ನನ್ನ ಸಾಮರ್ಥ್ಯ ರಾಜ್ಯದ ಜನತೆಗೆ ಗೊತ್ತಿದೆ: ಗೃಹ ಸಚಿವ ಪರಮೇಶ್ವರ್ - Home Minister Parameshwar - HOME MINISTER PARAMESHWAR
ಸರ್ಕಾರದಲ್ಲಿ ನನಗೆ ನೀಡಲಾದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತಿದ್ದೇನೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
Published : Sep 13, 2024, 10:13 PM IST
ಬೆಂಗಳೂರು: ''ಸರ್ಕಾರದ ಮತ್ತು ತನಿಖಾ ಸಂಸ್ಥೆಗಳ ಹಂತದಲ್ಲಿ ಚಾಲ್ತಿಯಲ್ಲಿರುವ ವಿವಿಧ ಹಗರಣಗಳ ತನಿಖೆಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಇಲಾಖಾವಾರು ಪರಿಶೀಲನೆ ನಡೆಸಲಾಗಿದೆ'' ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದರು.
ವಿಧಾನಸೌಧ ಸಮಿತಿ ಕೊಠಡಿಯಲ್ಲಿ ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಇದು ಮೊದಲ ಸಭೆಯಾಗಿರುವುದರಿಂದ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಎಲ್ಲ ಪ್ರಕರಣಗಳನ್ನು ಪರಿಶೀಲಿಸಿದ್ದೇವೆ. ಹೊಸದಾಗಿ ತನಿಖೆ ಆಗಬೇಕಿರುವುದನ್ನು ಗಮನಿಸಿದ್ದೇವೆ. ಎರಡು ತಿಂಗಳೊಳಗೆ ಪೂರ್ಣಗೊಳಿಸಿ, ಸಚಿವ ಸಂಪುಟಕ್ಕೆ ವರದಿ ಸಲ್ಲಿಸುತ್ತೇವೆ'' ಎಂದರು.
ನನ್ನ ಸಾಮರ್ಥ್ಯ ರಾಜ್ಯದ ಜನತೆಗೆ ಗೊತ್ತಿದೆ: ''ಪ್ರತಿಪಕ್ಷಗಳ ನಾಯಕರ ಹೇಳಿಕೆಗಳಿಗೆ ನಾನು ಏನನ್ನು ಹೇಳಲು ಹೋಗುವುದಿಲ್ಲ. ಅವರು ಏನೇ ಹೇಳಿದರೂ ಕೆರಳುವುದಿಲ್ಲ. ಸರ್ಕಾರದಲ್ಲಿ ನನಗೆ ಕೊಟ್ಟ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತಿದ್ದೇನೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿರಬೇಕು. ಆ ಕೆಲಸವನ್ನು ಮಾಡುತ್ತಿದ್ದೇನೆ. ನನಗೆ ಇದೆಲ್ಲ ಹೊಸತೇನಲ್ಲ. ಮೂರು ಬಾರಿ ಗೃಹ ಸಚಿವನಾಗಿ ಕೆಲಸ ಮಾಡಿದ್ದೇನೆ. ನನ್ನ ಸಾಮರ್ಥ್ಯ ರಾಜ್ಯದ ಜನತೆಗೆ ಗೊತ್ತಿದೆ. ನಾನು ಯಾವ ಇಲಾಖೆಯನ್ನು ನಿಭಾಯಿಸಿದ್ದೇನೆ, ಎಲ್ಲ ಸಂದರ್ಭದಲ್ಲಿ ಕೂಡ ನನ್ನ ಸಾಮರ್ಥ್ಯ ಆಯಾ ಇಲಾಖೆಯವರಿಗೆ ಗೊತ್ತಾಗಿದೆ'' ಎಂದು ಹೇಳಿದರು.
''ನಾವೇನು ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಕಾನೂನು ಬಾಹಿರವಾಗಿ ಕೆಲವು ಪ್ರಕರಣಗಳು ನಡೆದಿವೆ. ಅದನ್ನು ಜನರಿಗೆ ತಿಳಿಸಲು ಚರ್ಚಿಸುತ್ತೇವೆ ಅಂದ ತಕ್ಷಣ ದ್ವೇಷದ ರಾಜಕಾರಣ ಎನ್ನುತ್ತಿದ್ದಾರೆ. ಕೆಲವು ಹಗರಣಗಳ ತನಿಖೆ ಮುಡಾಕ್ಕಿಂತ ಮುಂಚೆಯೇ ನಡೆಯುತ್ತಿವೆ'' ಎಂದರು.
ಗುಪ್ತಚರ ದಳಕ್ಕೆ ಹೇಮಂತ್ ನಿಂಬಾಳ್ಕರ್ ವರ್ಗಾವಣೆ ಕುರಿತು ಪ್ರತಿಕ್ರಿಯಿಸಿ, ''ಗುಪ್ತಚರ ದಳ ಇಲಾಖೆ ಮುಖ್ಯಮಂತ್ರಿಯವರಿಗೆ ಬರುತ್ತದೆ. ಅವರು ತೀರ್ಮಾನ ತೆಗೆದುಕೊಂಡಿದ್ದಾರೆ. ಯಾರ ಮೇಲೆ ಕಾನ್ಫಿಡೆನ್ಸ್ ಇರುತ್ತದೆಯೋ ಅಂತವರನ್ನು ತೆಗೆದುಕೊಂಡಿರುತ್ತಾರೆ'' ಎಂದು ಹೇಳಿದರು.
ಅಕ್ಟೋಬರ್ 3ಕ್ಕೆ ಪಿಎಸ್ಐ ಪರೀಕ್ಷೆ: ''ಸೆಪ್ಟೆಂಬರ್ 22ರಂದು ನಡೆಸಲು ನಿಗದಿಯಾಗಿದ್ದ 402 ಪಿಎಸ್ಐ ಹುದ್ದೆಗಳ ಪರೀಕ್ಷೆಯನ್ನು ಮುಂದೂಡುವಂತೆ ಒತ್ತಾಯ ಕೇಳಿ ಬಂದಿತ್ತು. ಕೆಇಎ ಅವರೊಂದಿಗೆ ಚರ್ಚಿಸಿ, ಸೆಪ್ಟೆಂಬರ್ 28ರಂದು ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಆ ದಿನವೂ ಯುಪಿಎಸ್‌ಸಿ ಇಂಗ್ಲೀಷ್ ಕಡ್ಡಾಯ ಪರೀಕ್ಷೆ ಇರುವುದರಿಂದ, ಬಳಿಕ ಅಕ್ಟೋಬರ್ 3ರಂದು ನಡೆಸಲು ನಿರ್ಧರಿಸಲಾಗಿದೆ. ಕೆಇಎಯವರು ಅಧಿಕೃತವಾಗಿ ಪ್ರಕಟಣೆ ಮಾಡಲಿದ್ದಾರೆ'' ಎಂದು ತಿಳಿಸಿದರು.
ಇದನ್ನೂ ಓದಿ: ನಾಗಮಂಗಲ ಘಟನೆ: ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಎನ್.ರವಿಕುಮಾರ್ ಒತ್ತಾಯ - Nagamangala Incident