ಬೆಂಗಳೂರು: ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಆಗ್ರಹಿಸಿ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ಕರ್ನಾಟಕ ಪಿಂಜಾರ ಜನಾಂಗ ಕ್ಷೇಮಾಭಿವೃದ್ಧಿ ಸಂಘಟನೆ ದೂರು ಸಲ್ಲಿಸಿದೆ.
ಕಳೆದ ಎರಡು ವರ್ಷಗಳಿಂದ ಪೆನ್ಡ್ರೈವ್ ಇದೆ ಎಂದು ಹೇಳಿಕೊಂಡಿರುವ ದೇವರಾಜೇಗೌಡ ಪೊಲೀಸರಿಗೆ ಯಾಕೆ ದೂರು ನೀಡಿರಲಿಲ್ಲ?. ಒಂದು ವೇಳೆ ದೂರು ನೀಡಿದ್ದರೆ ಸಂತ್ರಸ್ತೆಯರ ಮಾನ-ಮಾರ್ಯಾದೆ ಉಳಿಯುತ್ತಿತ್ತು ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಬಷೀರ್ ಅಹಮದ್ ತಿಳಿಸಿದರು.
ಅಶ್ಲೀಲ ವಿಡಿಯೋಗಳನ್ನು ಮಿಕ್ಸಿಂಗ್ ಮಾಡಿಸಿ ಸಾವಿರಾರು ಪೆನ್ಡ್ರೈವ್ಗಳನ್ನು ಅನಾಮಧೇಯ ವ್ಯಕ್ತಿಗಳ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಹಂಚಿದ್ದಾರೆ. ಈ ಮೂಲಕ ಸಾರ್ವಜನಿಕರ ಯೋಗಕ್ಷೇಮವನ್ನು ಲೆಕ್ಕಿಸದೆ ಗಂಭೀರ ಅಕ್ಷಮ್ಯ ಅಪರಾಧ ಎಸಗಿದ್ದಾರೆ ಎಂಬ ಆಯಾಮದಲ್ಲಿ ದೇವರಾಜೇಗೌಡರ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ವಿಚಾರಣೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಪ್ರಕರಣದಲ್ಲಿ ನಡೆದಿರುವ ಹಾಗೂ ನಡೆಯುತ್ತಿರುವ ಎಲ್ಲ ಅಪರಾಧ ಚಟುವಟಿಕೆಗಳ ಬಗ್ಗೆ ಸಾಕ್ಷ್ಯಾಧಾರವಿದ್ದರೂ ಸಹ ದೇವರಾಜೇಗೌಡ ಕಾನೂನಿನ ವಿರುದ್ಧ ನಡೆದುಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.