ಬೆಂಗಳೂರು: ಒಬ್ಬೊಬ್ಬ ಪಕ್ಷೇತರರಿಗೆ ನೂರು ಕೋಟಿ, 150 ಕೋಟಿ ರೂ. ಆಮಿಷ ಒಡ್ಡಿದ್ದಾರೆ ಎಂದು ಕಾಂಗ್ರೆಸ್ ಶಾಸಕ ರವಿಕುಮಾರ್ ಗಾಣಿಗ ಆರೋಪಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಫೆ.27 ರಾಜ್ಯಸಭೆ ಚುನಾವಣೆ ನಡೆಯಲಿದೆ. ಒಬ್ಬ ಅಭ್ಯರ್ಥಿ ಗೆಲುವಿಗೆ 44 ಮತ ಬೇಕು. ನಮ್ಮಲ್ಲಿ ಮೂವರು ಅಭ್ಯರ್ಥಿಗಳು ಗೆಲ್ಲಲು ಸಂಖ್ಯಾಬಲ ಇದೆ. ನಮ್ಮ ಮೂರೂ ಅಭ್ಯರ್ಥಿಗಳು ಅನಾಯಾಸವಾಗಿ ಗೆಲ್ಲಲು ನಂಬರ್ ಇದೆ. ಆದರೆ ವಿಪಕ್ಷಗಳು ಷಡ್ಯಂತ್ರ ರೂಪಿಸಿವೆ. ಕುಪೇಂದ್ರ ರೆಡ್ಡಿ ವಾಮ ಮಾರ್ಗದಿಂದ ಗೆಲ್ಲಲು ಆಮಿಷ ಒಡ್ಡುತ್ತಿದ್ದಾರೆ ಎಂದು ಆರೋಪಿಸಿದರು.
ಆಮಿಷ, ಬೆದರಿಕೆಯಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಪಕ್ಷೇತರ ಅಭ್ಯರ್ಥಿಗಳಿಗೆ ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿರುವ ಬಗ್ಗೆ ನಾವು ದೂರು ನೀಡಿದ್ದೇವೆ. ವಾಮಮಾರ್ಗದಿಂದ ಗೆದ್ದು ಬರಲು ಷಡ್ಯಂತ್ರ ಮಾಡುತ್ತಿದ್ದಾರೆ. ಆಮಿಷದ ದಾಖಲೆಗಳನ್ನು ಪೊಲೀಸ್ ಅಧಿಕಾರಿಗಳಿಗೆ ನೀಡಿದ್ದೇವೆ ಎಂದು ತಿಳಿಸಿದರು.
ಪಕ್ಷೇತರ ಅಭ್ಯರ್ಥಿಗಳನ್ನು ಸಂಪರ್ಕ ಮಾಡಿರುವವರಲ್ಲಿ ಮಾಜಿ ಶಾಸಕರು, ವೈದ್ಯರು, ಹೊಟೇಲ್ ಮಾಲೀಕ, ಮಾಜಿ ಸಚಿವರು ಇದ್ದಾರೆ. ಕರೆ ಮಾಡಿ ವೋಟ್ ಹಾಕಿ ಇಲ್ಲವಾದರೆ ಪರಿಸ್ಥಿತಿ ನೆಟ್ಟಗೆ ಇರಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಎಷ್ಟು ಗಂಟೆಗೆ ಕರೆ ಮಾಡಿದ್ದಾರೆ, ಏನು ಹೇಳಿದ್ದಾರೆ ಎಂಬ ಬಗ್ಗೆ ನಮ್ಮ ಬಳಿ ದಾಖಲೆ ಇದೆ. ಒಬ್ಬೊಬ್ಬರಿಗೆ ಒಂದೊಂದು ರೇಟ್ ಹೇಳಿದ್ದಾರೆ ಎಂದು ಆರೋಪಿಸಿದರು.
