ಬೆಂಗಳೂರು: ರಾಜ್ಯದಲ್ಲಿ ಎರಡು ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ಮೊದಲ ಹಂತದಲ್ಲಿ ಚುನಾವಣೆ ನಡೆಯುವ ಕ್ಷೇತ್ರಗಳ ವ್ಯಾಪ್ತಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪ್ರಚಾರ ನಡೆಸಲಿದ್ದಾರೆ. ಬೃಹತ್ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ರೋಡ್ ಶೋ ನಡೆಸುವ ಮೂಲಕ ಮತಯಾಚನೆ ಮಾಡಲಿದ್ದಾರೆ ಎಂದು ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಸುನೀಲ್ ಕುಮಾರ್ ತಿಳಿಸಿದರು.
ಮಲ್ಲೇಶ್ವರದ ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಾತನಾಡಿದ ಅವರು, ಏ.20 ರಂದು ಚಿಕ್ಕಬಳ್ಳಾಪುರದಲ್ಲಿ ಪ್ರಧಾನಿ ಮೋದಿ ಅವರ ಸಮಾವೇಶ ಆಯೋಜಿಸಿದ್ದು, 1 ಲಕ್ಷ ಜನ ಸೇರುವ ನಿರೀಕ್ಷೆಯಲ್ಲಿ ಕೆಲಸ ಕಾರ್ಯ ಆರಂಭಿಸಲಾಗಿದೆ. ಅಂದು ಸಂಜೆ 5.30ಕ್ಕೆ ಅರಮನೆ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆ ಹಮ್ಮಿಕೊಳ್ಳಲಾಗಿದೆ.
ಅರಮನೆ ಮೈದಾನದಲ್ಲಿ ಸಮಾವೇಶ: ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಮತ್ತು ಬೆಂಗಳೂರು ಗ್ರಾಮಾಂತರದ ನಾಲ್ಕು ಕ್ಷೇತ್ರಗಳ ಚುನಾವಣಾ ಪ್ರಚಾರದ ಸಭೆ ನಡೆಯಲಿದೆ. ಅರಮನೆ ಮೈದಾನದ ಗೇಟ್ ನಂಬರ್ 1ರಲ್ಲಿ ಈ ಸಮಾವೇಶ ನಡೆಯಲಿದೆ. ವಿಜಯ ಸಂಕಲ್ಪ ಹೆಸರಿನ ಸಮಾವೇಶಕ್ಕಾಗಿ ಎರಡೂ ಕಡೆಗಳಲ್ಲಿ ಸಿದ್ಧತೆ ಆರಂಭಿಸಲಾಗಿದೆ ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರವಾಸ ನಿಗದಿಯಾಗಿದೆ. ಏಪ್ರಿಲ್ 23 ಮತ್ತು 24 ರಂದು ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಳ್ಳುತ್ತಾರೆ. 23 ರಂದು ಬೆಳಗ್ಗೆ 10 ಗಂಟೆಗೆ ಯಶವಂತಪುರದಲ್ಲಿ ರೋಡ್ ಶೋ ನಡೆಸಲಿರುವ ಅಮಿತ್ ಶಾ, ನಂತರ 11.30ಕ್ಕೆ ಯಲಹಂಕದಲ್ಲಿ ನಡೆಯಲಿರುವ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಅಂದು ಸಂಜೆ 4 ಗಂಟೆಗೆ ಬೊಮ್ಮನಹಳ್ಳಿಯಲ್ಲಿ ರೋಡ್ ಶೊ ನಡೆಸಲಿದ್ದು, ರಾತ್ರಿ 7 ಗಂಟೆಗೆ ಮಹದೇವಪುರ ಕ್ಷೇತ್ರದಲ್ಲಿ ರೋಡ್ ಶೋ ಮೂಲಕ ಬಿಜೆಪಿ ಅಭ್ಯರ್ಥಿಗಳ ಪರ ಮತ ಯಾಚಿಸಲಿದ್ದಾರೆ. ಏಪ್ರಿಲ್ 24 ರಂದು ಬೆಳಗ್ಗೆ 10 ಗಂಟೆಗೆ ಚಿಕ್ಕಮಗಳೂರಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿರುವ ಅಮಿತ್ ಶಾ ಮಧ್ಯಾಹ್ನ 1 ಗಂಟೆಗೆ ತುಮಕೂರಿನಲ್ಲಿ ನಡೆಯಲಿರುವ ಹಿಂದುಳಿದ ವರ್ಗದ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಾರೆ. 5 ಗಂಟೆಗೆ ಹುಬ್ಬಳ್ಳಿಯಲ್ಲಿ ರೋಡ್ ಶೋ ದಲ್ಲಿ ಪಾಲ್ಗೊಂಡು ಬಿಜೆಪಿ ಪರ ಪ್ರಚಾರ ನಡೆಸಲಿದ್ದಾರೆ ಎಂದು ಅವರು ವಿವರಿಸಿದರು.
