ಬೆಂಗಳೂರು: ಪ್ರಸಕ್ತ ವರ್ಷದ ಜೂನ್-ಜುಲೈ ಋತುವಿನಲ್ಲಿ ಬೆಂಗಳೂರಿನಲ್ಲಿ ಕುದುರೆ ರೇಸ್ ನಡೆಸಲು ಅನುಮತಿ ಕೋರಿ ಬೆಂಗಳೂರು ಟರ್ಫ್ ಕ್ಲಬ್(ಬಿಟಿಸಿ) ಸಲ್ಲಿಸಿದ್ದ ಮನವಿ ತಿರಸ್ಕರಿಸಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಕ್ಲಬ್(ರೇಸ್ ಕೋರ್ಸ್) ಹೈಕೋರ್ಟ್ ಮೆಟ್ಟಿಲೇರಿದೆ.
ಬಿಟಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ಪೀಠ ಬಿಟಿಸಿ ಅರ್ಜಿಯ ವಿಚಾರಣೆ ನಡೆಸಿ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿ ವಿಚಾರಣೆಯನ್ನು ಜೂ.12ಕ್ಕೆ ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಈ ಮೊದಲು ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿರೇಸ್ ಚಟುವಟಿಕೆ ನಡೆಸಲು ಷರತ್ತುಬದ್ಧ ಅನುಮತಿ ನೀಡುವ ಸಂಬಂಧ ಸರ್ಕಾರ ಜೂ. 6ರೊಳಗೆ ನಿರ್ಧಾರ ಕೈಗೊಳ್ಳುವಂತೆ ಹೈಕೋರ್ಟ್ ಕಳೆದ ಮೇ 23ರಂದು ನಿರ್ದೇಶನ ನೀಡಿತ್ತು. ಅದರಂತೆ ಬಿಟಿಸಿ ಸಲ್ಲಿಸಿದ್ದ ಅರ್ಜಿಯನ್ನು ಸಕ್ಷಮ ಪ್ರಾಧಿಕಾರ ತಿರಸ್ಕರಿಸಿದೆ ಎಂದರು.
ಅಲ್ಲದೆ, ಬಿಟಿಸಿ ಆವರಣದಲ್ಲಿ ಅಕ್ರಮ ಬೆಟ್ಟಿಂಗ್ ಮತ್ತಿತರ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಜತೆಗೆ ಬಿಟಿಸಿ ಪರವಾನಗಿ ಷರತ್ತುಗಳ ಉಲ್ಲಂಘನೆ ಮಾಡಿರುವುದಲ್ಲದೆ ಹಲವು ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ ಎಂಬ ಕಾರಣವನ್ನು ನೀಡಿ ಸಕ್ಷಮ ಪ್ರಾಧಿಕಾರ ಬಿಟಿಸಿ ಅರ್ಜಿಯನ್ನು ತಿರಸ್ಕರಿಸಿದೆ. ಇದರಿಂದ ಬಿಟಿಸಿಗೆ ಸಾಕಷ್ಟು ತೊಂದರೆ ಆಗಲಿದೆ. ಜತೆಗೆ ರೇಸ್ ಚಟುವಟಿಕೆಗಳು ನಡೆಯದೇ ಲಕ್ಷಾಂತರ ಮಂದಿಯ ಜೀವನೋಪಾಯಕ್ಕೆ ತೊಂದರೆ ಆಗಿದೆ ಎಂದು ಹೇಳಿದರು.
ಸಕ್ಷಮ ಪ್ರಾಧಿಕಾರ ಕ್ಲಬ್ ಹಾಗೂ ಬುಕ್ಕಿಗಳ ಅಕ್ರಮಗಳ ಬಗ್ಗೆ ಸಿಸಿಬಿ ತನಿಖೆ ಬಾಕಿ ಇದೆ ಎಂದೂ ಸಹ ಹೇಳಿದೆ. ಆದರೆ ಸಕ್ಷಮ ಪ್ರಾಧಿಕಾರ ಅರ್ಜಿ ತಿರಸ್ಕಾರಕ್ಕೆ ನೀಡಿರುವ ಕಾರಣಗಳು ಸರಿಯಲ್ಲ, ಅದಕ್ಕೂ ರೇಸ್ಗೂ ಸಂಬಂಧವಿಲ್ಲ. ಹಾಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕುದುರೆ ರೇಸ್ ನಡೆಸಲು ಅನುಮತಿ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು.
ಮೊದಲ ಸುತ್ತಿನ ಕಾನೂನು ಹೋರಾಟದಲ್ಲಿ ಕರ್ನಾಟಕ ರೇಸ್ ಕುದುರೆ ಮಾಲೀಕರ ಒಕ್ಕೂಟ ಮತ್ತು ಕರ್ನಾಟಕ ಟ್ರೈನರ್ಸ್ ಅಸೋಸಿಯೇಷನ್ ಬೆಂಗಳೂರು ಟರ್ಫ್ ಕ್ಲಬ್ ಪರವಾನಗಿ ನವೀಕರಣ ಮಾಡಲು ಕೋರಿರುವ ಮನವಿ ಪರಿಗಣಿಸಲು ನಿರ್ದೇಶಿಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದವು. ಆಗ ನ್ಯಾಯಪೀಠ ಈಗಾಗಲೇ ರೇಸ್‌ಗೆ ವೇಳಾಪಟ್ಟಿ ಪ್ರಕಟಿಸಲಾಗಿದೆ. ಸಾಕಷ್ಟು ಜನರ ಜೀವನೋಪಾಯ ರೇಸಿಂಗ್ ಚಟುವಟಿಕೆಯನ್ನು ಅವಲಂಬಿಸಿದೆ. ಹಾಗಾಗಿ, ರೇಸಿಂಗ್ ಚಟುವಟಿಕೆಗೆ ಷರತ್ತುಬದ್ಧ ಅನುಮತಿ ನೀಡುವ ಸಂಬಂಧದ ಮನವಿಯನ್ನು ಸರ್ಕಾರ ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿತ್ತು.
ಇದನ್ನೂ ಓದಿ: ಜೆ.ಪಿ.ನಡ್ಡಾ ಮೇಲೆ ಎಸ್ಸಿ, ಎಸ್ಟಿ & ಮುಸ್ಲಿಮರ ವಿರುದ್ಧ ಅವಹೇಳನಕಾರಿ ಪೋಸ್ಟ್ ಆರೋಪ: ಸರ್ಕಾರಕ್ಕೆ ನೋಟಿಸ್ - JP Nadda Case