ನವದೆಹಲಿ/ಬೆಂಗಳೂರು: ತಾಯಿಯ ಅಗಲಿಕೆ ನೋವಿನಲ್ಲಿರುವ ಕನ್ನಡದ ಜನಪ್ರಿಯ ನಟ ಕಿಚ್ಚ ಸುದೀಪ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪತ್ರ ಬರೆದು ಸಾಂತ್ವನ ಹೇಳಿದ್ದಾರೆ. ಅದರ ಪ್ರತಿಯನ್ನು ಕಿಚ್ಚ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಧನ್ಯವಾದ ತಿಳಿಸಿದ್ದಾರೆ.
ನಟ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ಅವರು ಅಕ್ಟೋಬರ್ 20 ರಂದು ಇಹಲೋಕ ತ್ಯಜಿಸಿದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಉಸಿರಾಟದ ತೊಂದರೆಯಿಂದಾಗಿ ಜಯನಗರದ ಅಪೊಲೊ ಆಸ್ಪತ್ರೆಯಲ್ಲಿ ನಿಧನರಾದರು.
ಇದಕ್ಕೆ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ ಅವರು, "ನಿಮ್ಮ ತಾಯಿ ಸರೋಜಾ ಅವರ ನಿಧನದ ಸುದ್ದಿ ನನಗೆ ತೀವ್ರ ನೋವು ತಂದಿದೆ. ಮಮಕಾರದ ಮೂರ್ತಿಯ ಅಗಲಿಕೆಯ ನಷ್ಟವನ್ನು ತುಂಬಲು ಸಾಧ್ಯವಿಲ್ಲ. ಅವರೊಂದಿಗಿನ ನಿಮ್ಮ ಬಾಂಧವ್ಯ, ಪ್ರೀತಿ ಎಂಥದ್ದು ಎಂಬುದು ನಿಮ್ಮ ಕಣ್ಣೀರೇ ಸಾಕ್ಷಿ. ನೆನಪುಗಳ ಮೂಲಕ ಅವರು ಶಾಶ್ವತವಾಗಿ ನಮ್ಮೊಂದಿಗೆ ಇರಲಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ತಾಯಿಯ ಬಗೆಗಿನ ವಿಶೇಷ ಸಾಲನ್ನು ಪತ್ರದಲ್ಲಿ ನಮೂದಿಸಿರುವ ಮೋದಿ ಅವರು, "ಈ ಕಷ್ಟದ ಸಂದರ್ಭದಲ್ಲಿ ನಾನು ನಿಮಗೆ ಸಂತಾಪ ಸೂಚಿಸುತ್ತೇನೆ. ನಿಮಗಾಗಿ ಮತ್ತು ನಿಮ್ಮ ಹಿತೈಷಿಗಳಿಗಾಗಿ ನಾನು ಪ್ರಾರ್ಥಿಸುತ್ತೇನೆ. ತಾಯಿಯ ಅಗಲಿಕೆ ನೋವನ್ನು ಭರಿಸುವ ಶಕ್ತಿ ನಿಮಗೆ ಭಗವಂತ ದಯಪಾಲಿಸಲಿ". ಓಂ ಶಾಂತಿ.. ಎಂದು ಪತ್ರದ ಕೊನೆಯಲ್ಲಿ ಬರೆದಿದ್ದಾರೆ.
Honarable @PMOIndia @narendramodi ji,
— Kichcha Sudeepa (@KicchaSudeep) October 28, 2024
I am writing to sincerely thank you for this compassionate condolence letter. Your thoughtful words provide a source of comfort during this profoundly difficult time.
Your empathy has touched my heart deeply, and I am truly grateful for your… pic.twitter.com/u4aeRF8Sw3
ಪ್ರಧಾನಿಗೆ ಕಿಚ್ಚ ಧನ್ಯವಾದ: ಪ್ರಧಾನಿ ಬರೆದ ಪತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಕಿಚ್ಚ ಸುದೀಪ್ ಧನ್ಯವಾದವನ್ನೂ ಸಲ್ಲಿಸಿದ್ದಾರೆ. "ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರೇ.. ನಿಮ್ಮ ಸಹಾನುಭೂತಿಯ ಸಂತಾಪ ಪತ್ರಕ್ಕಾಗಿ ಪ್ರಾಮಾಣಿಕ ಧನ್ಯವಾದಗಳು. ನಿಮ್ಮ ಚಿಂತನಶೀಲ ಮಾತುಗಳು ಈ ಕಷ್ಟದ ಸಮಯದಲ್ಲಿ ಸಾಂತ್ವನದ ಮೂಲಸೆಲೆಯನ್ನು ನೀಡಿದೆ. ನಿಮ್ಮ ಸಾಂತ್ವನವು ನನ್ನ ಹೃದಯ ತಟ್ಟಿದೆ. ನಿಮ್ಮ ವಿಶ್ವಾಸಕ್ಕೆ ನಾನು ಅಭಾರಿ" ಎಂದು ಪ್ರತಿಕ್ರಿಯಿಸಿದ್ದಾರೆ.
ಬಿಗ್ಬಾಸ್ಗೆ ವಿರಾಮ: ಇನ್ನು, ತಾಯಿಯ ಅಗಲಿಕೆ ಕಾರಣ ಕಿಚ್ಚ ಸುದೀಪ್ ಅವರು ತಾವು ನಡೆಸಿಕೊಡುವ ಬಿಗ್ ಬಾಸ್ ಶೋ ಚಿತ್ರೀಕರಣಕ್ಕೆ ವಿರಾಮ ನೀಡಿದ್ದಾರೆ. ಈ ಬಗ್ಗೆ ಬಿಗ್ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೂ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: ಕಿಚ್ಚನ ಬಿಗ್ ಬಾಸ್ನಲ್ಲಿ ದರ್ಶನ್ ಸಿನಿಮಾ ಚರ್ಚೆ: ಕಣ್ಣೀರ ಕಡಲಲ್ಲಿ ಮನೆಮಂದಿ, ಕಾರಣ?