ಬೆಂಗಳೂರು: ಮುಡಾ ಹಗರಣ ಆರೋಪ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧದ ತನಿಖೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ಧದ ಗಂಭೀರ ಆರೋಪಕ್ಕೆ ಗುರಿಯಾಗಿದ್ದು, ಮುಡಾ ಹಗರಣದಲ್ಲಿ ಸಿಎಂ ಪಾತ್ರವಿದೆ ಎಂಬ ದೂರನ್ನು ರಾಜ್ಯಪಾಲರ ಮುಂದೆ ಇರಿಸಲಾಗಿದ್ದು, ಈ ಸಂಬಂಧ ತನಿಖೆಗೆ ಅನುಮತಿ ಕೋರುವಂತೆ ಕೋರಲಾಗಿದೆ. ಈ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿ ಆಧಾರದ ಮೇಲೆ ರಾಜ್ಯಪಾಲರು ಸಿಎಂಗೆ ಶೋಕಾಸ್ ನೋಟಿಸ್ ಅನ್ನು ಜಾರಿ ಮಾಡಿದ್ದರು. ಈ ಶೋಕಾಸ್ ನೋಟಿಸ್ ಅನ್ನು ಹಿಂಪಡೆಯುವಂತೆ ಮುಖ್ಯಮಂತ್ರಿ ಅವರು ರಾಜ್ಯಪಾಲರಿಗೆ ಸಲಹೆ ನೀಡಿದ್ದರು. ಅಲ್ಲದೇ ರಾಜ್ಯಪಾಲರ ಸಾಂವಿಧಾನಿಕ ಕಚೇರಿಯನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪವನ್ನು ರಾಜ್ಯ ಸರ್ಕಾರ ಮಾಡುತ್ತಿದೆ.
ಏನಿದು ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರಿಗೆ ಮೈಸೂರಿನ ಪ್ರಮುಖ ಪ್ರದೇಶದಲ್ಲಿ ಮುಡಾ ಸ್ವಾಧೀನಪಡಿಸಿಕೊಂಡಿರುವ ಭೂಮಿಗಿಂತ ಅಧಿಕ ಮೌಲ್ಯದ ನಿವೇಶವನ್ನು ಪರಿಹಾರವಾಗಿ ಹಂಚಿಕೆ ಮಾಡಲಾಗಿದೆ ಎಂಬುದು ಆರೋಪವಾಗಿದೆ. ಮುಡಾದಿಂದ ಪಾರ್ವತಿ ಅವರಿಗೆ 50:50 ಅನುಪಾತದ ಯೋಜನೆಯಡಿ ಅವರ 3.16 ಎಕರೆ ಜಮೀನಿಗೆ ಬದಲಾಗಿ ನಿವೇಶನಗಳನ್ನು ಮಂಜೂರು ಮಾಡಿದೆ. ಪಾರ್ವತಿ ಅವರಿಗೆ 3.16 ಎಕರೆ ಜಮೀನಿನ ಮೇಲೆ ಯಾವುದೇ ಕಾನೂನು ಹಕ್ಕು ಇಲ್ಲ ಎಂಬುದು ಆರ್ಟಿಐ ಕಾರ್ಯಕರ್ತರ ವಾದವಾಗಿದೆ.
ಮುಡಾ ಹಗರಣದ ಆರೋಪ ಪ್ರಬಲವಾದ ಹಿನ್ನೆಲೆ ತನಿಖೆಗಾಗಿ ಕಾಂಗ್ರೆಸ್ ಸರ್ಕಾರ ಜುಲೈ 14 ರಂದು ಮಾಜಿ ಹೈಕೋರ್ಟ್ ನ್ಯಾಯಮೂರ್ತಿ ಪಿ ಎನ್ ದೇಸಾಯಿ ನೇತೃತ್ವದಲ್ಲಿ ಏಕಸದಸ್ಯ ತನಿಖಾ ಆಯೋಗವನ್ನು ರಚಿಸಿತು.
