ಕೋಲಾರ: ದೇಶ - ವಿದೇಶದ ದೊಡ್ಡ ದೊಡ್ಡ ಶಕ್ತಿಗಳು ನನ್ನನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಬೇಕು ಎಂಬ ಹುನ್ನಾರ ಮಾಡಿವೆ. ಆದರೆ, ನನಗೆ ದೇಶದ ತಾಯಂದಿರ ಆಶೀರ್ವಾದ ಇರುವವರೆಗೂ ಯಾರೂ ಏನು ಮಾಡೋಕೆ ಆಗಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಚಿಕ್ಕಬಳ್ಳಾಪುರದ ಚೊಕ್ಕನಹಳ್ಳಿ ಮೈದಾನದಲ್ಲಿ ಬಿಜೆಪಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.
ಕಳೆದ 10 ವರ್ಷಗಳಲ್ಲಿ ಎಸ್‌ಸಿ-ಎಸ್‌ಟಿ, ಒಬಿಸಿ ಸಮುದಾಯದ 25 ಕೋಟಿ ಮಂದಿಯನ್ನು ಬಡತನ ರೇಖೆಯಿಂದ ಮೇಲೆ ತಂದಿದ್ದೇವೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 14 ಸಾವಿರ, ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 24 ಸಾವಿರ ಮನೆಗಳನ್ನು ಕೇಂದ್ರ ಸರ್ಕಾರ ನೀಡಿದೆ. ಮುಂದಿನ ದಿನಗಳಲ್ಲಿ ಮೂರು ಕೋಟಿ ಮನೆಗಳನ್ನು ನೀಡುವ ಗುರಿ ಹೊಂದಲಾಗಿದೆ ಎಂದರು.
ನಾನು ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜನತೆಗ ಸ್ಪಷ್ಟ ಸಂದೇಶ ನೀಡುತ್ತೇನೆ, ಮತ್ತೊಮ್ಮೆ ಮೋದಿ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ. ನಿಮಗಾಗಿ ನಾನು 24x7 ಕಾಲ ದುಡಿಯುತ್ತೇನೆ ಎಂದು ಸಂಕಲ್ಪ ಮಾಡುತ್ತೇನೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಎಂಟು ಲಕ್ಷ ಫಲಾನುಭವಿಗಳಿಗೆ ಉಚಿತ ಪಡಿತರ ಕೊಡುತ್ತಿದ್ದೇವೆ. ಮುಂದಿನ ಐದು ವರ್ಷ ಉಚಿತ ಆಹಾರ ಸಾಮಗ್ರಿಗಳನ್ನು ನೀಡುತ್ತೇವೆ. ಇಲ್ಲಿ 4 ಲಕ್ಷಕ್ಕೂ ಹೆಚ್ಚು ಜನರಿಗೆ ಆಯುಷ್ಮಾನ್ ಕಾರ್ಡ್ ಸಿಕ್ಕಿದೆ. ಮತ್ತೊಂದು ಮೋದಿ ಗ್ಯಾರಂಟಿಯಿಂದ 70 ವರ್ಷ ವಯಸ್ಸಿನ ಎಲ್ಲರಿಗೂ ಐದು ಲಕ್ಷದವರೆಗೂ ಉಚಿತ ಆರೋಗ್ಯ ರಕ್ಷಣೆ ಸಿಗಲಿದೆ ಎಂದು ಹೇಳಿದರು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ಗೆ ಸಂಬಂಧಿಸಿದ ಐದು ಸ್ಥಳಗಳನ್ನು ಪಂಚತೀರ್ಥಗಳಾಗಿ ರೂಪಿಸಲಾಗಿದೆ. ಮುದ್ರಾ ಯೋಜನೆಯಡಿ ನೀಡುತ್ತಿದ್ದ ಸಾಲವನ್ನು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯದ ಯುವಕರಿಗೆ 10 ಲಕ್ಷದಿಂದ 20 ಲಕ್ಷಕ್ಕೆ ಏರಿಸಲಾಗಿದೆ. ನಮೋ ಡ್ರೋನ್ ಯೋಜನೆಯಡಿ ಹೆಣ್ಣು ಮಕ್ಕಳನ್ನು ಡ್ರೋನ್ ಪೈಲಟ್ಗಳಾಗಿ ಮಾಡಲಾಗುತ್ತಿದೆ. 2.70 ಲಕ್ಷ ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕ ನೀಡಲಾಗಿದೆ. ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಕೇಂದ್ರ ಸರ್ಕಾರ 6 ಸಾವಿರ, 4 ಸಾವಿರ ರೂ. ಗಳನ್ನ ಅಂದಿನ ರಾಜ್ಯ ಬಿಜೆಪಿ ಸರ್ಕಾರ ನೀಡುತಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ 4 ಸಾವಿರ ನಿಲ್ಲಿಸಿದೆ. ಅವರಿಗೆ ಸರಿಯಾದ ಪಾಠ ಕಲಿಸಬೇಕು ಅಂದರೆ ನೀವು ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ ಕೆ. ಸುಧಾಕರ್ ಅವರನ್ನ ಹಾಗೂ ಕೋಲಾರದಲ್ಲಿ ಮಲ್ಲೇಶ್ ಬಾಬು ಅವರನ್ನು ಜಯಶೀಲರನ್ನಾಗಿ ಮಾಡಬೇಕು ಎಂದು ಮೋದಿ ಕರೆ ನೀಡಿದರು.
