ಬೆಂಗಳೂರು/ಬೆೆಳಗಾವಿ: ಪಂಚಮಸಾಲಿ ಹೋರಾಟಗಾರರ ಮೇಲೆ ನಡೆದ ಲಾಠಿ ಚಾರ್ಜ್ ವಿಷಯ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿ ಕೋಲಾಹಲಕ್ಕೆ ಕಾರಣವಾಯಿತು.
ಕಲಾಪ ಆರಂಭಗೊಳ್ಳುತ್ತಿದ್ದಂತೆ ಪ್ರತಿಪಕ್ಷದ ಶಾಸಕರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಲಾರಂಭಿಸಿದರು. ಈ ವೇಳೆ, ಸ್ಪೀಕರ್ ಯು.ಟಿ.ಖಾದರ್ ಸಂತಾಪ ಸೂಚಕ ನಿರ್ಣಯವನ್ನು ಪ್ರಸ್ತಾಪಿಸಿದರು. ಆಗ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಹಿರಿಯ ಸದಸ್ಯರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ, ಅರಗ ಜ್ಞಾನೇಂದ್ರ, ಸುನಿಲ್‌ಕುಮಾರ್ ಮತ್ತು ಇತರರು ವಿಷಯ ಪ್ರಸ್ತಾಪಿಸಿ ಚರ್ಚೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್, ಈ ಮನೆಯಲ್ಲಿ ನಮ್ಮ ನಿಮ್ಮ ಹಾಗೆ ಜನಸೇವೆ ಮಾಡಿದ್ದ ಇಬ್ಬರು ಶಾಸಕರಾದ ಜಯಣ್ಣ ಮತ್ತು ಆರ್.ನಾರಾಯಣ್ ಅವರು ನಮನ್ನು ಅಗಲಿದ್ದಾರೆ. ಅವರಿಗೆ ಮೊದಲು ಸಂತಾಪ ಸೂಚನೆ ಮಂಡಿಸಿ ಅವರ ಕುಟುಂಬದ ದುಃಖವನ್ನು ಕಡಿಮೆ ಮಾಡುವುದು ನಮ್ಮ ಕರ್ತವ್ಯ. ಮೊದಲು ಅದಕ್ಕೆ ಅವಕಾಶ ಮಾಡಿಕೊಡಿ. ನಿಮ್ಮ ಉತ್ಸಾಹ ನನಗೆ ಅರ್ಥವಾಗುತ್ತದೆ ಎಂದು ಹೇಳಿದರು.
ಇದು ಉತ್ಸಾಹ ಅಲ್ಲ, ನೋವು ಎಂದು ಬಿಜೆಪಿಯ ಸುನಿಲ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು. ಆ ನೋವಿಗೆ ಬಿಜೆಪಿಯೇ ಕಾರಣ ಎಂದು ಕಾಂಗ್ರೆಸ್ ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ತಿರುಗೇಟು ನೀಡಿದರು. ಆಗ, ಮಾತಿನ ಚಕಮಕಿ ನಡೆಯಿತು. ಪ್ರತಿಪಕ್ಷದ ಸದಸ್ಯರನ್ನು ಸಮಾಧಾನಪಡಿಸಿದ ಸ್ಪೀಕರ್, ಪ್ರತಿಪಕ್ಷದವರು ಪ್ರಸ್ತಾಪಿಸುವ ವಿಷಯಕ್ಕೆ ಸಂತಾಪ ಸೂಚನೆ ಬಳಿಕ ಅವಕಾಶ ನೀಡುವುದಾಗಿ ಭರವಸೆ ನೀಡಿದರು. ನಂತರ ಸಂತಾಪ ಸೂಚನಾ ನಿರ್ಣಯ ಕೈಗೆತ್ತಿಕೊಂಡರು.