ಜುಲೈ 26ರಂದು ಟಿ ಜೆ ಅಬ್ರಹಾಂ ಸಲ್ಲಿಸಿದ್ದ ಅರ್ಜಿ ಆಧಾರದ ಮೇಲೆ ರಾಜ್ಯಪಾಲರು ಸಿಎಂ ಗೆ ಕಾರಣ ಕೇಳಿ, ಸರ್ಕಾರಕ್ಕೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದರು. ಆಗಸ್ಟ್ 1ರಂದು ಸಿಎಂ ಗೈರಿನಲ್ಲಿ ಸಂಪುಟ ನಿರ್ಧಾರ ಕೈಗೊಂಡು, ಶೋಕಾಸ್ ನೋಟಿಸ್ ಹಿಂಪಡೆಯುವಂತೆ ರಾಜ್ಯಪಾಲರಿಗೆ ಸಲಹೆ ಮಾಡಿ, ಅರ್ಜಿಯನ್ನು ತಿರಸ್ಕರಿಸಿತು.
ಏನಿದು ಪ್ರಾಸಿಕ್ಯೂಷನ್: ರಾಜ್ಯದ ಮುಖ್ಯಸ್ಥರಾಗಿರುವ ಸಿಎಂ ವಿರುದ್ಧ ಕಾನೂನು ಉಲ್ಲಂಘನೆ ಆರೋಪ ಕೇಳಿಬಂದಾಗ ರಾಜ್ಯಪಾಲರು ಕೈಗೊಳ್ಳುವ ಕಾನೂನು ಕ್ರಮ ಇದಾಗಿದೆ.
ಕಾನೂನಿನ ವಿನಾಯಿತಿ ಇದೆಯೇ: ಇತರೆ ಸಾರ್ವಜನಿಕರಂತೆ ಸಿಎಂ ಕೂಡ ಸಂಪೂರ್ಣವಾಗಿ ಕಾನೂನು ಕ್ರಮದ ರಕ್ಷಣೆಯನ್ನು ಹೊಂದಿರುವುದಿಲ್ಲ. ಆದರೂ ಕೆಲವು ಮುನ್ನೆಚ್ಚರಿಕೆಗಳಿವೆ. ಉದಾಹರಣೆಗೆ, ಮೊಕದ್ದಮೆಯನ್ನು ಹೂಡಬೇಕಾದರೆ, ರಾಜ್ಯಪಾಲರು ಅವರ ಅನುಮತಿಯನ್ನು ನೀಡಬೇಕಾಗಬಹುದು.
ನ್ಯಾಯಾಲಯ ಪ್ರಕ್ರಿಯೆ: ಸಿಎಂ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ನೀಡಿದ ಬಳಿಕ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಲಿದೆ. ಅಲ್ಲಿ ಸಿಎಂ ಅನ್ನು ಕೂಡ ಇತರೆ ಆರೋಪಿಗಳಂತೆ ಪರಿಗಣಿಸಲಾಗುವುದು. ನ್ಯಾಯಾಲಯದ ಪ್ರಕ್ರಿಯೆಯಲ್ಲಿ ಆರೋಪ ಪಟ್ಟಿ ಹಾಕುವುದು, ಸಾಕ್ಷಿ ನೀಡುವುದು ಮತ್ತು ವಿಚಾರಣೆ ನಡೆಸಲಾಗುವುದು.
ರಾಜಕೀಯ ಪರಿಣಾಮಗಳು: ಸಿಎಂ ವಿರುದ್ಧದ ಕಾನೂನು ಕ್ರಮಗಳು ಪ್ರಮುಖವಾಗಿ ರಾಜಕೀಯ ಪರಿಣಾಮವನ್ನು ಹೊಂದಿವೆ. ಇದರಿಂದ ಸಿಎಂ ರಾಜೀನಾಮೆಗೆ ಬೇಡಿಕೆ, ರಾಜಕೀಯ ಅಸ್ಥಿರತೆ, ಮತ್ತು ರಾಜ್ಯ ಆಡಳಿತದ ಪರಿಣಾಮಕ್ಕೆ ಕಾರಣವಾಗುತ್ತದೆ. ಮುಖ್ಯಮಂತ್ರಿ ವಿರುದ್ಧದ ಕಾನೂನು ಕ್ರಮವು ಕೆಲವು ಸಾಂವಿಧಾನಿಕ ಮತ್ತು ಕಾನೂನು ರಕ್ಷಣೆಗಳಿಂದ ಬದ್ಧವಾಗಿರುವ ಕಾನೂನು ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ.
