ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಸೇರಿದಂತೆ ರಾಜ್ಯ ಸರ್ಕಾರದ ವಿವಿಧ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಸುಮಾರು 50 ಸಾವಿರ ಕೋಟಿ ಮೊತ್ತದ ಅವ್ಯವಹಾರ ಪ್ರಕರಣಗಳನ್ನು ಕೇಂದ್ರ ತನಿಖಾ ಸಂಸ್ಥೆಯ (ಸಿಬಿಐ) ತನಿಖೆಗೆ ಆದೇಶಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ಮೈಸೂರಿನ ಕೆ.ಆರ್.ನಗರದ ವಕೀಲ ಸಿ.ಸಂತೋಷ್ ಈ ಅರ್ಜಿ ಸಲ್ಲಿಸಿದವರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಪ್ರತಿವಾದಿ ಮಾಡಿದ್ದಾರೆ. ವಿಚಾರಣೆ ಇನ್ನಷ್ಟೇ ನಿಗದಿಯಾಗಬೇಕಿದೆ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ಹಣ ಅವ್ಯವಹಾರವಾಗಿದೆ. ಹಾಗೆಯೇ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 5 ಸಾವಿರ ಕೋಟಿ ರೂ, ಹಗರಣ ನಡೆದಿದೆ. ರಾಜ್ಯದ ವಿವಿಧ ಇಲಾಖೆಯಲ್ಲಿ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ನಡೆದಿದ್ದು, ಬೊಕ್ಕಸಕ್ಕೆ ನಷ್ಟ ಉಂಟಾಗಿದೆ. ಈ ಕುರಿತು ವಿದ್ಯುನ್ಮಾನ ಮಾಧ್ಯಮಗಳು, ಪತ್ರಿಕೆ, ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ರಾಜ್ಯ ಆಡಳಿತ ಪಕ್ಷದ ನಾಯಕರು ಹಾಗೂ ಅಧಿಕಾರಿಗಳು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಪ್ರತಿಪಕ್ಷದ ನಾಯಕರು ಆರೋಪಿಸುತ್ತಿದ್ದಾರೆ. ಖುದ್ದು ಮುಖ್ಯಮಂತ್ರಿಗಳು, ವಿವಿಧ ಇಲಾಖೆಗಳಲ್ಲಿ ಅವ್ಯವಹಾರ ನಡೆದಿದೆ ಎಂಬುದಾಗಿ ವಿಧಾನಮಂಡಲದ ಅಧಿವೇಶನದಲ್ಲಿ ಹೇಳಿದ್ದಾರೆ. ಆದರೆ, ಆ ಹಗರಣಗಳಲ್ಲಿ ಆಳ ತಿಳಿಯಲು ಯಾವುದೇ ಕ್ರಮ ಜರುಗಿಸಲಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
ಅಲ್ಲದೆ, 2015ರಲ್ಲಿ ನೀರಾವರಿ ಯೋಜನೆ ಅಕ್ರಮದಲ್ಲಿ 40 ಕೋಟಿ ರೂ. 2019 ರಿಂದ 23ರ ಅವಧಿಯಲ್ಲಿ ಕಿಯೋನಿಕ್ಸ್‌ನಲ್ಲಿ 500 ಕೋಟಿ, ಕೋವಿಡ್-19 ಹೆಸರಿನಲ್ಲಿ 40 ಸಾವಿರ ಕೋಟಿ, ಪಿಎಸ್‌ಐ ನೇಮಕಾತಿಯಲ್ಲಿ 100 ಕೋಟಿ, ಸರ್ಕಾರಿ ಗುತ್ತಿಗೆ ಮಂಜೂರಾತಿಯಲ್ಲಿ ಶೇ.40 ಕಮಿಷನ್ನಿಂದ 2 ಸಾವಿರ ಕೋಟಿ, 2020-21ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯಲ್ಲಿ 200 ಕೋಟಿ.