ಮಾಜಿ ಶಾಸಕರಿಗೆ ಸಂತಾಪ: ಮಾಜಿ ಶಾಸಕರಾದ ಆರ್.ನಾರಾಯಣ ಹಾಗೂ ಎಸ್.ಜಯಣ್ಣ ನಿಧನಕ್ಕೆ ವಿಧಾನಸಭೆಯಲ್ಲಿ ಇಂದು ಸಂತಾಪ ಸೂಚಿಸಿ ನಿರ್ಣಯ ಕೈಗೊಳ್ಳಲಾಯಿತು. ಕಲಾಪದ ಆರಂಭದಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರು, ಸಂತಾಪ ಸೂಚನೆ ನಿರ್ಣಯ ಮಂಡಿಸಿ, ಮಾಜಿ ಶಾಸಕ ಆರ್.ನಾರಾಯಣ ಅವರು 7 ಜುಲೈ 1943 ರಂದು ತುಮಕೂರಿನಲ್ಲಿ ಜನಿಸಿದ್ದರು. ಬಿಎಸ್ಸಿ ಹಾಗೂ ಕಾನೂನು ಪದವಿ ಪಡೆದಿದ್ದ ಅವರು ವಕೀಲರಾಗಿದ್ದರು. ಬೆಳಗಾವಿ ವಿಧಾನಸಭಾ ಕ್ಷೇತ್ರದಿಂದ ಪ್ರಥಮ ಬಾರಿಗೆ 9ನೇ ವಿಧಾನಸಭೆಗೆ ಪ್ರವೇಶಿಸಿ ನಂತರ 10 ಹಾಗೂ 11ನೇ ವಿಧಾನಸಭೆಗೆ ಪುನರ ಆಯ್ಕೆಯಾದರು. ಇವರು ಡಿ.12 ಗುರುವಾರದಂದು ಮುಂಜಾನೆ ನಿಧನ ಹೊಂದಿದ್ದಾರೆ ಎಂದು ತಿಳಿಸಿದರು.
ಮಾಜಿ ಶಾಸಕ ಹಾಗೂ ಪ್ರಸ್ತುತ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದ ಜಯಣ್ಣ ಎಸ್ ಅವರು 9ನೇ ಸೆಪ್ಟೆಂಬರ್ 1951ರಲ್ಲಿ ಕೊಳ್ಳೆಗಾಲದಲ್ಲಿ ಜನಿಸಿದ್ದರು. ಕೃಷಿಕ ಹಾಗೂ ರೇಷ್ಮೆ ಉದ್ಯಮಿಯಾಗಿದ್ದ ಅವರು 1994ರಲ್ಲಿ 9ನೇ ವಿಧಾನಸಭೆಗೆ ಆಯ್ಕೆಗೊಂಡಿದ್ದರು. ನಂತರ 2013ರಲ್ಲಿ 14ನೇ ವಿಧಾನಸಭೆಗೆ ಪುನರ ಆಯ್ಕೆಗೊಂಡಿದ್ದರು. ಇವರು ಡಿ.10 ರಂದು ನಿಧನರಾದರು ಎಂದು ಸಭೆಗೆ ತಿಳಿಸಿದರು.
ಸಂತಾಪ ನಿರ್ಣಯದ ಮೇಲೆ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಮಾತನಾಡಿ, ಆರ್.ನಾರಾಯಣ್ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಹಾಗೂ ಪ್ರಸ್ತುತ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದ ಜಯಣ್ಣ.ಎಸ್ ಸಹಿತ ಶಾಸಕರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದು ಸ್ಮರಿಸಿದರು. ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಕೃಷಿ ಸಚಿವ ಚಲವರಾಯಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹಾದೇಪ್ಪ ಸೇರಿದಂತೆ ಇತರೆ ಶಾಸಕರು ಸಂತಾಪ ನಿರ್ಣಯದ ಮೇಲೆ ಮಾತನಾಡಿದರು. ನಂತರ ಮೃತರ ಗೌರವಾರ್ಥ ಸದನದಲ್ಲಿ ಒಂದು ನಿಮಿಷದ ಮೌನಾಚರಣೆ ಆಚರಿಸಲಾಯಿತು.
ಇದನ್ನೂ ಓದಿ: ಕಾನೂನು ಕೈಗೆತ್ತಿಕೊಂಡಿದ್ದರಿಂದ ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿಚಾರ್ಜ್ ಅನಿವಾರ್ಯವಾಯ್ತು: ಜಿ.ಪರಮೇಶ್ವರ್
ಇದನ್ನೂ ಓದಿ: ಬೆಳಗಾವಿಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟ: ಪೊಲೀಸರಿಂದ ಲಾಠಿ ಪ್ರಹಾರ, ಹಲವರಿಗೆ ಗಾಯ; ಸ್ವಾಮೀಜಿ, ಯತ್ನಾಳ್ ವಶಕ್ಕೆ