ಸಿಎಂ ಬಂಧಿಸಬಹುದೇ: ಕಾನೂನು ಹೇಳುವುದೇನು?
ಕಾನೂನಿನ ದೃಷ್ಟಿಯಲ್ಲಿ ಪ್ರತಿಯೊಬ್ಬರು ಸಮಾನ. ಸಿಎಂಗೆ ಇದರಿಂದ ಯಾವುದೇ ವಿನಾಯಿತಿ ಇಲ್ಲ. ಸಿಆರ್ಪಿಸಿ 1973 ಪ್ರಕಾರ, ಕಾನೂನು ಜಾರಿ ಅಧಿಕಾರಿಗಳು ಕೋರ್ಟ್ ವಾರೆಂಟ್ ಜಾರಿ ಮಾಡಿದಲ್ಲಿ ಯಾವುದೇ ವ್ಯಕ್ತಿಯನ್ನು ಬಂಧಿಸಬಹುದು.
ಸಿಎಂ ವಿರುದ್ಧದ ಗುರುತರ ಸಾಕ್ಷಿಗಳು ಲಭ್ಯವಾಗಿ ಆರೋಪಿ ನಾಪತ್ತೆಯಾದಾಗ ಇಲ್ಲವೇ ಸಾಕ್ಷ್ಯನಾಶ ಮಾಡಲು ಮುಂದಾದಾಗ ಅಥವಾ ಕಾನೂನು ಕ್ರಮವನ್ನು ತಪ್ಪಿಸಲು ಯತ್ನಿಸಿದಾಗ ಮಾತ್ರವೇ ಸಿಎಂ ಅವರನ್ನು ಬಂಧಿಸಬಹುದು ಎಂದು ವರದಿ ಹೇಳುತ್ತದೆ. ಇದಕ್ಕಿಂತ ಹೆಚ್ಚಾಗಿ ಪ್ರಕರಣದಲ್ಲಿ ಸಿಎಂ ದೋಷಿ ಎಂದು ಸಾಬೀತಾದಲ್ಲಿ ಕಚೇರಿಯಿಂದ ಅವರನ್ನು ತೆಗೆದು ಹಾಕಬಹುದು. ತನಿಖೆಯ ಸಂದರ್ಭದಲ್ಲಿ ಸಿಎಂ ಹುದ್ದೆಯಲ್ಲಿರುವುದನ್ನು ಕಾನೂನುಬದ್ಧವಾಗಿ ನಿಷೇಧಿಸಲಾಗಿಲ್ಲ.
ಕಾನೂನಿನ ಪ್ರಕಾರ ರಾಷ್ಟ್ರಪತಿ, ರಾಜ್ಯಪಾಲರು ಅವರ ಕಚೇರಿಯಲ್ಲಿದ್ದಾಗ ನಾಗರಿಕ ಮತ್ತು ಕ್ರಿಮಿನಲ್ ಪ್ರಕರಣದಲ್ಲಿ ರಕ್ಷಣೆ ನೀಡಬಹುದು. ವಿಧಿ 361ರ ಪ್ರಕಾರ, ರಾಷ್ಟ್ರಪತಿ ಅಥವಾ ರಾಜ್ಯಪಾಲರ ಬಂಧನಕ್ಕೆ ಅನುಮತಿ ನೀಡಲು ಅವಕಾಶವಿಲ್ಲ.
ಸುಪ್ರೀಂ ಕೋರ್ಟ್ ಆದೇಶದಂತೆ, ಸಂಪುಟದ ಸದಸ್ಯರು ಮತ್ತು ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್ ಪರಿಗಣಿಸುವಾಗ, ರಾಜ್ಯಪಾಲರು ಸಚಿವ ಸಂಪುಟದ ಶಿಫಾರಸು ಇಲ್ಲದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಬಹುದು. ಮುಖ್ಯಮಂತ್ರಿಯೊಬ್ಬರ ಪ್ರಾಸಿಕ್ಯೂಷನ್ ಅನ್ನು ಅನುಮೋದಿಸುವುದು ಅಥವಾ ನೀಡದಿರುವ ನಿರ್ಧಾರ ಕುರಿತು ರಾಜ್ಯಪಾಲರ ವಿವೇಚನೆಗೆ ಬಿಟ್ಟಿದ್ದಾಗಿದೆ ಎಂದು 2004ರ ಸುಪ್ರೀಂಕೋರ್ಟ್ ಆದೇಶದಲ್ಲಿ ತಿಳಿಸಲಾಗಿದೆ.
