ಬಾಗಲಕೋಟೆ: ಜಿಲ್ಲೆಯಲ್ಲಿ ಮಳಿಯಪ್ಪ ಅಜ್ಜ ಮರ ಏರಿ 'ಹ್ಯೂತ್' ಎಂದರೆ ಸಾಕು, ಸೇರಿದ ಸಾವಿರಾರು ಜನ, ಡೊಳ್ಳುನಾದ ಎಲ್ಲವೂ ಸ್ತಬ್ಧ. 'ಮುಂಗಾರಿ ಹಿಂಗಾರ ತಕ್ಕಸ್ಟ ಮಸನ' ಎಂದು ಹೇಳಿದ ನಂತರ ಮತ್ತೆ ಎಲ್ಲವೂ ಪ್ರಾರಂಭ. ಇದು ನಡೆಯುವುದು ಬಾಗಲಕೋಟೆಯ ಹುಲ್ಲೇಶ್ವರ ದೇವಾಲಯದ ಜಾತ್ರಾ ಮಹೋತ್ಸವದಲ್ಲಿ.
ಇಲಕಲ್ಲ ತಾಲೂಕಿನ ಗುಡೂರ ಗ್ರಾಮದಲ್ಲಿರುವ ಐತಿಹಾಸಿಕ ಹಿನ್ನೆಲೆ ಹೊಂದಿರುವ ಹುಲ್ಲೇಶ್ವರ ದೇವಾಲಯ ಜಾತ್ರೋತ್ಸವದ ಸಮಯದಲ್ಲಿ ಇಂತಹ ಸಂಪ್ರದಾಯ ಆಚರಣೆಯಲ್ಲಿದೆ. ಈ ದೇವಾಲಯದಲ್ಲಿ ರಥೋತ್ಸವ ನಡೆಯುವುದಿಲ್ಲ. ಬದಲಾಗಿ, ಹೀಗೆ ಹೇಳಿಕೆ ನುಡಿಯುವ ಪದ್ಧತಿ ಇದೆ.
ಆಗಿ ಹುಣ್ಣಿಮೆ ದಿನ ಸಂಜೆಯ ವೇಳೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಮಳಿಯಪ್ಪ ಅಜ್ಜ ಕಂಬಳಿ ಧರಿಸಿ, ರೌದ್ರವತಾರ ತಾಳುತ್ತಾರೆ. ಮೈಯಲ್ಲಿ ದೇವರು ಬಂದ ಬಳಿಕ ಗ್ರಾಮದ ಹೊರ ವಲಯದಲ್ಲಿರುವ ಬೃಹತ್ ಬನ್ನಿ ಮರದ ಹತ್ತಿರ ಡೊಳ್ಳು ಬಾರಿಸುತ್ತಾ, ಬೆಳಕಿನ ಹಿಲಾಳು ಮತ್ತಿತರೆ ವಾದ್ಯಗೋಷ್ಠಿಗಳ ಪಲ್ಲಕ್ಕಿ ಹೊತ್ತುಕೊಂಡು ಸಾಗುತ್ತಾರೆ.
ಈ ಪ್ರದೇಶದಲ್ಲಿ ಹಿಂದಿನ ಕಾಲ ಮಳಿಯಪ್ಪ ಅಜ್ಜನವರ ಗದ್ದುಗೆ ಇದ್ದು, ಅವುಗಳಿಗೆ ಪೂಜೆ ಸಲ್ಲಿಸುತ್ತಾರೆ. ನಂತರ ಡೊಳ್ಳು ಸೇರಿದಂತೆ ಇತರ ವಾದ್ಯಗಳಿಂದ ಮಳಿಯಪ್ಪಜ್ಜನ ಮೇಲೆ ದೇವರು ಬರುವಂತೆ ಮಾಡುತ್ತಾರೆ. ನಂತರ ಎಲ್ಲರ ಸಮ್ಮುಖ ಮರ ಏರಿ ಮಳಿಯಪ್ಪ ಅಜ್ಜ 'ಹ್ಯೂತ್' ಎನ್ನುತ್ತಾರೆ. ಜನರೆಲ್ಲ ಎರಡು ನಿಮಿಷ ಸ್ತಬ್ಧರಾಗುತ್ತಾರೆ. ಮತ್ತೆ ಮಳೆ ಬಗ್ಗೆ ಭವಿಷ್ಯ ನುಡಿದ ನಂತರ ಅವರು ಮರದಿಂದ ಕೆಳಗಿಳಿಯುತ್ತಾರೆ.
'ಭಕ್ತರು ಏಳು ಕೋಟಿಗೂ' ಎಂದು ಜಯಘೋಷಣೆ ಹಾಕಿ ಮರಳಿ ಗ್ರಾಮದ ಪ್ರಮುಖ ರಸ್ತೆಯಲ್ಲಿ ಪಲ್ಲಕ್ಕಿ ಜೊತೆಗೆ ದೇವಾಲಯಕ್ಕೆ ಬರುತ್ತಾರೆ. ದೇವಾಲಯ ಮುಂದೆ ಕಬ್ಬಿಣದ ಸರಪಳಿ ಹರಿಯುವುದು ವಿಶೇಷ. ಒಂದೇ ಏಟಿಗೆ ಹರಿದರೆ ಹೆಚ್ಚಿನ ಮಳೆ ಹಾಗೂ ಬೆಳೆ ಚೆನ್ನಾಗಿ ಆಗಲಿದೆ ಎಂಬ ನಂಬಿಕೆ ಇದೆ. ಈ ಬಾರಿ ಮಳಿಯಪ್ಪ ಅಜ್ಜ ಒಂದೇ ಏಟಿಗೆ ಸರಪಳಿ ಹರಿಯುವ ಮೂಲಕ ಉತ್ತಮ ಭವಿಷ್ಯ ಹೇಳಿದ್ದಾರೆ ಎಂದು ಭಕ್ತರು ನಂಬಿದ್ದಾರೆ.
ಇದನ್ನೂ ಓದಿ: ಹಾವೇರಿ: ವಿಜೃಂಭಣೆಯಿಂದ ನಡೆದ ಆಡೂರು ಮಾಲತೇಶ ಜಾತ್ರೆ-ವಿಡಿಯೋ - Adooru Malatesh jatra