ಬಳ್ಳಾರಿ: ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲು ಬಂದಿದ್ದ ಉಪನ್ಯಾಸಕರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬುಧವಾರ ಬಳ್ಳಾರಿ ನಗರದಲ್ಲಿ ಸಂಭವಿಸಿದೆ. ಉಪನ್ಯಾಸಕ ಶಂಕರಗೌಡ (42) ಮೃತರು. ನೆರೆಯ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲುಕು ಕರಡಕಲ್ ಗ್ರಾಮದ ನಿವಾಸಿಯಾಗಿದ್ದ ಶಂಕರಗೌಡ, ಮಸ್ಕಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಸಮಾಜಶಾಸ್ತ್ರ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಬಳ್ಳಾರಿ ನಗರದ ಸಂತಜಾನ್ ಪಿಯು ಕಾಲೇಜಿನಲ್ಲಿ ಇಂದಿನಿಂದ ಆರಂಭವಾಗಿದ್ದ ದ್ವಿತೀಯ ಪಿಯು ಸಮಾಜಶಾಸ್ತ್ರ ಉತ್ತರ ಪತ್ರಿಕೆಯ ಮೌಲ್ಯಮಾಪನಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ನಗರಕ್ಕೆ ಬಂದಿದ್ದರು. ಸಂತಜಾನ್ ಕಾಲೇಜಿನಲ್ಲಿ ಬೆಳಗ್ಗೆ ವರದಿ ಮಾಡಿಕೊಂಡಿದ್ದ ಉಪನ್ಯಾಸಕ ಶಂಕರಗೌಡ, 12 ಗಂಟೆ ಸುಮಾರಿಗೆ ಉತ್ತರ ಪತ್ರಿಕೆಗಳ ಮೌಲ್ಯಮಾಪನಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಸ್ವಲ್ಪ ಹೊತ್ತಿಗೆ ಕೇಂದ್ರದಲ್ಲೇ ಹೃದಯಾಘಾತವಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕೂಡಲೇ ಸಿರುಗುಪ್ಪ ರಸ್ತೆಯಲ್ಲಿನ ಬಳ್ಳಾರಿ ಹೆಲ್ತ್ ಸೆಂಟರ್ ಆಸ್ಪತ್ರೆಗೆ ಕರೆದೊಯ್ದರೂ, ಅಷ್ಟರೊಳಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂಬುವುದಾಗಿ ಆಸ್ಪತ್ರೆಯ ವೈದ್ಯರು ದೃಢಪಟಿಸಿದ್ದಾರೆ ಎಂದು ಡಿಡಿಪಿಯು ಪಾಲಾಕ್ಷ ತಿಳಿಸಿದ್ದಾರೆ.
ಯಾದಗಿರಿಯಲ್ಲಿ ಕುಸಿದು ಬಿದ್ದ ವಿದ್ಯಾರ್ಥಿನಿ: ಮತ್ತೊಂದೆಡೆ, ಯಾದಗಿರಿ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಯೊಬ್ಬರು ಏಕಾಏಕಿ ಕುಸಿದು ಬಿದ್ದಿರುವ ಘಟನೆ ವರದಿಯಾಗಿದೆ. ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಭಾಗ್ಯಶ್ರೀ ಅಸ್ವಸ್ಥಗೊಂಡ ವಿದ್ಯಾರ್ಥಿನಿಯಾಗಿದ್ದು, ಮೂರ್ಚೆರೋಗದಿಂದ ಏಕಾಏಕಿ ಕುಸಿದು ಬಿದಿದ್ದಾರೆ ಎಂದು ತಿಳಿದು ಬಂದಿದೆ.
ಎಸ್ಸೆಸ್ಸೆಲ್ಸಿಯ 2ನೇ ಪತ್ರಿಕೆ ಸಮಾಜ ವಿಜ್ಞಾನ ಪರೀಕ್ಷೆ ಬರೆಯಲು ಕೆಂಭಾವಿ ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಭಾಗ್ಯಶ್ರೀ ಬಂದಿದ್ದರು. ಬೆಳಗಿನ ಜಾವ ಉಪಹಾರ ಮಾಡದೇ ಬಂದಿದ್ದರಿಂದ ತೀವ್ರ ಅಸ್ವಸ್ಥಗೊಂಡಿದ್ದರು. ತಕ್ಷಣವೇ ಪರೀಕ್ಷಾ ಕೇಂದ್ರದ ಸಿಬ್ಬಂದಿ ಆಂಬ್ಯುಲೆನ್ಸ್ ಕರೆಯಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ಕೊಡಿಸಲಾಗಿದೆ. ಚಿಕಿತ್ಸೆ ಪಡೆದ ಬಳಿಕ ಪರೀಕ್ಷಾ ಕೇಂದ್ರಕ್ಕೆ 11.40ಕ್ಕೆ ಹಾಜರಾಗಿ, ವಿದ್ಯಾರ್ಥಿನಿ ಪರೀಕ್ಷೆ ಬರೆದಿದ್ದಾರೆ.
9 ಪರೀಕ್ಷೆ ಅಕ್ರಮ: ರಾಜ್ಯಾದ್ಯಂತ ಬುಧವಾರ ನಡೆದ ಎಸ್ಸೆಸ್ಸೆಲ್ಸಿ ಸಮಾಜ ವಿಜ್ಞಾನ ಪರೀಕ್ಷೆಯಲ್ಲಿ 9 ಕಡೆ ಕೇಂದ್ರಗಳಲ್ಲಿ ಪರೀಕ್ಷಾ ಅಕ್ರಮ ನಡೆದಿದೆ. ಈ ಅಕ್ರಮಕ್ಕೆ ಶಿಕ್ಷಕರು ಸಹಕಾರ ನೀಡಿರುವ ಕುರಿತು ಪರಿಶೀಲಿಸಲಾಗುತ್ತಿದೆ. ಮೇಲ್ನೋಟಕ್ಕೂ ಆರೋಪ ಸಾಬೀತಾದಲ್ಲಿ ಶಿಕ್ಷಕರ ವಿರುದ್ಧ ಕ್ರಮಕ್ಕೆ ಆದೇಶಿಸಲಾಗುವುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.
ಇದನ್ನೂ ಓದಿ: ವಿದ್ಯಾರ್ಥಿಗಳ ತಪ್ಪು ಉತ್ತರಕ್ಕೆ ಶಿಕ್ಷಕರಿಗೇ ಏಟು: ಕಲಿಕೆಗೆ ವಿಭಿನ್ನ ಹಾದಿ, ಮೇಷ್ಟ್ರ ಕೆಲಸಕ್ಕೆ ಸಲಾಂ