ಬೆಳಗಾವಿ: "ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಈ ಸಮಾವೇಶ ಬರೀ ಟ್ರೇಲರ್ ಅಷ್ಟೇ. ದಾವಣಗೆಯಲ್ಲಿ ಪಿಚ್ಚರ್ ಅಭೀ ಬಾಕಿ ಹೈ. ಅಲ್ಲಿ 25 ಲಕ್ಷ ಜನರನ್ನು ಸೇರಿಸಿ ಕರ್ನಾಟಕದ ಸಮಸ್ತ ಹಿಂದೂಗಳ ಪರವಾಗಿ ಶಕ್ತಿ ಪ್ರದರ್ಶನ ಮಾಡುತ್ತೇವೆ. ಪ್ರಧಾನಿ ಮೋದಿ ಅವರು ಖುಷಿಪಡುವ ರೀತಿಯಲ್ಲಿ ಸಮಾವೇಶ ಆಯೋಜಿಸುತ್ತೇವೆ" ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಬೆಳಗಾವಿಯಲ್ಲಿಂದು ಆಯೋಜಿಸಿದ್ದ ವಕ್ಫ್ ಭೂಮಿ ವಿಚಾರದ ವಿರೋಧಿಸಿ ಜನಜಾಗೃತಿ ಸಮಾವೇಶದಲ್ಲಿ ಅವರು ಭಾಷಣ ಮಾಡಿದರು.
"ಯಾರನ್ನೋ ಅಧ್ಯಕ್ಷ, ಸಿಎಂ ಮಾಡಲು ನಾವು ಹೋರಾಟ ಮಾಡುತ್ತಿಲ್ಲ. ರೈತರು, ಸನಾತನ ಹಿಂದೂ ಧರ್ಮಕ್ಕಾಗಿ ಪ್ರಾಣ ಹೋದರೂ ಪರವಾಗಿಲ್ಲ. ನಾನು ಯಾರೊಂದಿಗೂ ಒಳಒಪ್ಪಂದ ಮಾಡಿಕೊಂಡಿಲ್ಲ. ಅತ್ಯಂತ ಹಿಂದುಳಿದ ತಾಲೂಕಿನಲ್ಲಿ ಸಕ್ಕರೆ ಕಾರ್ಖಾನೆ ಮಾಡಿದೆ. ಆದರೆ, ನನಗೆ ಇನ್ನಿಲ್ಲದ ಚಿತ್ರಹಿಂಸೆ ನೀಡುತ್ತಿದ್ದಾರೆ. ದಲಿತರು, ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೇಳಿದ್ದೇನೆ. ಮಂತ್ರಿಗಿರಿಗಾಗಿ ನಾನು ಯಾರ ಬಳಿಯೂ ಹೋಗಿಲ್ಲ. ನನ್ನ, ರಮೇಶ್ ಜಾರಕಿಹೊಳಿ ಮೇಲೆ ಬ್ಲ್ಯಾಕ್‌ಮೆಲ್ ಮಾಡಿದರೂ ಬಗ್ಗಿಲ್ಲ. ನಾನು, ರಮೇಶ್ ಜಾರಕಿಹೊಳಿ ಯಾರಿಗೂ ಬಗ್ಗಲ್ಲ. ಹೋರಾಟದಲ್ಲಿ ಸ್ವಾರ್ಥ ಇಲ್ಲ. ನಾವು ಏನೂ ಆಗದಿದ್ದರೂ ಪರವಾಗಿಲ್ಲ. ರೈತರ ಜಮೀನು ಉಳಿದು ವಕ್ಫ್ ಕಾನೂನು ರದ್ಧಾದರೆ ನಾನೇ ದೇಶದ ಪ್ರಧಾನಮಂತ್ರಿ ಆದಷ್ಟು ಖುಷಿ ಪಡುತ್ತೇನೆ" ಎಂದರು.
