ಚಿಕ್ಕಮಗಳೂರು: ರೀಲ್ಸ್ ಹುಚ್ಚಾಟದಿಂದ ಸಾವು ಸಂಭವಿಸುವ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅಪಾಯಕಾರಿ ಸ್ಥಳಗಳಲ್ಲಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗುತ್ತಿದೆ. ಆದರೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ಕಣ್ಣು ತಪ್ಪಿಸಿ ಕೆಲ ಪ್ರವಾಸಿಗರು ಬೇಜವಾಬ್ದಾರಿ ಪ್ರದರ್ಶಿಸುತ್ತಿದ್ದಾರೆ.
ಮಾನ್ಸೂನ್ ಟ್ರಿಪ್ ಹೆಸರಿನಲ್ಲಿ ಎಚ್ಚರಿಕೆ ಪಾಲಿಸದೇ ಮೋಜು ಮಾಡುತ್ತಿದ್ದಾರೆ. ಅಪಾಯಕಾರಿ ಗುಡ್ಡವಿರುವ ಜಾಗಗಳಲ್ಲಿ ಆಯತಪ್ಪಿ ಜಾರಿದರೆ ಪ್ರಾಣಾಪಾಯ ಕಟ್ಟಿಟ್ಟ ಬುತ್ತಿ ಎಂದು ಸ್ಥಳಿಯರು ಎಚ್ಚರಿಕೆ ನೀಡಿದರೂ ಪ್ರವಾಸಿಗರು ಗಮನ ಹರಿಸುತ್ತಿಲ್ಲ. ಧಾರಾಕಾರ ಮಳೆಯ ನಡುವೆಯೂ ಪಿರಮಿಡ್ ಆಕಾರದ ಗುಡ್ಡ ಹತ್ತಿಳಿಯುವುದು ತುಂಬಾ ಕಷ್ಟಕರ. ಅಂಥದ್ರರಲ್ಲಿ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಜೀವಕ್ಕೆ ಅಪಾಯವಿರುವಂತಹ ಗುಡ್ಡವನ್ನು ಕೆಲವು ಯುವಕರು ಹತ್ತಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಗುಡ್ಡ ಹತ್ತಿದ ನಾಲ್ವರು ಯುವಕರನ್ನು ಕೆಳಗಿಳಿಸಿದ ಪೊಲೀಸರು, ತಲಾ 500 ರೂಪಾಯಿ ದಂಡ ಹಾಕಿ ಕಳುಹಿಸಿದ್ದಾರೆ. ಇದೇ ರೀತಿ ಮತ್ತೊಮ್ಮೆ ಸಿಕ್ಕಿಬಿದ್ದರೆ ಕಟ್ಟುನಿಟ್ಟಿನ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ.
ಜಲಪಾತಗಳ ಸಮೀಪದ ದುರ್ಗಮ ಹಾದಿಗಳಲ್ಲಿ, ಘಾಟಿ ಪ್ರದೇಶಗಳಲ್ಲಿ ಹುಚ್ಚಾಟ ಮೆರೆಯುವುದು, ರಸ್ತೆ ಮಧ್ಯೆ ವಾಹನಗಳನ್ನು ನಿಲ್ಲಿಸಿಕೊಂಡು ನೃತ್ಯ ಮಾಡುವುದು ಈ ಭಾಗದಲ್ಲಿ ಸರ್ವೇ ಸಾಮಾನ್ಯ. ಪೊಲೀಸರು ಪ್ರತಿನಿತ್ಯ ಗಸ್ತು ತಿರುಗುತ್ತಿದ್ದರೂ ಜನರ ಬೇಜವಾಬ್ದಾರಿ ವರ್ತನೆ ಮುಂದುವರೆದಿದೆ.
ಇದನ್ನೂ ಓದಿ: ಜಲಪಾತದ ಬಳಿ ರೀಲ್ಸ್: 300 ಅಡಿ ಆಳದ ಕಮರಿಗೆ ಬಿದ್ದು ಮಹಿಳಾ ಚಾರ್ಟರ್ಡ್ ಅಕೌಂಟೆಂಟ್ ಸಾವು - Mumbai Based Reel Star Dies
ರೀಲ್ಸ್ ಹುಚ್ಚು: ನೇಣು ಕುಣಿಕೆ ಬಿಗಿಯಾಗಿ ಬಾಲಕ, ಬೈಕ್ ಸ್ಟಂಟ್ನಲ್ಲಿ ಯುವಕ ಸಾವು - Reels Craze