ಬೆಂಗಳೂರು: ಸಾರಿಗೆ ಇಲಾಖೆಯ ಪ್ರಥಮ ದರ್ಜೆ ಸಹಾಯಕರೊಬ್ಬರ ಎತ್ತರ ಕಡಿಮೆ ಇದೆ ಎನ್ನುವ ಕಾರಣದಿಂದ ಬಡ್ತಿ ನೀಡದ ಕ್ರಮವನ್ನು ಹೈಕೋರ್ಟ್ ರದ್ದುಪಡಿಸಿದೆ. ಬೆಂಗಳೂರಿನ ಪಿ.ಮಂಜುನಾಥ್ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನು ಸಿವರಾಮನ್ ಮತ್ತು ನ್ಯಾಯಮೂರ್ತಿ ಅನಂತರಾಮನಾಥ ಹೆಗಡೆ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿತು. ನೇರ ನೇಮಕವಾದವರಿಗೆ ಅನ್ವಯವಾಗದ ಎತ್ತರದ ನಿಯಮವನ್ನು ಅರ್ಜಿದಾರರಿಗೆ ಅನ್ವಯಿಸಲಾಗದು ಎಂದು ತಿಳಿಸಿದೆ.
ಮುಂದಿನ ಒಂದು ತಿಂಗಳೊಳಗೆ ಅರ್ಜಿದಾರರಿಗೆ ನೇರ ನೇಮಕಾತಿಗೆ ವಿಧಿಸಿರುವ ಮಾನದಂಡದಂತೆ ಬಡ್ತಿ ನೀಡಬೇಕು. ಆ ಬಡ್ತಿ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ವಿಶೇಷ ಮೇಲ್ಮನವಿಯ ತೀರ್ಪಿಗೆ ಒಳಪಟ್ಟಿರುತ್ತದೆ. ನೇಮಕಾತಿ ನಿಯಮಗಳಲ್ಲಿ ನೇರ ನೇಮಕಾತಿಗೆ ದೈಹಿಕ ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಆ ಮಾನದಂಡಗಳು ಅರ್ಜಿದಾರರಿಗೆ ಬೇರೆ ಮತ್ತು ನೇರ ನೇಮಕಗೊಂಡವರಿಗೆ ಅನ್ವಯವಾಗುವುದಿಲ್ಲ. ಸರ್ಕಾರ ಈಗಾಗಲೇ ಅಭ್ಯರ್ಥಿಗಳ ಎತ್ತರವನ್ನು ಪರಿಗಣಿಸದೆ 33 ಮಂದಿಯನ್ನು ನೇರ ನೇಮಕಾತಿ ಮಾಡಿಕೊಂಡಿದ್ದು, ಅವರಿಗೆ ಬಡ್ತಿ ನೀಡಿದೆ. ಅದೇ ರೀತಿ ಅರ್ಜಿದಾರರೂ ಸಹ ಬಡ್ತಿಗೆ ಅರ್ಹರು ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರ ಮಂಜುನಾಥ್, ಸಾರಿಗೆ ಇಲಾಖೆಯಲ್ಲಿ ಎಫ್‌ಡಿಎ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಮೋಟಾರು ವಾಹನ ನಿರೀಕ್ಷಕ ಹುದ್ದೆಗೆ ಬಡ್ತಿ ಕೋರಿ ಅರ್ಜಿ ಸಲ್ಲಿಸಿದ್ದರು. ನಿಯಮದಂತೆ ಎತ್ತರ ಹೊರತುಪಡಿಸಿದರೆ ಬಡ್ತಿಯ ಎಲ್ಲಾ ಅರ್ಹತೆಗಳಿತ್ತು. ಈ ಮನವಿಯನ್ನು 2023ರ ಏ.15ರಂದು ಇಲಾಖೆ ತಿರಸ್ಕರಿಸಿತ್ತು. ಅರ್ಜಿದಾರರು ಇಲಾಖೆಯ ಆದೇಶವನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ(ಕೆಎಟಿ)ಯಲ್ಲಿ ಪ್ರಶ್ನಿಸಿದ್ದರು. ಅಲ್ಲದೆ, ಕೇಂದ್ರದ ಮೋಟಾರು ವಾಹನ ಕಾಯಿದೆಯಡಿಯಲ್ಲಿ ಹುದ್ದೆಗೆ ಕನಿಷ್ಠ ಆರ್ಹತೆಗಳಲ್ಲಿ ಎತ್ತರದ ಬಗ್ಗೆ ಉಲ್ಲೇಖವಿಲ್ಲ. ತಾನು ಮೋಟಾರು ವಾಹನ ನಿರೀಕ್ಷಕರ ಹುದ್ದೆಗೆ ಅಗತ್ಯವಾದ 168 ಸೆಂಟಿ ಮೀಟರ್ ಎತ್ತರವಿದ್ದು, ಬಡ್ತಿ ನೀಡಲು ನಿರ್ದೇಶನ ನೀಡಬೇಕು ಎಂದು ಕೋರಿದ್ದರು. ಕೆಎಟಿಇ ಈ ಅರ್ಜಿಯನ್ನು ತಿರಸ್ಕರಿಸಿತ್ತು. ಹಾಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆಯಲ್ಲಿ ಅರ್ಜಿದಾರರ ಪರ ವಾದ ಮಂಡಿಸಿದ ಸತೀಶ್ ಕೆ.ಭಟ್, ಸುಪ್ರೀಂ ಕೋರ್ಟ್ 2022ರಲ್ಲಿ ನೀಡಿರುವ ಮಧ್ಯಂತರ ಆದೇಶದಂತೆ ಅರ್ಜಿದಾರರು ಕೂಡ ಬಡ್ತಿಗೆ ಅರ್ಹರಾಗಿದ್ದಾರೆ. ಹಾಗಾಗಿ ಅವರಿಗೆ ಬಡ್ತಿ ನೀಡುವಂತೆ ನಿರ್ದೇಶನ ನೀಡಬೇಕೆಂದು ಕೋರಿದ್ದರು. ಅಲ್ಲದೆ, ಇಲಾಖೆಯಲ್ಲಿ ಶೇ.5ರಷ್ಟು ಹುದ್ದೆಗಳಿಗೆ ನೇರ ನೇಮಕ ಮಾಡಿಕೊಳ್ಳಲು ಅವಕಾಶವಿದ್ದು, ಆ ರೀತಿ ನೇರ ನೇಮಕ ಆಗುವವರಿಗೆ ಎತ್ತರದ ಮಾನದಂಡ ನಿಗದಿಪಡಿಸಿಲ್ಲ. ಹಾಗಾಗಿ ಅವರಿಗೆ ಅನ್ವಯಿಸುವ ನಿಯಮವನ್ನು ಅರ್ಜಿದಾರರಿಗೂ ಅನ್ವಯಿಸಬೇಕು ಎಂದು ವಿವರಿಸಿದ್ದರು.
ಇದನ್ನೂ ಓದಿ: ಅಪ್ರಾಪ್ತೆ ಅತ್ಯಾಚಾರ, ಮದುವೆ: ಮಗು - ತಾಯಿಯ ಭವಿಷ್ಯಕ್ಕಾಗಿ ಆರೋಪಿ ಮೇಲಿನ ಕೇಸ್ ರದ್ದು - High Court Quashed POCSO Case