ಹಾವೇರಿ: ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಮುಂಗಾರು ಪೂರ್ವ ಮಳೆ ಉತ್ತಮವಾಗಿದ್ದು, ಶೇ.75ರಷ್ಟು ರೈತರು ತಮ್ಮ ಭೂಮಿ ಹದಗೊಳಿಸಿದ್ದು, ಇನ್ನು ಶೇ.25ರಷ್ಟು ಭೂಮಿ ಹದಗೊಳಿಸುವ ಕೆಲಸ ನಡೆಯುತ್ತಿದೆ. ಇದೀಗ ಬಿತ್ತನೆ ಬೀಜಕ್ಕಾಗಿ ರೈತ ಸಂಪರ್ಕ ಕೇಂದ್ರಗಳಿಗೆ ರೈತರು ಮುಗಿಬೀಳುತ್ತಿದ್ದಾರೆ. ಮುಂಜಾನೆಯಿಂದಲೇ ಕೇಂದ್ರಗಳೆದುರು ಸರತಿ ಸಾಲಿನಲ್ಲಿ ನಿಂತು ಬೀಜ ಪಡೆಯುತ್ತಿದ್ದಾರೆ. ಆದರೆ, ಬಿತ್ತನೆ ಬೀಜ ಲಭಿಸುತ್ತಿಲ್ಲ ಎಂದು ರೈತರು ದೂರುತ್ತಿದ್ದಾರೆ.
''ಮೊದಲ ದಿನವೇ ಶೇಂಗಾ ಬೀಜ ಖಾಲಿಯಾಗಿದೆ. ವಿತರಣೆ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ಹೀಗಾದರೆ ರೈತರ ಪರಿಸ್ಥಿತಿ ಹೇಗೆ?'' ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
"ಒಂದೆ ಕಡೆ ರಸೀದಿ ನೀಡುತ್ತಾರೆ, ಮತ್ತೊಂದು ಕಡೆ ಬಿತ್ತನೆ ಬೀಜ ನೀಡುತ್ತಿದ್ದಾರೆ. ರೈತರು ಬಿಸಿಲಿನಲ್ಲಿ ಗಂಟೆಗಟ್ಟಲೆ ನಿಂತು ಬೀಜ ಪಡೆಯುವ ಪರಿಸ್ಥಿತಿ ಇದೆ. ರೈತ ಸಂಪರ್ಕ ಕೇಂದ್ರದಲ್ಲಿ ರಸೀದಿ ಮತ್ತು ಬಿತ್ತನೆ ಬೀಜ ನೀಡುವ ಪದ್ದತಿ ಅವೈಜ್ಞಾನಿಕ. ಅಧಿಕಾರಿಗಳು ತಕ್ಷಣ ಇದನ್ನು ಸರಿಪಡಿಸಬೇಕು'' ಎಂದು ರೈತರು ಒತ್ತಾಯಿಸಿದರು.
''ಚುನಾವಣೆಯ ಮತದಾನದ ವೇಳೆ ಬಿಸಿಲು ಆಗಬಾರದು ಎಂದು ಅಧಿಕಾರಿಗಳು ಶಾಮಿಯಾನ ಹಾಕಿದ್ದರು. ಆದರೆ, ಬಿತ್ತನೆ ಬೀಜ ಪಡೆಯಲು ರೈತರು ಬಿಸಿಲಿನಲ್ಲಿ ನಿಲ್ಲಬೇಕು. ಮತದಾನದ ಸಂದರ್ಭದಲ್ಲಿ ಅಧಿಕಾರಿಗಳು ನೆರಳಿನ ವ್ಯವಸ್ಥೆ ಮಾಡುತ್ತಾರೆ. ಆದರೆ ಬಿತ್ತನೆ ಬೀಜ ಪಡೆಯಲು ಬರುವ ರೈತರಿಗೆ ಕುಡಿಯುವ ನೀರು ಒದಗಿಸಬೇಕು, ನೆರಳಿನ ವ್ಯವಸ್ಥೆ ಮಾಡಬೇಕು ಎನ್ನುವ ಸಾಮಾನ್ಯ ಜ್ಞಾನವೂ ಅಧಿಕಾರಿಗಳಿಗಿಲ್ಲ'' ಎಂದು ರೈತರು ಆಕ್ರೋಶ ಹೊರಹಾಕಿದರು.
''ತಾಲೂಕಿನಲ್ಲಿರುವ ಹೋಬಳಿ ಕೇಂದ್ರಗಳಲ್ಲಿ ಮಾತ್ರ ಬಿತ್ತನೆ ಬೀಜ ವಿತರಿಸಲಾಗುತ್ತದೆ. ಇದರಿಂದ ರೈತರಿಗೆ ತೊಂದರೆಯಾಗುತ್ತದೆ ಮತ್ತು ನೂಕುನುಗ್ಗಲಿನಲ್ಲಿ ನಿಂತು ಬಿತ್ತನೆ ಬೀಜ ಪಡೆಯಬೇಕಾಗಿದೆ. ಅದರ ಬದಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ರೈತ ಕೇಂದ್ರಗಳಲ್ಲಿ ಹಾಗು ಸೂಸೈಟಿಗಳಲ್ಲಿ ಬೀಜ ವಿತರಣೆ ಮಾಡಲು ಕ್ರಮ ವಹಿಸಬೇಕು'' ಎಂಬುದು ರೈತರ ಒತ್ತಾಯ.
''ಸದ್ಯ ರೈತರಿಗೆ ಶೇಂಗಾ ಮತ್ತು ಸೋಯಾಬಿನ್ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಿಸಲಾಗುತ್ತಿದೆ. ರೈತರು ಯಾವುದೇ ಆತಂಕವಿಲ್ಲದೆ ಬಿತ್ತನೆ ಬೀಜ ಪಡೆಯಬಹುದು. ಬೇಕಾಗುವಷ್ಟು ಸಂಗ್ರಹವಿದೆ. ಇದು ಇನ್ನೂ ಮುಂಗಾರು ಪೂರ್ವ ಮಳೆ. ಈ ತಿಂಗಳ ಕೊನೆಯಲ್ಲಿ ಅಥವಾ ಜೂನ್ ತಿಂಗಳಿನಲ್ಲಿ ಮುಂಗಾರು ರಾಜ್ಯ ಪ್ರವೇಶಿಸಲಿದೆ. ರೈತರು ಯಾವುದೇ ಅವಸರ ಮಾಡದೇ ಬಿತ್ತನೆ ಬೀಜ ಪಡೆಯಬಹುದು. ಎಲ್ಲ ರೈತರಿಗೂ ಸಾಕಾಗುವಷ್ಟ ಬಿತ್ತನೆ ಬೀಜವಿದೆ. ರಸಗೊಬ್ಬರವೂ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹವಿದೆ'' ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮಳೆ ಸಂಬಂಧಿ ಸಮಸ್ಯೆಗಳು: ಇಂದು ಸಿಎಂ ಸಿದ್ದರಾಮಯ್ಯ ನಗರ ಪ್ರದಕ್ಷಿಣೆ - CM Siddaramaiah