ಆರ್ ಆರ್ ನಗರ ಕ್ಷೇತ್ರದಲ್ಲಿ ರೋಡ್ ಶೋ: ಏಪ್ರಿಲ್ 24 ರಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ಪ್ರಚಾರ ನಡೆಸಲಿದ್ದು, ಬೆಳಗ್ಗೆ 10 ಗಂಟೆಗೆ ಆರ್ ಆರ್ ನಗರ ಕ್ಷೇತ್ರದಲ್ಲಿ ರೋಡ್ ಶೋ ಕೈಗೊಳ್ಳಲಿರುವ ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಅವರು ಮಧ್ಯಾಹ್ನ 12 ಗಂಟೆಗೆ ಮಡಿಕೇರಿಯಲ್ಲಿ ನಡೆಯಲಿರುವ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಂಜೆ 4 ಗಂಟೆಗೆ ಉಡುಪಿ ಮಲ್ಪೆಯಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರವಾಸ ರಾಜ್ಯದಲ್ಲಿ ನಿಗದಿಯಾಗಿದೆ. ಜೆಪಿ ನಡ್ಡಾ 21 ರಂದು ರಾಜ್ಯಕ್ಕೆ ಆಗಮಿಸಲಿದ್ದರೆ ರಾಜನಾಥ್ ಸಿಂಗ್ 24 ರಂದು ರಾಜ್ಯದಲ್ಲಿ ಪ್ರವಾಸ ನಡೆಸಲಿದ್ದಾರೆ. ಕಾರ್ಯಕ್ರಮಗಳ ಸ್ಥಳ ಮತ್ತು ಸಮಯವನ್ನು ಇನ್ನಷ್ಟೇ ಅಂತಿಮಗೊಳಿಸಲಾಗುತ್ತದೆ ಎಂದರು.
ಮೊದಲ ಹಂತದ 14 ಕ್ಷೇತ್ರದಲ್ಲಿ ಬಹಳ ದೊಡ್ಡ ಪ್ರಮಾಣದ ಚುನಾವಣಾ ಪ್ರಚಾರಕ್ಕೆ ವೇಗ ಕೊಡುತ್ತಿದ್ದೇವೆ. ಈಗಾಗಲೇ ಮನೆ ಮನೆ ಪ್ರಚಾರ ಕಾರ್ಯ, ಮನೆಯಂಗಳದಲ್ಲಿ ನಡೆಯುವ ಸಭೆಗಳು ಬಿರುಸಾಗಿವೆ. ಈ ಚುನಾವಣೆಯಲ್ಲಿ ವಿಶೇಷ ಅಭಿಯಾನ ಕೈಗೊಂಡಿದ್ದೇವೆ.
21 ಮತ್ತು 28 ನಾನು ಮೋದಿ ಪರಿವಾರ,ಮೋದಿಗಾಗಿ ಮೀಸಲು ಈ ಭಾನುವಾರ ಎನ್ನುವ ಘೋಷಣೆ ಇಟ್ಟುಕೊಂಡು ದೊಡ್ಡ ಚುನಾವಣಾ ಅಭಿಯಾನವನ್ನು ರಾಜ್ಯದ ಎಲ್ಲಾ ಬೂತ್ಗಳಲ್ಲಿಯೂ ತೆಗೆದುಕೊಂಡು ಹೋಗಲಿದ್ದೇವೆ. 10 ವರ್ಷ ರಜೆ ಪಡೆಯದೆ ಕೆಲಸ ಮಾಡಿದ ಮೋದಿ ಪರ ಪ್ರಚಾರ ಕಾರ್ಯ ನಡೆಸಲಿದ್ದೇವೆ. ತಮ್ಮ ಮನೆಯ ಸುತ್ತು ಮುತ್ತ, ವ್ಯಾಪಾರ ಸ್ಥಳ, ವಾಕಿಂಗ್ ಸ್ಥಳ, ಅಪಾರ್ಟ್ ಮೆಂಟ್ ಸೇರಿ ಎಲ್ಲ ಸ್ಥಳಗಳಲ್ಲಿ ಮೋದಿ ಪರ ಚಟುವಟಿಕೆ ಮಾಡಲು ಒಂದು ಭಾನುವಾರ ಮೀಸಲಿಡಿ ಎನ್ನುವ ಕರೆ ನೀಡಿದ್ದೇವೆ ಎಂದು ಮಾಹಿತಿ ನೀಡಿದರು.
