ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಂದೆ ಹಾಜರಾಗಲು 7 ದಿನಗಳ ಕಾಲಾವಕಾಶ ಕೇಳಿದ್ದಾರೆ. ಎಸ್ಐಟಿ ನೀಡಿರುವ ನೋಟಿಸ್‌ಗೆ ಪ್ರತಿಯಾಗಿ ಸಿಐಡಿ ಮುಖ್ಯಸ್ಥರಿಗೆ ಪ್ರಜ್ವಲ್ ರೇವಣ್ಣ ಪರ ವಕೀಲರು ಪತ್ರ ಬರೆದಿದ್ದಾರೆ. ಈ ಪತ್ರ ಸಮೇತ ಇಂದು ಪ್ರಜ್ವಲ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
'ಸತ್ಯ ಆದಷ್ಟು ಬೇಗ ಹೊರಬರಲಿದೆ': 'ವಿಚಾರಣೆಗೆ ಹಾಜರಾಗಲು ನಾನು ಬೆಂಗಳೂರಿನಲ್ಲಿ ಇಲ್ಲದ ಕಾರಣ, ನನ್ನ ವಕೀಲರ ಮೂಲಕ ಸಿಐಡಿ ಬೆಂಗಳೂರಿಗೆ ಮನವಿ ಮಾಡಿದ್ದೇನೆ. ಸತ್ಯ ಆದಷ್ಟು ಬೇಗ ಹೊರಬರಲಿದೆ' ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಪ್ರಜ್ವಲ್ ವಕೀಲರ ಪತ್ರ: 'ಸಿಆರ್ಪಿಎಸ್ ಕಲಂ 41 (ಎ) ಅಡಿ ನೀಡಿದ ನೋಟಿಸ್ನಲ್ಲಿ ಮೇ 1ರಂದು ಹಾಜರಾಗಲು ತಿಳಿಸಿದ್ದೀರಿ. ಆದರೆ, ನನ್ನ ಕಕ್ಷಿದಾರರಾದ ಪ್ರಜ್ವಲ್ ರೇವಣ್ಣ ಬೆಂಗಳೂರಿನಿಂದ ಹೊರಗಡೆ ಪ್ರವಾಸದಲ್ಲಿದ್ದಾರೆ. ಅವರಿಗೆ ನೋಟಿಸ್ ಬಗ್ಗೆ ವಿಷಯ ತಿಳಿಸಲಾಗಿದೆ. ಬೆಂಗಳೂರಿಗೆ ಬಂದು ತಮ್ಮ ಮುಂದೆ ಹಾಜರಾಗಲು 7 ದಿನಗಳ ಕಾಲಾವಕಾಶ ಅಗತ್ಯವೆಂದು ತಿಳಿಸಿದ್ದಾರೆ. ಮತ್ತೊಂದು ದಿನಾಂಕದಂದು ತಮ್ಮ ಮುಂದೆ ಹಾಜರಾಗಲು ಅವಕಾಶ ನೀಡಬೇಕೆಂದು ತಮ್ಮಲ್ಲಿ ನನ್ನ ಕಕ್ಷಿದಾರರ ಪರವಾಗಿ ಕೋರುತ್ತೇನೆ' ಎಂದು ವಕೀಲ ಅರುಣ್ ಜಿ ಅವರು ಸಿಐಡಿ ವಿಶೇಷ ತನಿಖಾ ತಂಡದ ಪೊಲೀಸ್ ಉಪಾಧಿಕ್ಷಕರು ಮತ್ತು ತನಿಖಾಧಿಕಾರಿಗಳಿಗೆ ಪತ್ರ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವಕೀಲ ಅರುಣ್ ಪ್ರತಿಕ್ರಿಯೆ: ಈ ಕುರಿತು ವಕೀಲ ಅರುಣ್ ಮಾಧ್ಯಮಗಳಿಗೆ ಮಾತನಾಡಿ, ''ವಿಚಾರಣೆಗೆ ಹಾಜರಾಗುವಂತೆ ನನ್ನ ಕಕ್ಷಿದಾರರಿಗೆ ನೋಟಿಸ್ ಬಂದಿದೆ. 