ಹುಬ್ಬಳ್ಳಿ: ಲೋಕಸಭೆ ಚುನಾವಣೆ ಸೋತರೆ ಗ್ಯಾರಂಟಿ ರದ್ದುಪಡಿಸೋ ಬೆದರಿಕೆ ಹಾಕುತ್ತಿರುವ ಕಾಂಗ್ರೆಸ್ ಜನರ ಭಾವನೆ ಜತೆ ಚೆಲ್ಲಾಟ ಆಡುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹರಿಹಾಯ್ದಿದ್ದಾರೆ. 2023ರ ವಿಧಾನಸಭಾ ಚುನಾವಣೆ ವೇಳೆ ಗ್ಯಾರಂಟಿ ಯೋಜನೆಗಳ ಆಶ್ವಾಸನೆ ನೀಡಿ ಮತದಾರರನ್ನು ಸೆಳೆದಿದ್ದ ಕಾಂಗ್ರೆಸ್ ಈಗ ಲೋಕಸಭೆ ಚುನಾವಣೆಯಲ್ಲಿ ಮತ ನೀಡದಿದ್ದರೆ ಗ್ಯಾರಂಟಿಗಳನ್ನು ರದ್ದುಪಡಿಸುವ ಬೆದರಿಕೆವೊಡ್ಡಿ ಮತದಾರರನ್ನು ಬುಟ್ಟಿಗೆ ಹಾಕಿಕೊಳ್ಳಲು ನೋಡುತ್ತಿದೆ ಎಂದು ಎಕ್ಸ್ ಖಾತೆಯಲ್ಲಿ ಆರೋಪಿಸಿದ್ದಾರೆ.
ಕರ್ನಾಟಕದಲ್ಲಿ ಗ್ಯಾರಂಟಿಗಳನ್ನೇ ಮುಂದಿಟ್ಟುಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್‌ಗೆ ಇದೀಗ ಸೋಲಿನ ಭಯ ಶುರುವಾಗಿದೆ. ಹಾಗಾಗಿ ಲೋಕಸಭೆ ಚುನಾವಣೆ ಹೊತ್ತಿಗೆ ಕಾಂಗ್ರೆಸ್ ಶಾಸಕರು ಗ್ಯಾರಂಟಿಗಳನ್ನು ರದ್ದುಪಡಿಸುವ ಮಾತನಾಡುತ್ತಿದ್ದಾರೆ ಎಂದು ಜೋಶಿ ಟೀಕಿಸಿದ್ದಾರೆ. ಆಶ್ವಾಸನೆ ನೀಡಿದಂತೆ ಇನ್ನೂ ಸರಿಯಾಗಿ ಗ್ಯಾರಂಟಿಗಳನ್ನು ಎಲ್ಲರಿಗೂ ಪೂರೈಸಿಯೇ ಇಲ್ಲ. ಅದಾಗಲೇ ಮತದಾರರ ಮೇಲೆ ಗ್ಯಾರಂಟಿ ರದ್ದುಪಡಿಸುವ ಹೊಸ ಬೆದರಿಕೆ ತಂತ್ರ ಹೇರುತ್ತಿದೆ. ಜನರ ಭಾವನೆಗಳ ಜತೆ ಚೆಲ್ಲಾಟ ಆಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡದೇ ಇದ್ದರೆ ಎಲ್ಲ ಗ್ಯಾರಂಟಿ ಭಾಗ್ಯಗಳನ್ನು ರದ್ದು ಮಾಡುವುದಾಗಿ ಕಾಂಗ್ರೆಸ್ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿಕೊಂಡಿರುವುದನ್ನ ಕೇಳಿದರೆ ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳಿಗೆ ಗ್ಯಾರಂಟಿ ಇಲ್ಲದಂತಾಗಿದೆ ಎಂದು ಹೇಳಿದರು.
ರಾಜ್ಯದ ಅಭಿವೃದ್ಧಿಗೆ ಕತ್ತರಿ: ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಕತ್ತರಿ ಹಾಕಿದ ಕಾಂಗ್ರೆಸ್ ಇದೀಗ ತನ್ನ ಚುನಾವಣಾ ಗ್ಯಾರಂಟೀಗಳನ್ನೂ ಈಡೇರಿಸುತ್ತಿಲ್ಲ. ಖಂಡಿತವಾಗಿ ಮುಂದಿನ ಚುನಾವಣೆಯಲ್ಲಿ ಕೈ ಗೆ "ಕೈ" ಕೊಡಲಿದ್ದಾರೆ ಜನತೆ ಎಂದು ಸಚಿವ ಜೋಶಿ ಎಕ್ಸ್ ಮಾಧ್ಯಮದಲ್ಲಿ ಹೇಳಿದ್ದಾರೆ.
ಶಾಸಕ ಹೆಚ್.ಸಿ ಬಾಲಕೃಷ್ಣ ಹೇಳಿಕೆ: ನಿನ್ನೆ ದಿನ ರಾಮನಗರ ಜಿಲ್ಲೆಯ ಶ್ರೀಗಿರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕ ಹೆಚ್.ಸಿ.ಬಾಲಕೃಷ್ಣ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸದಿದ್ದರೆ ಗ್ಯಾರಂಟಿಗಳನ್ನು ರದ್ದು ಪಡಿಸುವುದು ಉತ್ತಮ ಎಂದು ಹೇಳಿಕೆ ನೀಡಿದ್ದರು.
"ಇಷ್ಟೆಲ್ಲಾ ಮಾಡಿ ಜನ ನಮಗೆ ಮತ ಹಾಕದೇ ತಿರಸ್ಕರಿಸಿದರೆ ಈ ಗ್ಯಾರಂಟಿಗಳಿಗೆ ಬೆಲೆ ಇಲ್ಲ, ಅಕ್ಷತೆಗೆ ಬೆಲೆ ಇದೆ ಎಂದು ತೀರ್ಮಾನ ಮಾಡಬೇಕಾಗುತ್ತದೆ. ಆಗ ನಾವೂ ಗ್ಯಾರಂಟಿಗಳನ್ನು ರದ್ದು ಮಾಡಿ, ಅಕ್ಷತೆ ಹಾಕಿ, ದೇವಸ್ಥಾನ ಕಟ್ಟಿ ಪೂಜೆ ಮಾಡಿ ಮತ ಹಾಕಿಸಿಕೊಳ್ಳುತ್ತೇವೆ" ಎಂದು ಹೇಳಿದ್ದರು.
ಇದನ್ನೂ ಓದಿ: 'ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲದಿದ್ದರೆ ಗ್ಯಾರಂಟಿ ರದ್ದುಗೊಳಿಸುವುದು ಉತ್ತಮ'