ಮಾಜಿ ಪ್ರಧಾನಿ ದೇವೇಗೌಡ ಅವರು ಮಾತನಾಡಿ, ಕಳೆದ 10 ವರ್ಷಗಳಲ್ಲಿ ದೇಶವನ್ನು ವಿಶ್ವದಲ್ಲೇ ಉತ್ತಮ ಸ್ಥಾನಕ್ಕೆ ಪ್ರಧಾನಿ ಮೋದಿ ತೆಗೆದುಕೊಂಡು ಹೋಗಿದ್ದಾರೆ. ಆದರೆ ನಿನ್ನೆ ರಾಜ್ಯ ಕಾಂಗ್ರೆಸ್ ನವರು ಕೇಂದ್ರ ಸರ್ಕಾರವನ್ನ ಚೊಂಬಿಗೆ ಹೋಲಿಸಿ, ಬಿಜೆಪಿ ನಮಗೆ ಚೊಂಬು ಕೊಟ್ಟಿದ್ದಾರೆಂದು ಜಾಹೀರಾತು ನೀಡಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರದ ಅಧಿಕಾರಾವಧಿಯಲ್ಲಿ 2ಜಿ ಹಗರಣ, ರೈಲ್ವೆ ಹೀಗೆ ಎಷ್ಟು ಭ್ರಷ್ಟಾಚಾರ ಮಾಡಿದ್ದಾರೆ. ಎನ್ಡಿಎ 400 ಸ್ಥಾನಗಳನ್ನು ಗೆಲ್ಲಬೇಕಾದರೆ ರಾಜ್ಯದಲ್ಲಿ ನಾವು 28 ಸ್ಥಾನಗಳನ್ನು ಗೆಲ್ಲಬೇಕು. ರಾಜ್ಯದಲ್ಲಿ 28ಕ್ಕೆ 28 ಗೆಲ್ಲಬೇಕಾದರೆ ಚಿಕ್ಕಬಳ್ಳಾಪುರದಲ್ಲಿ ಡಾ. ಕೆ. ಸುಧಾಕರ್ ಅವರನ್ನು ಹಾಗೂ ಕೋಲಾರದಲ್ಲಿ ಮಲ್ಲೇಶ್ ಬಾಬು ಅರನ್ನು ಗೆಲ್ಲಿಸಿ ಪಾರ್ಲಿಮೆಂಟ್ಗೆ ಕಳುಹಿಸಬೇಕು ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಮಾಜಿ ಡಿಸಿಎಂ ಅಶ್ವತ್ಥನಾರಾಯಣ, ಕೋಲಾರ ಸಂಸದ ಮುನಿಸ್ವಾಮಿ ಸೇರಿದಂತೆ ಇತರರು ಇದ್ದರು.
ಇದನ್ನೂ ಓದಿ: ಅಪಾಯಕಾರಿ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ಅಧಿಕಾರಕ್ಕೆ ತರಬೇಡಿ: ಮೋದಿ - PM Modi campaign