ಅಭ್ಯರ್ಥಿ ಪುತ್ರ, ಸಂಬಂಧಿಕರು, ಉದ್ಯಮಿಗಳು, ಮಾಜಿ ಶಾಸಕರು ಕರೆ ಮಾಡುತ್ತಿದ್ದಾರೆ. ಕುಪೇಂದ್ರ ರೆಡ್ಡಿ ಎಂಬ ಉದ್ಯಮಿ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಕುದುರೆ ವ್ಯಾಪಾರ ಮಾಡಲು ಮುಂದಾಗಿದ್ದಾರೆ. ಪಕ್ಷೇತರ ಅಭ್ಯರ್ಥಿಗಳೇ ನಮ್ಮಲ್ಲಿ ಈ ಬಗ್ಗೆ ಹೇಳಿದ್ದಾರೆ. ಈ ಬಗ್ಗೆ ನಮ್ಮಲ್ಲಿ ವಾಯ್ಸ್ ರೆಕಾರ್ಡ್ ಇದೆ ಎಂದು ತರೀಕೆರೆ ಶಾಸಕ ಶ್ರೀನಿವಾಸ್ ಇದೇ ವೇಳೆ ತಿಳಿಸಿದರು.
ಕೈಲಾಗದವರು ಮೈ ಪರಚಿಕೊಂಡಂತೆ ಕಾಂಗ್ರೆಸ್ ವರ್ತಿಸುತ್ತಿದೆ: ಕುಪೇಂದ್ರ ರೆಡ್ಡಿ
ಅದೇನೋ ಹೇಳ್ತಾರಲ್ಲ ಕುಣಿಯಲಾರದವರಿಗೆ, ನೆಲ ಡೊಂಕು ಅಂತ. ಈ ಕಾಂಗ್ರೆಸ್ನವರ ನಡೆ ಹಾಗಿದೆ ಎಂದು ಕುಪೇಂದ್ರ ರೆಡ್ಡಿ ತಮ್ಮ ಮೇಲಿನ ಆಮಿಷ ಆರೋಪವನ್ನು ತಳ್ಳಿ ಹಾಕಿದರು. ವಿಧಾನಸೌಧದಲ್ಲಿ ಆಮಿಷ ಆರೋಪದ ಬಗ್ಗೆ ಪ್ರತಿಕ್ರಿಯಿಸುತ್ತಾ, ಪಕ್ಷೇತರ ಸದಸ್ಯರ ಜೊತೆ ಮಾತಾಡಿದ್ದಕ್ಕೆ ಹೀಗೆಲ್ಲಾ ಆರೋಪ ಮಾಡೋದಾ.? ಹಿಂದೆ ನಮ್ಮ ಏಳು ಸದಸ್ಯರನ್ನ ಅಪಹರಿಸಿಕೊಂಡು ಹೋಗಿದ್ರಲ್ಲ? ಆಗ ನಾವು ಏನು ಆರೋಪ ಮಾಡಬೇಕಿತ್ತು?. ನಾವು ಮತಕೇಳುವ ಹಕ್ಕು ಸಂವಿಧಾನದಲ್ಲೇ ಇದೆ. ನಮ್ಮ ಮೇಲೆ ಅಭಿಮಾನ ಇರೋರು ಮತ ಹಾಕ್ತಾರೆ. ಕೈಲಾಗದವರು ಮೈ ಪರಚಿಕೊಂಡಿದ್ದಾರೆ. ಯಾರೋ ಪಕ್ಷೇತರರು ಹೇಳಿದ್ದಾರೆ ಅಂತ ಈಗ ಹೀಗೆ ಮಾತನಾಡುತ್ತಿದ್ದಾರೆ ಎಂದರು.
ನೂರು ಕೋಟಿ ಕೊಡ್ತಿದ್ದೀರಂತೆ ಅನ್ನೋ ಕಾಂಗ್ರೆಸ್ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನನ್ನತ್ರ ಸರ್ಕಾರ ಇಲ್ಲ, ನಾನು ಎಲ್ಲಿಂದ ಕೊಡಲಿ. ನಾನು ಕಷ್ಟ ಬಿದ್ದು ದುಡಿದು ಮೇಲೆ ಬಂದವನು. ಇಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಹಾಗಾಗಿ ನನ್ನ ಮೇಲೆ ಬ್ಲಾಕ್ ಮೇಲ್ ಮಾಡ್ತಿದ್ದಾರಾ?. ನಾನು ಗೆಲ್ಲೋದು, ಸೋಲೋದು ದೇವರಿಗೆ ಬಿಟ್ಟುದ್ದು ಎಂದು ಕುಪೇಂದ್ರ ರೆಡ್ಡಿ ತಿರುಗೇಟು ನೀಡಿದರು.
ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನಕ್ಕೆ ಷಡ್ಯಂತ್ರ ಆರೋಪ: ನಗರ ಪೊಲೀಸ್ ಆಯುಕ್ತರಿಗೆ ದೂರು