21 ರ ಭಾನುವಾರ 15 ಲಕ್ಷ ಜನ ಕೆಲ ಗಂಟೆಗಳ ಕಾಲ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ಸಿದ್ಧತೆ ಮಾಡಿಕೊಳ್ಳಲಿದ್ದೇವೆ. ಮೊದಲ ಹಂತದ 14 ಕ್ಷೇತ್ರಗಳಲ್ಲಿ 28 ಸಾವಿರ ಬೂತ್ ಗಳಿದ್ದು ತಲಾ 1 ಬೂತ್ ನಲ್ಲಿ 50 ಜನರು ಗುಂಪಾಗಿ ಚುನಾವಣಾ ಪ್ರಚಾರಕ್ಕೆ ಯೋಚನೆ ಮಾಡಿದ್ದೇವೆ. ಎರಡನೇ ಹಂತದ ಚುನಾವಣೆಗೂ ಇದೇ ರೀತಿಯ ಅಭಿಯಾನವನ್ನು ಏಪ್ರಿಲ್ 28 ರಂದು ಭಾನುವಾರ ನಡೆಸಲಾಗುತ್ತದೆ. 21 ರಂದು ಮತ್ತು 28 ರಂದು ದೊಡ್ಡ ಅಭಿಯಾನಕ್ಕೆ ಲಕ್ಷಾಂತರ ಜನ ಮೋದಿ ಅಭಿಮಾನಿಗಳು, ಮೋದಿ ಮೂರನೇ ಬಾರಿಗೆ ಗೆಲುವಿಗೋಸ್ಕರ ಕೆಲಸ ಮಾಡಬೇಕು ಎಂದು ಸುನೀಲ್ ಕುಮಾರ್ ಮನವಿ ಮಾಡಿದರು.
ಬೃಹತ್ ಸಾರ್ವಜನಿಕ ಸಮಾವೇಶ: ಏಪ್ರಿಲ್ 20ರಂದು ಸಂಜೆ ಅರಮನೆ ಮೈದಾನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಮಿಸಲಿದ್ದು, ಬೃಹತ್ ಸಾರ್ವಜನಿಕ ಸಮಾವೇಶ ನಡೆಸಲಾಗುತ್ತದೆ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ತಿಳಿಸಿದರು. ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬೆಂಗಳೂರು ದಕ್ಷಿಣ, ಬೆಂಗಳೂರು ಮಧ್ಯ, ಬೆಂಗಳೂರು ಉತ್ತರ ಕ್ಷೇತ್ರಗಳು, ಬೆಂಗಳೂರು ಗ್ರಾಮಾಂತರದ ಭಾಗದ ಜನರು, ಕಾರ್ಯಕರ್ತರು ಈ ಸಭೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು.
ನಾವು ರಚಿಸಿದ ಬಿಜೆಪಿಯ ಪ್ರತಿ ಬೂತ್ ಸಮಿತಿಯಲ್ಲಿ 10-15 ಕಾರ್ಯಕರ್ತರಿದ್ದಾರೆ. ಅವರೆಲ್ಲರೂ ಈ ಕಾರ್ಯಕ್ರಮಕ್ಕೆ ಬರಬೇಕೆಂದು ಆಹ್ವಾನಿಸಿದರು. ವಾರ್ಡ್, ಮಂಡಲ, ಜಿಲ್ಲಾ ಪದಾಧಿಕಾರಿಗಳು ಭಾಗವಹಿಸಬೇಕು. 32 ವಿಧಾನಸಭಾ ಕ್ಷೇತ್ರಗಳಿಂದ ದೊಡ್ಡ ಸಂಖ್ಯೆಯ ಕಾರ್ಯಕರ್ತರ ತಂಡ ಬರಬೇಕೆಂದು ವಿನಂತಿಸಿದರು. 20ರಂದು ಮೋದಿಯವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಗುವುದು ಎಂದು ವಿವರಿಸಿದರು.