ಬೆಂಗಳೂರು/ಬೆಳಗಾವಿ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯ ಪ್ರದೇಶಗಳಲ್ಲಿ ಅತಿಹೆಚ್ಚು ಮಳೆಯಿಂದಾಗುವ ಹಾನಿ ತಡೆಗಟ್ಟಲು ಒಟ್ಟು 5,000 ಕೋಟಿ ರೂ.ಗಳ ಶಾಶ್ವತ ಯೋಜನೆ ರೂಪಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇ ಗೌಡ ಹೇಳಿದ್ದಾರೆ.
ಪ್ರಸಕ್ತ ವರ್ಷ ರಾಜ್ಯದಲ್ಲಿ ಅಧಿಕ ಮಳೆಯಿಂದ ಉಂಟಾದ ಹಾನಿ ಕುರಿತಂತೆ ವಿಧಾನಸಭೆಯಲ್ಲಿ ಇಂದು ಅವರು ಹೇಳಿಕೆ ನೀಡಿದರು.
ಬೆಂಗಳೂರು ವ್ಯಾಪ್ತಿಯಲ್ಲಿ ಅತಿಹೆಚ್ಚು ಮಳೆ ಸುರಿದಾಗ ಪದೇ ಪದೇ ಹಾನಿಗೊಳಗಾಗುವ ಪ್ರದೇಶಗಳನ್ನು ಗುರುತಿಸಲಾಗಿದೆ. ಮಳೆ ಸುರಿದ ಸಂದರ್ಭದಲ್ಲಿ ನೀರು ಸರಾಗವಾಗಿ ಹರಿಯುವಂತೆ ರಾಜಕಾಲುವೆ ಹಾಗೂ ವಸತಿ ಪ್ರದೇಶದಲ್ಲಿನ ಕಾಲುವೆಗಳನ್ನು ಪರಿಪಕ್ವವಾಗಿ ಸುಧಾರಿಸಲು ಕ್ರಮ ವಹಿಸಲಾಗಿದೆ. ಈ ವ್ಯಾಪ್ತಿಯಲ್ಲಿ 856 ಕಿ.ಮೀ ರಾಜಕಾಲುವೆಗಳಿದ್ದು, ರಾಜಕಾಲುವೆ ಇಲ್ಲದ ಕಡೆ 200 ಕಿ.ಮೀ ಕಿರು ಕಾಲುವೆಗಳು ಸೇರಿದಂತೆ ಒಟ್ಟು 1,100 ಕಿ.ಮೀ ಕಾಲುವೆಗಳಲ್ಲಿ ಹೆಚ್ಚಿನ ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಲು ಶಾಶ್ವತ ಯೋಜನೆಯನ್ನು ರೂಪಿಸಲಾಗಿದೆ. ಈಗಾಗಲೇ 700 ಕಿ.ಮೀ. ಅಭಿವೃದ್ಧಿಪಡಿಸಲಾಗಿದ್ದು, ಇನ್ನೂ 300 ಕಿ.ಮೀ. ರಾಜಕಾಲುವೆಯನ್ನು ಬರುವ ಒಂದು ವರ್ಷದ ಅವಧಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದಕ್ಕಾಗಿ ಡಿಸಾಸ್ಟರ್ ಮಿಟಿಗೇಶನ್ ಫಂಡ್ನಡಿ 240 ಕೋಟಿ ರೂ. ಒದಗಿಸಲಾಗುತ್ತಿದೆ ಎಂದರು.
ರಾಜಕಾಲುವೆಗಳ ಅಭಿವೃದ್ದಿಗೆ 3 ಸಾವಿರ ಕೋಟಿ ರೂ: ಬೆಂಗಳೂರಿನಲ್ಲಿ ಮಳೆ ಬಂದಾಗ ಪ್ರವಾಹ ತಡೆಗಟ್ಟುವ ನಿಟ್ಟಿನಲ್ಲಿ 5 ಸಾವಿರ ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ಪರಿಹಾರ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ ಎಂದು ಹೇಳಿದರು.
