಯಾಗಿರಲಿಲ್ಲ. ಅವರು ಯಾವುದೇ ಪಕ್ಷದಲ್ಲಿ ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿ. ಆದರೆ ಮೈತ್ರಿ ಧರ್ಮ ಪಾಲಿಸಬೇಕೆಂದರೆ ಎನ್‌ಡಿಎ ಅಭ್ಯರ್ಥಿಗೆ ಬೆಂಬಲ ನೀಡಬೇಕು ಎಂದು ಹೇಳಿದರು.