ಕೇಜ್ರಿವಾಲ್ ಬಂಧನ: ಸಿಎಂ ಆಗಿದ್ದಾಗಲೇ ಬಂಧನಕ್ಕೆ ಮುಖ್ಯಮಂತ್ರಿ ಕೇಜ್ರಿವಾಲ್ ಒಳಗಾಗಿದ್ದಾರೆ. ಮದ್ಯ ನೀತಿ ಹಗರಣದ ಆರೋಪದ ಮೇಲೆ ಎಎಪಿ ಮುಖ್ಯಸ್ಥ, ದೆಹಲಿ ಸಿಎಂ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬಂಧಿಸಿದ್ದರು.
ಈ ಹಿಂದೆ ಬಂಧಿತರಾಗಿದ್ದ ಮಾಜಿ ಸಿಎಂಗಳು
ಲಾಲು ಪ್ರಸಾದ್ ಯಾದವ್: ಬಿಹಾರ್ ಸಿಎಂ ಆಗಿದ್ದ ಲಾಲು ಪ್ರಸಾದ್ ಯಾದವ್ ಅವರು ಮೇವು ಹಗರಣ ಸಂಬಂಧ ಬಂಧನಕ್ಕೆ ಒಳಗಾದರು. ಜಾನುವಾರುಗಳ ಮೇವುಗಳ ಖರೀದಿ ಸಂದರ್ಭದಲ್ಲಿ ಸಾರ್ವಜನಿಕರ ಹಣ ದುರ್ಬಳಕೆ ಮಾಡಿಕೊಂಡಿದ್ದರು. ಜೊತೆಗೆ ಸಾರ್ವಜನಿಕ ಹಣವನ್ನು ಬೇರೆಡೆಗೆ ತಿರುಗಿಸಿದ ಆರೋಪವೂ ಅವರ ಮೇಲಿತ್ತು. ಈ ಯೋಜನೆಯ ದುರುಪಯೋಗಕ್ಕೆ ಅನುಕೂಲವಾಗುವಂತೆ ನಕಲಿ ಬಿಲ್ ಸೃಷ್ಟಿಸಲಾಗಿತ್ತು. 1990ರ ದಶಕದ ಈ ಹಗರಣದಲ್ಲಿ 2013ರಲ್ಲಿ ಒಂದರಲ್ಲಿ ಲಾಲು ಪ್ರಸಾದ್ ಯಾದವ್ ತಪ್ಪಿತಸ್ಥರೆಂದು ಸಾಬೀತಾದಾಗ ಐದು ವರ್ಷ ಸೆರೆವಾಸ ಅನುಭವಿಸಿದ್ದರು.
ಜಗನ್ನಾಥ ಮಿಶ್ರಾ: ಬಿಹಾರದ ಮೂರು ಬಾರಿ ಸಿಎಂ ಆಗಿದ್ದ ಜಗನ್ನಾಥ ಮಿಶ್ರಾ 1997 ಜೈಲು ಶಿಕ್ಷೆಗೆ ಒಳಗಾಗಿ 2013ರಲ್ಲಿ ಮತ್ತೆ ಆರೋಪ ಸಾಬೀತಾಗಿ ನಾಲ್ಕು ವರ್ಷ ಸೆರೆವಾಸ ಅನುಭವಿಸಿದ್ದರು.