ಬೃಹತ್ ಬೆಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮಳೆಯಿಂದಾಗುವ ಹಾನಿ ತಡೆಗಟ್ಟಲು ಒಂದು ಬಾರಿಯ ಶಾಶ್ವತ ಕಾಮಗಾರಿ ಕೈಗೊಳ್ಳಲು ವಿಶ್ವಬ್ಯಾಂಕ್ ನೆರವು ಪಡೆಯುವ ನಿಟ್ಟಿನಲ್ಲಿ ಈಗಾಗಲೆ 10 ಸುತ್ತಿನ ಸಭೆಗಳನ್ನು ನಡೆಸಲಾಗಿದೆ. ವಿಶ್ವಬ್ಯಾಂಕ್‌ನಿಂದ 3,000 ಕೋಟಿ ರೂ. ಸಾಲ ಪಡೆದು, ಬಿಬಿಎಂಪಿ ಮೂಲಕ 2,000 ಕೋಟಿ ರೂ. ವೆಚ್ಚದಲ್ಲಿ ಎಲ್ಲ ರಾಜಕಾಲುವೆಗಳನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ ಎಂದರು.
ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳಲ್ಲಿ ಒಳಚರಂಡಿ ವ್ಯವಸ್ಥೆ ಇರದ ಕಡೆ ಒಳಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ರೂಪಿಸಿ, ಸದರಿ ಒಳಚರಂಡಿ ನೀರು ನೇರವಾಗಿ ಸೀವೆಜ್ ಟ್ರೀಟ್‌ಮೆಂಟ್ ವಾಟರ್ ಲೈನ್‌ಗೆ ಸೇರ್ಪಡೆಯಾಗುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಈ ಕಾರ್ಯಕ್ಕೆ ಬೆಂಗಳೂರು ಜಲಮಂಡಳಿಗೆ 1 ಸಾವಿರ ಕೋಟಿ ರೂ.ಗಳನ್ನು ಒದಗಿಸಲಾಗುತ್ತಿದೆ. ಇನ್ನಿತರೆ ಕಾಮಗಾರಿಗಳಿಗಾಗಿ 2 ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡಲು ನಿರ್ಧರಿಸಲಾಗಿದೆ ಎಂದು ಸಚಿವರು ವಿವರಿಸಿದರು.
ಇನ್ನುಳಿದ, 2,000 ಕೋಟಿ ರೂ. ಗಳನ್ನು ರಾಜ್ಯ ಸರ್ಕಾರ ಭರಿಸಲು ನಿರ್ಧರಿಸಲಾಗಿದೆ. ಬೆಂಗಳೂರಿನಲ್ಲಿ ಮಳೆಯಿಂದ ಪದೇ ಪದೇ ಹಾನಿಗೀಡಾಗುವ ಪ್ರಮುಖ ರಸ್ತೆಗಳನ್ನು ಗುರುತಿಸಲಾಗಿದ್ದು, ಇಂತಹ ರಸ್ತೆಗಳನ್ನು ದುರಸ್ತಿಪಡಿಸಿ, ಡಾಂಬರೀಕರಣಗೊಳಿಸಲು 695 ಕೋಟಿ ರೂ. ಗಳ ಯೋಜನೆ ರೂಪಿಸಿ, ಸಚಿವ ಸಂಪುಟದ ಅನುಮೋದನೆ ಪಡೆದು ಈಗಾಗಲೇ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಒಟ್ಟಾರೆ ಬೆಂಗಳೂರಿನಲ್ಲಿ ಅತಿಯಾದ ಮಳೆಯಾದಾಗ ಹಾನಿಯಾಗುವುದನ್ನು ತಡೆಗಟ್ಟಲು ಸರ್ಕಾರ ಶಾಶ್ವತವಾದ ಯೋಜನೆಗಳನ್ನು ರೂಪಿಸಿದ್ದು, ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.