ಮಂಡ್ಯ: ಸಾಲ ವಸೂಲಿಗಾಗಿ ಮೈಕ್ರೋ ಫೈನಾನ್ಸ್ ಹಾಗೂ ಹಲವು ಬ್ಯಾಂಕುಗಳ ಪ್ರತಿನಿಧಿಗಳು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಇದನ್ನು ತಪ್ಪಿಸಿ ಸಾಲ ಮರುಪಾವತಿಸಲು ನಮಗೆ ಹೆಚ್ಚಿನ ಸಮಯಾವಕಾಶ ನೀಡಬೇಕು ಎಂದು ಆಗ್ರಹಿಸಿ ಮಂಡ್ಯ ತಾಲೂಕಿನ ಹೊಳಲು ಗ್ರಾಮದಲ್ಲಿ ಬುಧವಾರ ಸ್ತ್ರೀ ಶಕ್ತಿ ಸಂಘಟನೆಗಳ 30ಕ್ಕೂ ಹೆಚ್ಚು ಮಹಿಳೆಯರು ಗ್ರಾಮ ಪಂಚಾಯಿತಿ ಎದುರು ನೇಣು ಕುಣಿಕೆಯೊಂದಿಗೆ ವಿನೂತನ ರೀತಿಯಲ್ಲಿ ಪ್ರತಿಭಟಿಸಿದರು.
ಹೊಳಲು ಗ್ರಾಮದ ಸುಮಾರು 500ಕ್ಕೂ ಹೆಚ್ಚು ಕುಟುಂಬಗಳು 30ಕ್ಕೂ ಹೆಚ್ಚು ಮೈಕ್ರೋ ಫೈನಾನ್ಸ್ ಕಂಪನಿಗಳು ಹಾಗೂ ಬ್ಯಾಂಕ್ಗಳಿಂದ ಸಾಲ ಪಡೆದಿದ್ದಾರೆ. ಅವರೆಲ್ಲ ಸಾಲ ಮರುಪಾವತಿಸಲು ಸಾಧ್ಯವಾಗದೇ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈ ಪೈಕಿ ಹಲವರು ಮರ್ಯಾದೆಗಂಜಿ ಪ್ರತಿಭಟನೆಯಲ್ಲಿ ಭಾಗವಹಿಸಿಲ್ಲ. ಆದರೆ ಮೈಕ್ರೋ ಫೈನಾನ್ಸ್ಗಳ ಕಿರುಕುಳದಿಂದ ತೀವ್ರವಾಗಿ ನೊಂದಿರುವ ಮಹಿಳೆಯರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ ಎಂದು ಪ್ರತಿಭಟನಾನಿರತರು ತಿಳಿಸಿದ್ದಾರೆ.
ಕೆಲವು ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಪ್ರತೀ ವಾರ ನಿಗದಿತ ದಿನ ಸಾಲದ ಕಂತುಗಳನ್ನು ಪಾವತಿ ಮಾಡಬೇಕಿದೆ. ಹಣ ಹೊಂದಿಸಲು ಸಾಧ್ಯವಾಗದೇ ಇದ್ದಲ್ಲಿ ಆ ಕಂಪನಿಗಳ ಪ್ರತಿನಿಧಿಗಳು ಮನೆ ಮುಂದೆ ಬಂದು ಕುಳಿತು, ಹಣ ಪಾವತಿಸುವಂತೆ ದಬಾಯಿಸುತ್ತಾರೆ. ಈ ಮೂಲಕ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಮಹಿಳೆಯರು ಆಗ್ರಹಿಸಿದರು.
ಕೆಲವರಿಗೆ ಹಣದ ಅವಶ್ಯಕತೆ ಇಲ್ಲದಿದ್ದರೂ, ಅವರೇ ಮೇಲೆ ಬಿದ್ದು ಒತ್ತಡ ಹೇರಿ ಸಾಲ ನೀಡುತ್ತಿದ್ದಾರೆ. ಆ ನಂತರ ಪ್ರತೀ ವಾರ ಸಾಲದ ಕಂತು ಕಟ್ಟುವಂತೆ ಮನೆ ಬಳಿ ಬಂದು ಕಿರುಕುಳ ನೀಡುತ್ತಿದ್ದಾರೆ. ಅನಕ್ಷರಸ್ಥ ಮಹಿಳೆಯರ ಮುಗ್ಧತೆಯನ್ನು ಬಳಸಿಕೊಂಡು ತೊಂದರೆ ನೀಡಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
"ಮೈಕ್ರೋ ಫೈನಾನ್ಸ್ಗಳಿಂದ ಸಾಲ ತೆಗೆದುಕೊಂಡು ಕಟ್ಟಲಾಗದವರು ಊರು ಬಿಟ್ಟು ಬೇರೆಡೆ ಹೋಗಿದ್ದಾರೆ. ಈಗ ಅವರ ಸಾಲವನ್ನು ನೀವು ಕಟ್ಟಿ, ಇಲ್ಲವಾದರೆ ಅವರನ್ನು ಹುಡುಕಿಕೊಂಡು ಬನ್ನಿ ಎಂದು ನಮಗೆ ಒತ್ತಡ ಹಾಕುತ್ತಿದ್ದಾರೆ. ಈಗಾಗಲೇ ನಾನು 25 ಸಾವಿರ ರೂಪಾಯಿ ಕಟ್ಟಿದ್ದೇನೆ. ಇನ್ನು ಉಳಿದ ಹಣವನ್ನು ಎಲ್ಲಿಂದ ಕಟ್ಟುವುದು?. ಮನೆ ಬಿಟ್ಟು ಹೋದವರನ್ನು ನಾವು ಎಲ್ಲಿಂದ ಕರೆದುಕೊಂಡು ಬರಲಿ. ಸಾಲ ಕಟ್ಟಲಾಗುತ್ತಿಲ್ಲ ಎಂದು ಅವರು ಮನೆ ಬಿಟ್ಟು ಹೋಗುತ್ತಾರೆಂದು ನಮಗೆ ತಿಳಿದಿತ್ತೇ?. ಮೊದಲೇ ಗೊತ್ತಿದ್ದರೆ ನಾವು ಅವರ ಸಾಲಕ್ಕೆ ಸಹಿ ಹಾಕುತ್ತಿರಲಿಲ್ಲ. ನಮಗೆ ನಮ್ಮ ಸಾಲವೇ ಕಟ್ಟಲಾಗುತ್ತಿಲ್ಲ. ಕೂಲಿ ಕೆಲಸಕ್ಕೆ ಹೋದಲ್ಲೂ ಫೈನಾನ್ಸ್‌ನವರು ಬಂದು ಸಾಲ ಕಟ್ಟಿ ಎಂದು ತೊಂದರೆ ನೀಡುತ್ತಿದ್ದಾರೆ. ರಾತ್ರಿ 10 ಗಂಟೆಯಾದರೂ ಬಿಡುತ್ತಿಲ್ಲ. ನಾವಲ್ಲದೇ ಹಲವು ಸಂಘದ ಮಹಿಳೆಯರದ್ದು ಇದೇ ಗೋಳು" ಎಂದು ನೊಂದ ಮಹಿಳೆ ನಂದಿನಿ ವಿವರಿಸಿದರು.