ಮೈಸೂರು: ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಸಾವನ್ನಪ್ಪಿದ್ದು, ಈ ಪ್ರಕರಣದಲ್ಲಿ ದೂರು ಸ್ವೀಕರಿಸದ ಹಿನ್ನೆಲೆಯಲ್ಲಿ ಕೆ.ಆರ್.ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್, ಎಎಸ್ಐ ಹಾಗೂ ಹೆಡ್ ಕಾನ್ಸ್ಟೆಬಲ್ಅನ್ನು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ ಅಮಾನತು ಮಾಡಿ ಆದೇಶಿಸಿದ್ದಾರೆ.
ಕೆ.ಆರ್.ನಗರ ಠಾಣೆಯ ಇನ್ಸ್ಪೆಕ್ಟರ್ ಪಿ.ಪಿ.ಸಂತೋಷ್, ಸಹಾಯಕ ಸಬ್ ಇನ್ಸ್ಪೆಕ್ಟರ್ ಗಿರೀಶ್ ಹಾಗೂ ಹೆಡ್ ಕಾನ್ಸ್ಟೆಬಲ್ ರಾಘವೇಂದ್ರ ಅಮಾನತಾಗಿದ್ದಾರೆ.
ಪ್ರಕರಣವೇನು?: ಕೆ.ಆರ್.ನಗರ ತಾಲೂಕಿನ ಗ್ರಾಮವೊಂದರಲ್ಲಿ ಲೋಕೇಶ್ ಎಂಬ ಯುವಕ ಅದೇ ಗ್ರಾಮದ 17 ವರ್ಷದ ಅಪ್ರಾಪ್ತೆಯನ್ನು ಪ್ರೀತಿಸುವಂತೆ ನಾಟಕವಾಡಿ ಆಕೆಯ ಖಾಸಗಿ ಫೋಟೋಗಳು, ವಿಡಿಯೋಗಳನ್ನು ತೆಗೆದು ಬ್ಲಾಕ್‌ಮೇಲ್ ಮಾಡುತ್ತಿದ್ದ. ಈ ಸಂಬಂಧ ಸಂತ್ರಸ್ತೆಯ ಪೋಷಕರು ಕೆ.ಆರ್.ನಗರ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದು, ದೂರು ಸ್ವೀಕರಿಸಲು ಪೊಲೀಸರು ನಿರಾಕರಿಸಿದ್ದರು.
ಇದರಿಂದ ಮನನೊಂದ ಸಂತ್ರಸ್ತೆಯ ಪೋಷಕರು ಕಳೆದ ಶುಕ್ರವಾರ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿ, ದೇವರ ದರ್ಶನ ಪಡೆದು ವಾಪಸ್ ಬರುತ್ತಿದ್ದುರ. ಈ ವೇಳೆ ತಾಳೆ ಬೆಟ್ಟದಲ್ಲಿ ಸಂತ್ರಸ್ತೆಯ ಬಾಲಕಿ, ತಾಯಿ, ತಾತ ಹಾಗೂ ಅಜ್ಜಿ ವಿಷ ಸೇವಿಸಿದ್ದರು. 65 ವರ್ಷದ ತಾತ ಸಾವನ್ನಪ್ಪಿದರೆ, ಅಜ್ಜಿ, ಸಂತ್ರಸ್ತ ಬಾಲಕಿ ಹಾಗೂ ಆಕೆಯ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಂತ್ರಸ್ತೆ ಬಾಲಕಿಯ ತಾಯಿ(45) ಇಂದು ಚಿಕಿತ್ಸೆ ಫಲಕಾರಿಯಾಗದೆ ಚಾಮರಾಜನಗರದ ಹೊರವಲಯದಲ್ಲಿರುವ ಸಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಅಂಜಲಿ ಕೊಲೆ ಪ್ರಕರಣ : ಹುಬ್ಬಳ್ಳಿ-ಧಾರವಾಡ ಕಾನೂನು ಸುವ್ಯವಸ್ಥೆ ಡಿಸಿಪಿ ಅಮಾನತು - DCP SUSPENDS