ರಾಯಚೂರು: 371(ಜೆ) ಸಮರ್ಪಕ ಅನುಷ್ಠಾನಕ್ಕೆ ಒತ್ತಾಯಿಸಿ 371(ಜೆ) ರಕ್ಷಣಾ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳಿಂದ ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿಯವರಿಗೆ ಮನವಿ ಪತ್ರವನ್ನು ರವಾನಿಸಿದರು.
ಕಲ್ಯಾಣ ಕರ್ನಾಟಕಕ್ಕೆ ಸಂವಿಧಾನ ಅನುಚ್ಛೇದ 371(ಜೆ) ಜಾರಿಯಾಗಿ ಹಲವು ವರ್ಷಗಳು ಕಳೆದಿವೆ. ಆದರೆ ಇದು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಇದರಿಂದ ಈ ಭಾಗದ ಜನರು ಮೀಸಲಾತಿಯಿಂದ ವಂಚಿತರಾಗುತ್ತಿದ್ದಾರೆ. ಅಲ್ಲದೇ ಬೆಂಗಳೂರಿನಲ್ಲಿ ಹಸಿರು ಪ್ರತಿಷ್ಠಾನ 371(ಜೆ) ಕಲಂ ವಿರೋಧಿಸಿ ಸರ್ಕಾರಕ್ಕೆ ಪತ್ರ ಬರೆದು ಗೊಂದಲ ಉಂಟು ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಭಾಗಕ್ಕೆ 371(ಜೆ) ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಈ ಭಾಗದ ಜನರಿಗೆ ಹಾಗೂ ರಾಜ್ಯದ ಇತರ ಭಾಗದ ಜನರಿಗೆ ಅನ್ಯಾಯವಾಗದಂತೆ ಸ್ವತಂತ್ರವಾದ ಒಂದು ಸಮಿತಿ ರಚನೆ ಮಾಡಬೇಕು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದವರಿಗೆ ಮೇರಿಟ್ ಆಧಾರದ ಮೇಲೆ ಮೀಸಲಾತಿ ಒದಗಿಸಿ, ಇನ್ನುಳಿದವರನ್ನು ವೃಂದದಲ್ಲಿ ಪರಿಗಣಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ತಾರಾನಾಥ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪಾರಸಮಲ್ ಸುಖಾಣಿ ಮಾತನಾಡಿ, 371(ಜೆ) ಕಲಂ ಸಂಪೂರ್ಣವಾಗಿ ಜಾರಿಗೆ ತರಬೇಕು ಎಂದು ಈ ಪ್ರತಿಭಟನೆ ನಡೆಸುತ್ತಿದ್ದೇವೆ. ಎಲ್ಲಾ ಶಿಕ್ಷಣ ಸಂಸ್ಥೆಗಳು, ಸಂಘ - ಸಂಸ್ಥೆಗಳಿಂದ ಈ ಹೋರಾಟಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ನಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಈ ಹೋರಾಟ ಮಾಡುತ್ತಿದ್ದೇವೆ. ನಿನ್ನೆ ಸಿಎಂ ಸಿದ್ದರಾಮಯ್ಯನವರು ಐದು ಸಾವಿರ ಕೋಟಿ ಅನುದಾನವನ್ನು ಕಲ್ಯಾಣ ಕರ್ನಾಟಕ್ಕೆ ಕೊಟ್ಟು, ಜುಲೈ ಒಳಗೆ ಎಸ್ಟಿಮೇಟ್ ಮಾಡಿ ಕಳುಹಿಸಿ ಎಂದಿದ್ದಾರೆ. ನಾವು ಯಾಕೆ ಕಳುಹಿಸಬೇಕು. ನಮ್ಮ ಶಾಸಕರು ನಿರ್ಧಾರ ಮಾಡಿ ಖರ್ಚು ಮಾಡುತ್ತಾರೆ. ನಮಗೆ 8% ಮೀಸಲಾತಿ ಸಿಗುತ್ತಿಲ್ಲ. 371(ಜೆ) ಕಲಂ ಸಂಪೂರ್ಣವಾಗಿ ಅನುಷ್ಠಾನಗೊಂಡರೆ ನಮ್ಮ ಮಕ್ಕಳಿಗೆ ಶಿಕ್ಷಣ, ಉದ್ಯೋಗ ಸಿಗುತ್ತದೆ ಎಂದರು.
ಪ್ರತಿಭಟನಾಕಾರ ರಜಾಕ್ ಉಸ್ತಾದ್ ಮಾತನಾಡಿ, ಕಲ್ಯಾಣ ಕರ್ನಾಕದಲ್ಲಿ 371(ಜೆ) ಅನುಷ್ಠಾನಗೊಂಡು ಈಗಾಗಲೇ ದಶಕ ಕಳೆದಿದೆ. ಈ ದಶಕದಲ್ಲಿ 371(ಜೆ) ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ ಎಂಬ ನೋವಿದೆ. ಇದರ ನಡುವೆ ಬೆಂಗಳೂರಿನ ಕೆಲ ಸಂಘಟನೆಗಳು 371(ಜೆ) ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇದನ್ನು ಖಂಡಿಸಿ ರಾಯಚೂರಿನಲ್ಲಿ ಪ್ರಭಟನೆ ನಡೆಸಿದ್ದೇವೆ. 371(ಜೆ) ಅನುಷ್ಠಾನ ಪ್ರಾಧಿಕಾರವನ್ನು ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳು, ಶಾಲಾ-ಕಾಲೇಜು ಶಿಕ್ಷಣ ಸಂಸ್ಥೆಗಳು, ಪಕ್ಷಾತೀತವಾಗಿ ರಾಜಕೀಯ ನಾಯಕರು ಭಾಗವಹಿಸಿದ್ದರು.
ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಶ್ರೀರಾಮುಲು ಒತ್ತಾಯ - B Sreeramulu