ಜೆ ಜಯಲಲಿತಾ: ಅಕ್ರಮ ಆಸ್ತಿ ಪ್ರಕರಣದಲ್ಲಿ ಅಧಿಕಾರ ತ್ಯಜಿಸಿ ಬಂಧನಕ್ಕೊಳಗಾದ ದೇಶದ ಮೊದಲ ಮುಖ್ಯಮಂತ್ರಿ ಜಯಲಲಿತಾ. ತಮ್ಮ ಅಧಿಕಾರಾವಧಿಯಲ್ಲಿ ಆದಾಯ ಮೀರಿ ಆಸ್ತಿ ಸಂಗ್ರಹಣೆ ಆರೋಪ ಇವರ ಮೇಲಿತ್ತು. ಈ ಪ್ರಕರಣದಲ್ಲಿ ಅವರನ್ನು ತಪ್ಪಿತಸ್ಥರೆಂದು ನಿರ್ಣಯಿಸಿ, ನಾಲ್ಕು ವರ್ಷ ಶಿಕ್ಷೆ ವಿಧಿಸಲಾಗಿತ್ತು. ಇದರಿಂದ ಸಿಎಂ ಸ್ಥಾನವನ್ನು ಕಳೆದುಕೊಂಡರು. ಈ ಪ್ರಕರಣ ಸಂಬಂಧ ಮೇಲ್ಮನವಿಯನ್ನು ಸಲ್ಲಿಸಿ, 2015ರಲ್ಲಿ ಖುಲಾಸೆಗೊಂಡರು. ಆದರೆ, ಕರ್ನಾಟಕ ಸರ್ಕಾರ ಅವರ ಖುಲಾಸೆಯನ್ನು ಪ್ರಶ್ನಿಸಿತು. 2017 ರಲ್ಲಿ ಸುಪ್ರೀಂ ಕೋರ್ಟ್ ಅವರ ಅಪರಾಧವನ್ನು ಎತ್ತಿ ಹಿಡಿಯಿತು. ಈ ತೀರ್ಪು ಬರುವ ಮುನ್ನವೇ ಜಯಲಲಿತಾ ನಿಧನರಾದರು.
ಬಿಎಸ್ ಯಡಿಯೂರಪ್ಪ: ಮಗನ ಪರವಾಗಿ ಭೂಮಿ ಮಂಜೂರು ಮಾಡಿದ ಆರೋಪ ಇವರ ಮೇಲಿತ್ತು. 2011ರ ಜುಲೈನಲ್ಲಿ ಪ್ರಕರಣ ಸಂಬಂದ ಲೋಕಾಯುಕ್ತ ಸಾಕಷ್ಟು ಸಾಕ್ಷಿ ಪತ್ತೆ ಮಾಡಿತ್ತು. 2011ರಲ್ಲಿ ಜೈಲಿಗೆ ಹೋದ ಇವರು 23 ದಿನಗಳ ಬಳಿಕ ಜಾಮೀನಿನ ಮೇಲೆ ಹೊರ ಬಂದರು.
ಓಂ ಪ್ರಕಾಶ್ ಚೌಟಾಲ: ಹರಿಯಾಣ ಮಾಜಿ ಸಿಎಂ ಓಂ ಪ್ರಕಾಶ್ ಚೌಟಾಲ ವಿರುದ್ಧ ಶಿಕ್ಷಕರ ನೇಮಕಾತಿ ಭ್ರಷ್ಟಾಚಾರ ಪ್ರಕರಣ ಕೇಳಿಬಂದಿತ್ತು. ಈ ಆರೋಪದ ಮೇಲೆ ಚೌಟಾಲ, ಅವರ ಮಗ ಅಜಯ್ 10 ವರ್ಷ ಸೆರೆವಾಸ ಅನುಭವಿಸಿದರು.
ಮಧುಕೋಡ: ಜಾರ್ಖಂಡ್ ಮಾಜಿ ಸಿಎಂ ಮಧು ಕೋಡ ಕೂಡ ಮನಿ ಲಾಂಡರಿಂಗ್, ಆದಾಯ ಮೀರಿ ಅಸ್ತಿ, ಗಣಿ ಪ್ರಕರಣದಲ್ಲಿ ಆರೋಪ ಎದುರಿಸಿದರು. 2009ರಲ್ಲಿ ಬಂಧಕ್ಕೆ ಒಳಗಾದ ಅವರು 2013ರಲ್ಲಿ ಜಾಮೀನಿನ ಮೇಲೆ ಹೊರಬಂದರು. 2017ರಲ್ಲಿ 25 ಲಕ್ಷ ದಂಡದ ಜೊತೆಗೆ ಮೂರು ವರ್ಷ ಶಿಕ್ಷೆ ವಿಧಿಸಲಾಯಿತು.