"ರಮೇಶ್ ಜಾರಕಿಹೊಳಿ ಮತ್ತಿತರರು ಕಾಂಗ್ರೆಸ್ ಬಿಟ್ಟು ಬಂದಿದ್ದರಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು. ಯಡಿಯೂರಪ್ಪನವರು ಸಿಎಂ ಆದ್ರು. ಅವರು ಬರದೇ ಇದ್ದಿದ್ದರೆ ನೀನು ಎಲ್ಲಿ ಹಾರಾಡುತ್ತಿದ್ದೆಯಪ್ಪಾ?. ರಮೇಶ್ ಜಾರಕಿಹೊಳಿ ಆಪರೇಶನ್ ಮಾಡಿದ್ದರಿಂದ ಇಡೀ ಭಾರತದಲ್ಲಿ ವಿಜಯಪುರ ಮೂರನೇ ಒಳ್ಳೆಯ ಗಾಳಿ ಇರುವ ನಗರ ಮಾಡಲು ಸಾಧ್ಯವಾಗಿದೆ. ಈಗ ನಮ್ಮನ್ನು ಆಪರೇಶನ್ ಮಾಡುತ್ತಾರಂತೆ. ಇಡೀ ಕರ್ನಾಟಕದಲ್ಲಿ ಆಪರೇಶನ್ ಮಾಡಲು ನಾವು ಟಾಪ್ ಮೋಸ್ಟ್ ಡಾಕ್ಟರ್ ಇದ್ದೇವೆ. ನಮ್ಮನ್ನು ಆಪರೇಶನ್ ಮಾಡಿದರೆ ನಿಮ್ಮದು ಎಲ್ಲಾ ಕಟ್ ಮಾಡಿ ಒಗೆಯುತ್ತೇವೆ. ನಿಮ್ಮ ನರನಾಡಿಗಳು ಎಲ್ಲಿದೆ ಅಂತಾ ನಮಗೆ ಗೊತ್ತಿದೆ" ಎನ್ನುವ ಮೂಲಕ ಪರೋಕ್ಷವಾಗಿ ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಯತ್ನಾಳ್ ಗುಡುಗಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿ, "ನಾನು ಮಂತ್ರಿಯಾಗಲು, ಯತ್ನಾಳ್ ಅವರನ್ನು ಮುಖ್ಯಮಂತ್ರಿ ಮಾಡಲು, ಕುಮಾರ ಬಂಗಾರಪ್ಪರನ್ನು ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಲು ಹೋರಾಟ ಮಾಡುತ್ತಿಲ್ಲ. ವಕ್ಫ್ ಬೋರ್ಡ್ನಿಂದ ರೈತರ ಜಮೀನು ಉಳಿಸಲು ಹೋರಾಟ ಮಾಡುತ್ತಿದ್ದೇವೆ. ಇದರಲ್ಲಿ ಯಾವುದೇ ಸ್ವಾರ್ಥ ಉದ್ದೇಶ ಇಲ್ಲ. ಬೆಳಗಾವಿ ಜಿಲ್ಲೆಯಿಂದ ಒಂದು ಲಕ್ಷ ಜನರನ್ನು ದಾವಣಗೆರೆ ಸಮಾವೇಶಕ್ಕೆ ಕರೆದುಕೊಂಡು ಹೋಗುತ್ತೇವೆ. ಎಲ್ಲಾ ಖರ್ಚನ್ನೂ ನಾವು ಒಬ್ಬರೇ ನೋಡಿಕೊಳ್ಳಬಹುದಿತ್ತು. ಆ ತಾಕತ್ತು ನಮ್ಮಲ್ಲಿದೆ. ಆದರೆ, ಅದು ಸರ್ವಾಧಿಕಾರಿ ಧೋರಣೆ ಆಗುತ್ತದೆ. ಅಲ್ಲದೇ ಪೂಜ್ಯ ತಂದೆಯಾಗಿ ಕುಳಿತುಕೊಳ್ಳಬೇಕಾಗುತ್ತದೆ. ಹಾಗಾಗಿ, ಎಲ್ಲರೂ ಹಣ ಸೇರಿಸಿ ವಿರೋಧಿಗಳಿಗೆ ತಿರುಗೇಟು ನೀಡುವ ರೀತಿ ಸಮಾವೇಶ ಮಾಡುತ್ತೇವೆ. ವಿರೋಧಿಗಳ ಸುಳ್ಳು ಪ್ರಚಾರಕ್ಕೆ ಯಾರೂ ಕಿವಿಗೊಡಬೇಡಿ" ಎನ್ನುವ ಮೂಲಕ ಪರೋಕ್ಷವಾಗಿ ವಿಜಯೇಂದ್ರ ವಿರುದ್ಧ ವಾಗ್ದಾಳಿ ಮಾಡಿದರು.
ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, "ಜನಪರ ಕೆಲಸ ಮಾಡಬೇಕು. ಆದರೆ, ಇವರು ಜನಪರ ಕೆಲಸ ಮಾಡಲು ಬಿಡುತ್ತಿಲ್ಲ. ಮೋದಿಯವರಿಗೆ ಚಾರ್‌ಸೋ ಫಾರ್ ಬರಲಿಲ್ಲ. ಅಷ್ಟು ಸೀಟ್ ಬಂದಿದ್ದರೆ ಸರಳವಾಗಿ ವಕ್ಫ್ ಕಾನೂನು ರದ್ದಾಗುತ್ತಿತ್ತು. ಈ ಹಿಂದೆ ರಾಜ್ಯದಲ್ಲಿ 27 ಎಂಪಿ ಸೀಟು ಇದ್ದವು. ಈಗ 17ಕ್ಕೆ ಬಂದಿವೆ. ಇದಕ್ಕೆ ಹೊಂದಾಣಿಕೆ ರಾಜಕಾರಣವೇ ಕಾರಣ. ವಾಲ್ಮೀಕಿ ಹಗರಣದ ಹೋರಾಟಕ್ಕೆ ಅನುಮತಿ ಕೊಡಿಸಲಿಲ್ಲ. ಇನ್ನು ಕೆಲವರು ಯತ್ನಾಳ್ರನ್ನು ಸಸ್ಪೆಂಡ್ ಮಾಡುತ್ತೇವೆ ಅಂತಾರೆ. ಅದನ್ನು ಬಿಟ್ಟು ಹೋರಾಟಕ್ಕೆ ಬನ್ನಿ. ನಮಗೆ ಹಾದಿಬೀದಿಯಲ್ಲಿ ಮಾತನಾಡುತ್ತಾರೆ ಎನ್ನುತ್ತಾರೆ. ನಿಮಗೆ ಇದು ಶೋಭೆ ತರಲ್ಲ. ಕಾಂಗ್ರೆಸ್, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲು ನಿಮ್ಮನ್ನು ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಂಸದ ಪ್ರತಾಪ ಸಿಂಹ ಮಾತನಾಡಿ, "ಆಂಧ್ರ ಪ್ರದೇಶದಲ್ಲಿ ಯಾವ ರೀತಿ ವಕ್ಫ್ ಬೋರ್ಡ್ ಕಿತ್ತು ಹಾಕಿದ್ದಾರೋ, ಅದೇ ರೀತಿ ಕರ್ನಾಟಕದಲ್ಲೂ ಕಿತ್ತು ಹಾಕಬೇಕು. ನಮ್ಮ ಧ್ವನಿ ಪ್ರಧಾನಿ ಮೋದಿಗೆ ಕೇಳಿಸಿ, ವಕ್ಫ್ ಕಾಯ್ದೆ ರದ್ದುಗೊಳಿಸಬೇಕು. ಅಲ್ಲಿಯವರೆಗೂ ನಿರಂತರ ಹೋರಾಟ ಮಾಡಬೇಕಿದೆ. ಈ ಹೋರಾಟಕ್ಕೆ ಯತ್ನಾಳ್ ಅವರ ಸಮರ್ಥ ನಾಯಕತ್ವವಿದೆ. ಅವರ ಜೊತೆಗೆ ರಮೇಶ ಜಾರಕಿಹೊಳಿ ಹೆಗಲಿಗೆ ಹೆಗಲು ಕೊಟ್ಟಿದ್ದಾರೆ. ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ, ಜಿ.ಎಂ.ಸಿದ್ದೇಶ್ವರ ಸೇರಿ ಮತ್ತಿತರರು ಹೋರಾಟಕ್ಕೆ ಶಕ್ತಿ ತುಂಬಿದ್ದಾರೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್, ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್, ಆಂಧ್ರ ಪ್ರದೇಶದಲ್ಲಿ ಪವನ್ ಕಲ್ಯಾಣ, ತಮಿಳುನಾಡಿನಲ್ಲಿ ಅಣ್ಣಾಮಲೈ ಹಿಂದೂಗಳನ್ನು ಕಾಪಾಡಲು ಇದ್ದಾರೆ. ಅದೇ ರೀತಿ ಕರ್ನಾಟಕದಲ್ಲೂ ಅಂತಹ ನಾಯಕತ್ವ ನೀಡುವ ಶಕ್ತಿ ಯತ್ನಾಳ್ ಅವರಿಗಿದೆ" ಎಂದು ಹೊಗಳಿದರು.
ಶಾಸಕರಾದ ಚಂದ್ರಪ್ಪ, ಬಿ.ಪಿ.ಹರೀಶ್, ಮಾಜಿ ಸಂಸದರಾದ ಜಿ.ಎಂ.ಸಿದ್ದೇಶ್ವರ್, ಬಿ.ವ್ಹಿ.ನಾಯಿಕ, ಮಾಜಿ ಸಚಿವ ಶ್ರೀಮಂತ ಪಾಟೀಲ, ಮಾಜಿ ಶಾಸಕರಾದ ಕುಮಾರ ಬಂಗಾರಪ್ಪ, ಮಹೇಶ ಕುಮಟಳ್ಳಿ, ಮುಖಂಡರಾದ ಎನ್.ಆರ್.ಸಂತೋಷ್, ಕಿರಣ ಜಾಧವ್ ಸೇರಿ ಮತ್ತಿತರರು ಸಮಾವೇಶದಲ್ಲಿ ಇದ್ದರು.
ಜನಜಾಗೃತಿ ಸಮಾವೇಶಕ್ಕೂ ಮೊದಲು ರಾಣಿ ಚನ್ನಮ್ಮ ಪುತ್ಥಳಿಗೆ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಸೇರಿ ಮತ್ತಿತರರು ಮಾಲಾರ್ಪಣೆ ಮಾಡಿದರು. ಬಳಿಕ ಅಲ್ಲಿಂದ ಸಮಾವೇಶ ನಡೆಯಲಿರುವ ಗಾಂಧಿ ಭವನದವರೆಗೂ ಪಾದಯಾತ್ರೆ ಮೂಲಕ ಆಗಮಿಸಿದರು.
ಇದನ್ನೂ ಓದಿ: ರಾಜ್ಯದಲ್ಲಿ ನಾನು ನಂ.1 ಆಗುತ್ತೇನೆ: ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ ಯತ್ನಾಳ