ಬೆಳಗಾವಿ: ಖಾಸಗಿ ಶಾಲಾ ಬಸ್ ಪಲ್ಟಿಯಾಗಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗೋಕಾಕ್ ಹಾಗೂ ಪಾಶ್ಚಾಪುರ ರಸ್ತೆಯ ಮೇಲಮಟ್ಟಿ ಗ್ರಾಮದ ಬಳಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಸ್ಕೂಲ್ ವಾಹನ ಪಲ್ಟಿಯಾಗಿದೆ.
ಒಂದೇ ಬಸ್ಸಿನಲ್ಲಿ 100ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ತುಂಬಿಕೊಂಡು ಶಾಲೆ ಕಡೆ ಸಾಗುತ್ತಿತ್ತು. ಬಸ್ನಲ್ಲಿ ಸಾಮರ್ಥ್ಯಕ್ಕೂ ಮೀರಿ ವಿದ್ಯಾರ್ಥಿಗಳನ್ನು ತುಂಬಲಾಗಿತ್ತು ಎನ್ನಲಾಗಿದೆ. ಇದರಿಂದಲೇ ಅಪಘಾತವಾಗಿದೆ ಎಂದು ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಗಾಯಗೊಂಡ ಮಕ್ಕಳನ್ನು ಕೊಣ್ಣೂರ ಮತ್ತು ಗೋಕಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗೋಕಾಕ್ ತಾಲೂಕಿನ ಮರಡಿಮಠ ಗ್ರಾಮದ ಜೈ ಹನುಮಾನ್ ಸಂಜೀವ ನಾಯಕ ಆಂಗ್ಲ ಮಾಧ್ಯಮ ಶಾಲೆಯ ಬಸ್ ಇದಾಗಿದ್ದು, ಮಾವನೂರ, ಗೊಡಚಿನಮಲ್ಕಿ, ಮೇಲಮಟ್ಟಿ ಗ್ರಾಮದ ವಿದ್ಯಾರ್ಥಿಗಳನ್ನು ಕೊಂಡೊಯ್ಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಸ್ಥಳಕ್ಕೆ ಗೋಕಾಕ್ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಲವು ವರ್ಷಗಳಿಂದ ಈ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆ ದುರಸ್ತಿಗೊಳಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ನಮ್ಮ ಮಕ್ಕಳ ಜೀವಕ್ಕೆ ಏನಾದರೂ ಆದರೆ ಯಾರು ಹೊಣೆ ಎಂದು ಪೋಷಕರು ಪ್ರಶ್ನಿಸಿದ್ದಾರೆ. ಈ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಓದಿ: ನೇಪಾಳ ಕಠ್ಮಂಡು ಏರ್ಪೋರ್ಟ್‌ನಲ್ಲಿ ವಿಮಾನ ಪತನ; 18 ಮಂದಿ ಸಾವು, ಪೈಲಟ್ ಬಚಾವ್ - Nepal Plane Crash