ಹೇಮಂತ್ ಸೊರೆನ್: ಜಾರ್ಖಂಡ್ ಮುಕ್ತಿ ಮೋರ್ಚಾ ಸಿಎಂ ಹೇಮಂತ್ ಸೊರೆ ಅವರನ್ನು ಭೂ ಹಗರಣ ಸಂಬಂಧ ಇಡಿ ಅಧಿಕಾರಿಗಳು ಬಂಧಿಸಿದರು. 2024ರಂದು ಜ.31 ರಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಮುಡಾ ಪ್ರಕರಣದ ಟೈಮ್ ಲೈನ್
2024ರ ಜುಲೈ 5: ಮೈಸೂರಿನ ಹಂಚ್ಯಾ-ಸಾತಗಳ್ಳಿ ಎ ಮತ್ತು ಬಿ ವಲಯ ಮತ್ತು ದೇವನೂರು 3ನೇ ಹಂತದ ಬಡಾವಣೆಯಲ್ಲಿನ ಮುಡಾ ಒಟ್ಟು 130 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಈ ಜಮೀನಿನಲ್ಲಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರ ಜಮೀನಿದೆ. ನಗರ ಪಾಲಿಕೆಯು ಈ ಬಡಾವಣೆಗಳಲ್ಲಿ ಒಟ್ಟು 8,486 ನಿವೇಶನಗಳನ್ನು ಅಭಿವೃದ್ಧಿಪಡಿಸಿ 2001-02ರಲ್ಲಿ ಹಂಚಿಕೆ ಮಾಡಿದೆ. ಈ ಸೈಟ್‌ಗಳನ್ನು ಅಭಿವೃದ್ಧಿಪಡಿಸಲು 130 ಎಕರೆ ಭೂಮಿಯನ್ನು ಎಷ್ಟು ಬಳಸಲಾಗಿದೆ. ಬಳಕೆಯಾಗದ ಭೂಮಿಯ ಯಾವ ಡಿನೋಟಿಫೈ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿಜಯನಗರ ಪೊಲೀಸರಿಗೆ ದೂರು ನೀಡಿದ್ದರು. ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಸೋದರ ಮಾವ ಮಲ್ಲಿಕಾರ್ಜುನ ಮತ್ತಿತರರು ನಕಲಿ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದ್ದರು.
ಜುಲೈ 25: ಮುಡಾ ಹಗರಣದ ಸಂಬಂಧ ಮುಖ್ಯ ಆರೋಪಿಯಾಗಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಒಪ್ಪಿಗೆ ಪಡೆಯುವುದಾಗಿ ಟಿಜೆ ಅಬ್ರಹಾಂ ಘೋಷಿಸಿದರು.
ಜುಲೈ 8: ಮುಡಾ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಕ್ರಿಮಿನಲ್ ದೂರು ದಾಖಲಾಗಿತ್ತು. ಸಿದ್ದರಾಮಯ್ಯ ಅಧಿಕಾರ ದುರ್ಬಳಕೆ ಮಾಡಿದ್ದಾರೆ ಎಂದು ಉಲ್ಲೇಖಿಸಲಾಯಿತು. ಸ್ನೇಹಮಯಿ ಕೃಷ್ಣ ಖಾಸಗಿ ಅಪರಾಧ ದೂರು ಅನ್ನು ದಾಖಲಿಸಿದರು.
ಆಗಸ್ಟ್ 13: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಹೊಸ ದೂರು ನೀಡಲಾಯಿತು. ಮುಖ್ಯಮಂತ್ರಿ ಅಧಿಕಾರ ದುರುಪಯೋಗ ಪಡಿಸಿಕೊಂಡು ಕಾನೂನು ಪ್ರಕ್ರಿಯೆಗಳನ್ನು ಉಲ್ಲಂಘಿಸಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ದೂರಿನಲ್ಲಿ ಉಲ್ಲೇಖಿಸಿದ್ದರು.
ಇದನ್ನೂ ಓದಿ: ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