24 ಗಂಟೆಯೊಳಗೆ ಹಾಜರಾಗದಿದ್ದರೆ ಕ್ರಮ ಕೈಗೊಳ್ಳುವುದಾಗಿ ಎಲ್ಲಿಯೂ ಹೇಳಿಲ್ಲ. ನನ್ನ ಕಕ್ಷಿದಾರರ ಮನವಿಯ ಮೇರೆಗೆ ಎಸ್ಐಟಿಗೆ ಮನವಿ ಮಾಡಿದ್ದೇವೆ. ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ. ನಾವು ತನಿಖೆಗೆ ಸಹಕರಿಸಲು ಸಿದ್ಧ. ಹೆಚ್.ಡಿ.ರೇವಣ್ಣನವರೂ ಸಹ ಅದನ್ನೇ ಹೇಳಿದ್ದಾರೆ. ನಾನು ಸದ್ಯಕ್ಕೆ ಪ್ರಜ್ವಲ್ ರೇವಣ್ಣನವರ ಪರ ಮಾತ್ರ ಅರ್ಜಿ ಸಲ್ಲಿಸಿದ್ದೇನೆ. ಪ್ರಜ್ವಲ್ ರೇವಣ್ಣ ಏಳು ದಿನಗಳಲ್ಲಿ ವಿಚಾರಣೆಗೆ ಹಾಜರಾಗುತ್ತಾರೆ. ಅವರು ವಿದೇಶಕ್ಕೆ ಹೋಗಿರುವುದು ಪೂರ್ವಯೋಜಿತ ಎನ್ನುವುದು ಸುಳ್ಳು. ಪ್ರಕರಣ ದಾಖಲಾಗುವ ಮುನ್ನವೇ ಅವರು ವಿದೇಶಕ್ಕೆ ತೆರಳಿದ್ದರು'' ಎಂದು ತಿಳಿಸಿದ್ದಾರೆ.
ಹಾಸನದ ಹೊಳೆನರಸೀಪುರ ಟೌನ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಸಂಬಂಧ ಎಸ್ಐಟಿ ಎದುರು ವಿಚಾರಣೆಗೆ ಹಾಜರಾಗುವಂತೆ ಹೆಚ್.ಡಿ.ರೇವಣ್ಣ ಹಾಗೂ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರಿಗೆ ನೋಟಿಸ್ ನೀಡಲಾಗಿತ್ತು. ಇದಕ್ಕೆ ಪ್ರತಿಯಾಗಿ ಪ್ರಜ್ವಲ್ ತಮ್ಮ ವಕೀಲರ ಮೂಲಕ ಕಾಲಾವಕಾಶ ನೀಡುವಂತೆ ತನಿಖಾಧಿಕಾರಿಗಳನ್ನು ಕೋರಿದ್ದಾರೆ. ಪ್ರಕರಣದಲ್ಲಿ ಆರೋಪಿಗಳ ಹೇಳಿಕೆ ಅಗತ್ಯವಿರುವ ಹಿನ್ನಲೆಯಲ್ಲಿ ಸಿಆರ್‌ಪಿಸಿ 41(A)ನಡಿ ಇಬ್ಬರಿಗೂ ನೋಟಿಸ್ ನೀಡಿದ್ದ ಎಸ್ಐಟಿ, ನೋಟಿಸ್ ತಲುಪಿದ 24 ಗಂಟೆಯೊಳಗೆ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಫ್ಲೈಟ್ ಟಿಕೆಟ್ ಸೀಜ್ ಮಾಡಿದ್ದೇವೆ: ಗೃಹ ಸಚಿವ ಜಿ.ಪರಮೇಶ್ವರ್