ವಿಜಯಪುರ: ಪ್ರಧಾನಿ ಮೋದಿ ಅವರು ಬೆಲೆ ಏರಿಕೆ, ನಿರುದ್ಯೋಗ, ರೈತರ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ. ಬಿಜೆಪಿ ಸರ್ಕಾರದ ಹತ್ತು ವರ್ಷದ ಸಾಧನೆಗಳನ್ನು ಹೇಳದೆ ಧರ್ಮಗಳ ನಡುವೆ, ಜಾತಿಗಳ ನಡುವೆ ಬೆಂಕಿ ಇಡುವ ಕೆಲಸ ಮಾಡಿದ್ದಾರೆ. ಸುಳ್ಳು ಹೇಳುವರದಲ್ಲಿ ಪ್ರಧಾನಿ ಮೋದಿ ಪರಿಣಿತರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ವಿಜಯಪುರದಲ್ಲಿಂದು ನಡೆದ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಪರ ಚುನಾವಣೆ ಪ್ರಚಾರ ಕಾಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನರೇಂದ್ರ ಮೋದಿ ಹತ್ತು ವರ್ಷ ಪ್ರಧಾನಿಯಾಗಿದ್ದರೂ ಬಡವರು, ಯುವಕರು, ದಲಿತರು, ಅಲ್ಪಸಂಖ್ಯಾತರ ಪರ ಕೆಲಸ ಮಾಡಿಲ್ಲ. ಬೆಲೆಯೇರಿಕೆ, ನಿರುದ್ಯೋಗ, ರೈತರ ಸಮಸ್ಯೆಗಳ ಬಗ್ಗೆ ಪ್ರಧಾನಿಗಳು ಚರ್ಚಿಸುವುದಿಲ್ಲ. ಈ ಬಾರಿ ಮೊದಲ ಹಂತದ ಚುನಾವಣೆಯಲ್ಲಿ ಅವರು ನಿರೀಕ್ಷಿಸಿದ ಮತಗಳು ಬರುವುದಿಲ್ಲ. ಹಾಗಾಗಿ ಹತಾಶರಾಗಿದ್ದು, ಸಂಬಂಧಪಡದ ಅನೇಕ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದು ಟೀಕಿಸಿದರು.
ಮುಸ್ಲಿಮರಿಗೆ ಮೀಸಲಾತಿ: ಸಂವಿಧಾನದ 15 ಮತ್ತು 16ನೇ ಕಲಂನಲ್ಲಿ ಸ್ಪಷ್ಟವಾಗಿ ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕೆಂದು ಹೇಳಲಾಗಿದೆ. ಅದರಲ್ಲಿ ಹಿಂದುಗಳು ಹಾಗೂ ಮುಸ್ಲಿಂ, ಕ್ರಿಶ್ಚಿಯನ್ ಹಾಗೂ ಎಲ್ಲರೂ ಬರುತ್ತಾರೆ. ಮುಸ್ಲಿಮರಿಗೆ ಮೀಸಲಾತಿ ಕೊಡಲಾಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹಿಂದುಗಳ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ಕೊಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಒಬ್ಬ ಪ್ರಧಾನಮಂತ್ರಿಯಾಗಿ ಈ ರೀತಿ ಮಾತನಾಡಿ ಸ್ಥಾನಕ್ಕೆ ಚ್ಯುತಿ ತರುವ ಕೆಲಸ ಮಾಡುತ್ತಿದ್ದಾರೆ ಎಂದರು.
ಹಾವನೂರು, ಚಿನ್ನಪ್ಪ ರೆಡ್ಡಿ ಆಯೋಗ: 1977ರಲ್ಲಿ ಹಾವನೂರು ಆಯೋಗ ಅಲ್ಪಸಂಖ್ಯಾತರಿಗೆ ಮೀಸಲಾತಿ ಕೊಡಬೇಕೆಂದು ಶಿಫಾರಸು ಮಾಡಿದೆ. ಚಿನ್ನಪ್ಪ ರೆಡ್ಡಿ ಆಯೋಗವೂ ಇದನ್ನೇ ಶಿಫಾರಸು ಮಾಡಿತ್ತು. 2004ನಲ್ಲಿ ಕರ್ನಾಟಕದಲ್ಲಿ ಮುಸಲ್ಮಾನರಿಗೆ ಮೀಸಲಾತಿಯನ್ನು 2 ಬಿ ಅಡಿ ಪ್ರಾರಂಭಿಸಲಾಯಿತು. 4% ಮೀಸಲಾತಿಯನ್ನು ಕೊಡಲು ಪ್ರಾರಂಭಿಸಲಾಯಿತು. 94ರಿಂದ ಈವರೆಗೆ ಮೀಸಲಾತಿ ಹಾಗೆಯೇ ಉಳಿದುಕೊಂಡು ಬಂದಿದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಮುಸಲ್ಮಾನರ 4% ಮೀಸಲಾತಿ ತೆಗೆದುಹಾಕಿದರು. ಅದರ ವಿರುದ್ಧ ಮುಸಲ್ಮಾನ ಮುಖಂಡರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಹಾಕಿ, ಬಿಜೆಪಿಯವರು ಅಫಿಡವಿಟ್ ಹಾಕಿ ಯಥಾಸ್ಥಿತಿ ಮುಂದುವರೆಸುತ್ತೇವೆ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ ಎಂದು ಹೇಳಿದರು.
ಇದನ್ನೂಓದಿ: ಚಿಕ್ಕಬಳ್ಳಾಪುರ: ಒಂದೇ ಕುಟುಂಬದ 85ಕ್ಕೂ ಹೆಚ್ಚು ಮಂದಿಯಿಂದ ಏಕಕಾಲಕ್ಕೆ ಮತದಾನ - Lok Sabha Election