ಚಾಮರಾಜನಗರ : ಮನೆಗಳ್ಳರು, ದರೋಡೆ, ಸುಲಿಗೆಕೋರರ ನಿದ್ರೆಗೆಡಿಸಿದ್ದ ಹೆಸರಿಗೆ ತಕ್ಕಂತೆ ತನ್ನ ಬಾಹುಬಲ ಪರಾಕ್ರಮ ಮೆರೆದಿದ್ದ ಪೊಲೀಸ್ ಇಲಾಖೆಯ ಶ್ವಾನ ಅನಾರೋಗ್ಯದಿಂದ ಇಂದು ಅಸುನೀಗಿದೆ.
ಚಾಮರಾಜನಗರ ಪೊಲೀಸ್ ಇಲಾಖೆಯ ಅಪರಾಧ ಪತ್ತೆದಳದಲ್ಲಿದ್ದ ಶ್ವಾನ ಬಾಹು (7.4 ವರ್ಷ) ಅಸೌಖ್ಯದಿಂದ ನಿಧನವಾಗಿದ್ದು, ಪೊಲೀಸ್ ಇಲಾಖೆ ವತಿಯಿಂದ ಸಕಲ ಸರ್ಕಾರಿ ಗೌರವದಿಂದ ಬಾಹುವಿಗೆ ಭಾನುವಾರ ಅಂತಿಮ ನಮನ ಸಲ್ಲಿಸಲಾಯಿತು.
ಕ್ರೈಂ ಸ್ಕ್ವಾಡ್ನಲ್ಲಿದ್ದ ಈ ಶ್ವಾನವು ಮನೆಗಳವು, ದರೋಡೆ, ಸುಲಿಗೆ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ನಿಸ್ಸೀಮನಾಗಿತ್ತು. 94 ಪ್ರಕರಣಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಈ ಶ್ವಾನಕ್ಕೆ ಸಿದ್ದಯ್ಯ, ಸೆಲ್ವರಾಜ್ ಎಂಬವರು ಹ್ಯಾಂಡ್ಲರ್ಗಳಾಗಿದ್ದರು.
ಕಳೆದ ಜನವರಿಯಲ್ಲಿ ನಡೆದ ಪೊಲೀಸ್ ವಲಯ ಕರ್ತವ್ಯ ಕೂಟದ ಸ್ಪರ್ಧೆಯಲ್ಲಿ ಭಾಗಿಯಾಗಿ ಬೆಳ್ಳಿ ಪದಕವನ್ನು ಪಡೆದಿತ್ತು. ಪೊಲೀಸರ ಅಚ್ಚುಮೆಚ್ಚಿನ ಶ್ವಾನವಾಗಿತ್ತು. ಚಾಮರಾಜನಗರ ಎಸ್ಪಿ ಡಾ. ಕವಿತಾ ಸೇರಿದಂತೆ ಪೊಲೀಸ್ ಅಧಿಕಾರಿಗಳು ಅಂತಿಮ ಗೌರವ ಸಮರ್ಪಿಸಿದರು.
ನೀಳ ದೇಹ, ಸದೃಢ ಮೈಕಟ್ಟು, ಬೇಟೆಗಾರನ ಗುಣ ಹೊಂದಿದ್ದ ಡಾಬರ್ ಮನ್ ತಳಿಯ ಈ ಶ್ವಾನಕ್ಕೆ ಬಾಹು ಎಂದು ಹೆಸರಿಡಲಾಗಿತ್ತು.
ಇದನ್ನೂ ಓದಿ : ಹೆಸರಿಗೆ ತಕ್ಕಂತೆ ಸೌಮ್ಯ, ಅಪರಾಧ ಪ್ರಕರಣ ಭೇದಿಸುವಲ್ಲಿ ಚುರುಕಾಗಿದ್ದ ಶ್ವಾನ ವಿಧಿವಶ.. ದಾವಣಗೆರೆ ಪೊಲೀಸ್ ಇಲಾಖೆಗೆ ಆಘಾತ