ಎಪಿಎಂಸಿಯಲ್ಲಿ 47.16, ಭೋವಿ ಅಭಿವೃದ್ಧಿ ನಿಗಮದಲ್ಲಿ 87, ಗಂಗಾ ಕಲ್ಯಾಣ ಯೋಜನೆಯಲ್ಲಿ 430 ಕೋಟಿ, ಬಿಟ್‌ಕಾಯಿನ್ ಹಗರಣದಲ್ಲಿ 1 ಸಾವಿರ ಕೋಟಿ, ಬಿ. ಎಸ್ ಯಡಿಯೂರಪ್ಪ ಅಕ್ರಮ ಸಂಪಾದನೆ 750 ಕೋಟಿ, ನಾಲ್ಕು ವೈದ್ಯಕೀಯ ಕಾಲೇಜು ಹಗರಣದಲ್ಲಿ 300 ಕೋಟಿ, 2022-23ನೇ ಸಾಲಿನಲ್ಲಿ ದೇವರಾಜು ಅರಸ್ ಟ್ರಕ್ ಟರ್ಮಿನಲ್ನಲ್ಲಿ 50 ಕೋಟಿ ಹಣ ಮತ್ತು ಚಾಮರಾಜನಗರ ಆಸ್ಪತ್ರೆಯಲ್ಲಿ ರೋಗಿಗಳ ಸಾವಿನಲ್ಲಿ ಕೋಟ್ಯಂತರ ಹಣದ ಅವ್ಯವಹಾರ ನಡೆದಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಈ ಹಗರಣಗಳ ಸಂಬಂಧ ಕಾನೂನು ಕ್ರಮ ಜರುಗಿಸುವುದು ಸರ್ಕಾರದ ಸಾಂವಿಧಾನಿಕ ಕರ್ತವ್ಯವಾಗಿದೆ. ಎಲ್ಲಾ ಪಕ್ಷದ ಮುಖಂಡರು ಪರಸ್ಪರ ಆರೋಪ ಮಾಡುವ ಮೂಲಕ ಈ ಎಲ್ಲಾ ಹಗರಣಗಳನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ. ಈ ಹಗರಣಗಳ ಸತ್ಯಾಂಶವನ್ನು ತಿಳಿಯಲು ಸ್ವತಂತ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವುದು ಅಗತ್ಯವಿದೆ. ತಪ್ಪಿತಸ್ಥರು ಕಂಡುಬಂದಲ್ಲಿ ಅವರನ್ನು ಶಿಕ್ಷಿಸಬೇಕಿದೆ.
ಅವ್ಯವಹಾರದಿಂದ ದೋಚಿರುವ ಸಾರ್ವಜನಿಕ ಹಣ ಹಾಗೂ ಆಸ್ತಿಯನ್ನು ಮರಳಿ ಸರ್ಕಾರದ ಸುಪರ್ದಿಗೆ ಪಡೆಯಬೇಕಿದೆ. ಈ ಅವ್ಯವಹಾರವನ್ನು ತಡೆಯದೆ ಹಾಗೂ ಪರಿಶೀಲಿಸದೆ ಹೋದರೆ ರಾಜ್ಯದ ಅಮಾಯಕ ಪ್ರಜೆಗಳಿಗೆ ದೊಡ್ಡ ನಷ್ಟ ಉಂಟಾಗಲಿದೆ. ಸಿಬಿಐ ತನಿಖೆ ನಡೆಸಿದರೆ ಭವಿಷ್ಯದಲ್ಲಿ ಸರ್ಕಾರದ ಸಂಪತ್ತು ರಕ್ಷಣೆಯಾಗಲಿದೆ. ಆದ್ದರಿಂದ ಈ ಎಲ್ಲಾ ಹಗರಣಗಳ ಕುರಿತು ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ಸತ್ಯನಾರಾಯಣ ವರ್ಮಾ ಇಡಿ ವಶಕ್ಕೆ ನೀಡಲು ಹೈಕೋರ್ಟ್ ಆದೇಶ - High Court