ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಿಕ್ಷಣ ಇಲಾಖೆಯ ವಿರುದ್ಧ ಸಮರ ಸಾರಿರುವ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರು ಫ್ರೀಡಂ ಪಾರ್ಕ್‌ನಲ್ಲಿಂದು ಪ್ರತಿಭಟನೆ ನಡೆಸಿದರು. ಬಡ್ತಿ, ವರ್ಗಾವಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಸಾವಿರಾರು ಶಿಕ್ಷಕರು ಭಾಗಿಯಾಗಿದ್ದರು.
ಬೇಡಿಕೆಗಳೇನು?: 2017ರ ವರೆಗೆ ನೇಮಕಗೊಂಡಿರುವ ಶಿಕ್ಷಕರನ್ನು 1ರಿಂದ 7 ತರಗತಿಗೆ ನೇಮಕವಾದ ಶಿಕ್ಷಕರೆಂದು ಪರಿಗಣಿಸಬೇಕು. ಪದವಿ ಪೂರೈಸಿರುವ ಎಲ್ಲಾ ಶಿಕ್ಷಕರಿಗೆ ಸೇವಾ ಜ್ಯೇಷ್ಠತೆಯೊಂದಿಗೆ "ಪದವೀಧರ ಶಿಕ್ಷಕರೆಂದು" ಪದನಾಮಕರಣ ನೀಡಬೇಕು. 1ರಿಂದ 8ನೇ ತರಗತಿಗೆ ನೇಮಕವಾಗಿರುವ ಶಿಕ್ಷಕರನ್ನು PST ಎಂದು ಪದನಾಮಕರಣಗೊಳಿಸಿ, 1-5ನೇ ತರಗತಿಗೆ ಸೀಮಿತಗೊಳಿಸಿರುವ ಆದೇಶವನ್ನು ಹಿಂಪಡೆಯಬೇಕು. ಅರ್ಹ ವಿದ್ಯಾರ್ಹತೆ ಪೂರೈಸಿರುವ, 2016ಕ್ಕಿಂತಲೂ ಮೊದಲು ನೇಮಕಾತಿಯಾದ 1 ರಿಂದ 8ನೇ ತರಗತಿಗೆ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಈ ಮೊದಲಿನಂತೆ ಅರ್ಹತೆಯ ಆಧಾರದ ಮೇಲೆ ಪ್ರೌಢ ಶಾಲೆಗೆ ಬಡ್ತಿ ನೀಡಬೇಕು. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಈ ಪೂರ್ವದಂತೆ ಮುಖ್ಯಶಿಕ್ಷಕರ ಹಾಗೂ ಹಿರಿಯ ಮುಖ್ಯಶಿಕ್ಷಕರ ಹುದ್ದೆಗೆ ಸೇವಾ ಜ್ಯೇಷ್ಠತೆಯ ಆಧಾರದ ಮೇಲೆ ಬಡ್ತಿ ನೀಡಬೇಕು ಎಂದು ಪ್ರತಿಭಟನಾನಿರತ ಶಿಕ್ಷಕರು ಆಗ್ರಹಿಸಿದರು.
ಇದನ್ನೂ ಓದಿ: ಮುಡಾ: ರಾಜ್ಯಪಾಲರ ಶೋಕಾಸ್ ನೋಟಿಸ್ಗೆ ಸಿಎಂ ಸ್ಪಂದಿಸದಿದ್ದರೆ ರಾಷ್ಟ್ರಪತಿಗೆ ದೂರು- ಶಾಸಕ ಶ್ರೀವತ್ಸ - BJP MLA Srivatsa